ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಬಂಧನದ ನಂತರ ಸ್ವತಂತ್ರ ಸಾಕ್ಷಿ ಕಿರಣ್ ಗೋಸಾವಿ ಮತ್ತು ಬಾಲಿವುಡ್ ನಟ ಶಾರುಖ್ ಖಾನ್ ಅವರ ವ್ಯವಸ್ಥಾಪಕಿ ಪೂಜಾ ದದ್ಲಾನಿ ನಡುವೆ ಮಧ್ಯವರ್ತಿಯಾಗಿದ್ದ ಸ್ಯಾಮ್ ಡಿಸೋಜಾ ಜಾಮೀನು ಮನವಿಯನ್ನು ಬುಧವಾರ ಬಾಂಬೆ ಹೈಕೋರ್ಟ್ ವಜಾ ಮಾಡಿದೆ.
ಹೈಕೋರ್ಟ್‌ಗೆ ಬರುವುದಕ್ಕೂ ಮುನ್ನ ಪಕ್ಷಕಾರರು ಸೆಷನ್ಸ್ ನ್ಯಾಯಾಲಯದಲ್ಲಿ ಪರಿಹಾರ ಕೋರಿಲ್ಲ ಎಂದು ನ್ಯಾಯಮೂರ್ತಿ ಎಸ್ ಪಿ ತಾವಡೆ ನೇತೃತ್ವದ ರಜಾಕಾಲದ ಏಕಸದಸ್ಯ ಪೀಠವು ಹೇಳಿದೆ.
ಖಾನ್ ಬಳಿ ಮಾದಕ ವಸ್ತು ಇರಲಿಲ್ಲ. ಅವರು ಮುಗ್ಧರಾಗಿದ್ದಾರೆ ಎಂದು ಡಿಸೋಜಾಗೆ ಗೋಸಾವಿ ಹೇಳಿದ್ದಾರೆ. ಖಾನ್‌ಗೆ ಪರಿಹಾರ ಕೊಡಿಸುವ ಉದ್ದೇಶದಿಂದ ಗೋಸಾವಿ ಅವರು ದದ್ಲಾನಿ ಅವರನ್ನು ಭೇಟಿ ಮಾಡಲು ಬಯಸಿದ್ದರು ಎಂದು ಡಿಸೋಜಾ ಅವರು ಲೆಕ್ಸ್ ರೆಕ್ಸ್ ಜೂರಿಸ್ಟ್ಸ್ ಮೂಲಕ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.
ದದ್ಲಾನಿ ಮತ್ತು ಗೋಸಾವಿ ಭೇಟಿ ಮಾಡಿದ ಬಳಿಕ ಅವರಿಬ್ಬರ ನಡುವಿನ ಸಮಾಲೋಚನೆ ಬಗ್ಗೆ ತಿಳಿದಿಲ್ಲ. ಈ ಸಂದರ್ಭದಲ್ಲಿ ತನ್ನನ್ನು ಅಲ್ಲಿಂದ ಹೊರಹೋಗುವಂತೆ ಹೇಳಲಾಗಿತ್ತು ಎಂದು ಡಿಸೋಜಾ ತಿಳಿಸಿದ್ದಾರೆ. ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಗೋಸಾವಿ ಅವರ ಅಂಗರಕ್ಷಕ ಪ್ರಭಾಕರ್ ಸೈಲ್ ಅವರು ಅಫಿಡವಿಟ್ ಸಲ್ಲಿಸಿದ್ದಾರೆ ಎಂಬುದು ಪತ್ರಿಕೆಗಳ ಮೂಲಕ ಡಿಸೋಜಾ ಗಮನಕ್ಕೆ ಬಂದಿತ್ತು ಎನ್ನಲಾಗಿದೆ. ಗೋಸಾವಿ ಮತ್ತು ಸೈಲ್ ಅವರು ಪ್ರಮುಖ ಪಿತೂರಿಕಾರರು ಎಂದು ಡಿಸೋಜಾ ಹೇಳಿದ್ದಾರೆ.
ಗೋಸಾವಿ ವಂಚಕ ಎಂಬುದು ಡಿಸೋಜಾಗೆ ತಿಳಿದ ಬಳಿಕ ಅವರಿಗೆ ನೀಡಿರುವ ಹಣವನ್ನು ಹಿಂಪಡೆದು ದದ್ಲಾನಿಗೆ ಮರಳಿಸುವುದು ಡಿಸೋಜಾ ಅವರ ಏಕೈಕ ಉದ್ದೇಶವಾಗಿತ್ತು. ಗೋಸಾವಿಯ ಅಂಗರಕ್ಷಕ ₹50 ಲಕ್ಷ ತೆಗೆದುಕೊಂಡಿದ್ದರು ಎನ್ನುವ ಮಾಹಿತಿಯನ್ನು ಅಫಿಡವಿಟ್ ಮೂಲಕ ತಿಳಿದುಕೊಂಡಿದ್ದ ಡಿಸೋಜಾ ಅವರು ಗೋಸಾವಿ ಮತ್ತು ಸುನಿಲ್ ಪಾಟೀಲ್ ಎಂಬಾತನನ್ನು ಭೇಟಿಯಾಗಿದ್ದರು ಎಂಬುದು ಅಫಿಡವಿಟ್‌ನಿಂದ ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿನ ಆಡಳಿತಾರೂಢ ಸರ್ಕಾರದ ಕೆಲವು ರಾಜಕಾರಣಿಗಳು ಡಿಸೋಜಾ ಹೆಸರನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದರಿಂದ ಗೋಸಾವಿ ವಿರುದ್ಧದ ದೂರಿನ ಹಿನ್ನೆಲೆಯಲ್ಲಿ ತನ್ನನ್ನು ವಿಶೇಷ ತನಿಖಾ ತಂಡವು ಬಂಧಿಸಬಹುದು ಎಂಬ ಆತಂಕವನ್ನು ಡಿಸೋಜಾ ವ್ಯಕ್ತಪಡಿಸಿದ್ದರು. ಹೀಗಾಗಿ, ಹೈಕೋರ್ಟ್ ಮೆಟ್ಟಿಲೇರಿರುವುದಾಗಿ ಡಿಸೋಜಾ ಹೇಳಿದ್ದಾರೆ.
ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ತಾನು ಸಿದ್ಧವಿದ್ದು, ಈ ಸಂಬಂಧ ನಿರೀಕ್ಷಣಾ ಜಾಮೀನು ನೀಡುವಂತೆ ಅವರು ಕೋರಿದ್ದಾರೆ. ರಾತ್ರಿ 9.30ರ ಸುಮಾರಿಗೆ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಮನವಿಯನ್ನು ವಜಾ ಮಾಡಿದೆ.