Aryan Khan, NCB  
ಸುದ್ದಿಗಳು

ಆರ್ಯನ್‌ ಪ್ರಕರಣ: ಎನ್‌ಸಿಬಿ ವಶಕ್ಕೆ ಒಪ್ಪಿಸಿರುವುದು ಮುಗ್ಧತೆಯ ಸಾಬೀತಿಗೂ ಅನುಕೂಲಕರ ಎಂದ ಮುಂಬೈ ಕೋರ್ಟ್‌

ಪ್ರಾಥಮಿಕ ಹಂತದಲ್ಲಿ ತನಿಖೆ ಅತ್ಯಂತ ಮುಖ್ಯವಾಗಿದ್ದು ಈ ಹಂತದಲ್ಲಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಆರ್ಯನ್ ಖಾನ್ ಅವರನ್ನು ವಶಕ್ಕೆ ಒಪ್ಪಿಸಿದ ವೇಳೆ ನ್ಯಾಯಾಧೀಶರರು ತಿಳಿಸಿದ್ದಾರೆ.

Bar & Bench

ವಿಲಾಸಿ ಕ್ರೂಸ್‌ ಹಡಗಿನ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಮತ್ತಿತರ ಆರೋಪಿಗಳನ್ನು ಮಾದಕವಸ್ತು ನಿಯಂತ್ರಣ ದಳದ ವಶಕ್ಕೆ ಒಪ್ಪಿಸಿದ ಸಂದರ್ಭದಲ್ಲಿ ಮುಂಬೈ ನ್ಯಾಯಾಲಯವು ಹೀಗೆ ವಶಕ್ಕೆ ಒಪ್ಪಿಸಿರುವುದು ಪ್ರಾಸಿಕ್ಯೂಷನ್‌ಗೆ ಮಾತ್ರವಲ್ಲದೆ ತಮ್ಮ ಮುಗ್ಧತೆ ಸಾಬೀತುಪಡಿಸಲು ಆರೋಪಿಗಳಿಗೆ ಕೂಡ ಅನುಕೂಲಕರವಾಗಲಿದೆ ಎಂದು ತನ್ನ ಆದೇಶದಲ್ಲಿ ಹೇಳಿದೆ.

ಆರ್ಯನ್‌ ವಿರುದ್ಧದ ಆರೋಪಗಳನ್ನು ಪರಿಗಣಿಸಿದ ಬಳಿಕ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಎಂ ನೇರ್ಳೀಕರ್‌ ಅವರು ಸಹ ಆರೋಪಿಗಳೊಂದಿಗೆ ಆರ್ಯನ್‌ ಅವರನ್ನು ಮುಖಾಮುಖಿಯಾಗಿಸಿ ಸಂಗ್ರಹಿಸಿದ ಮಾಹಿತಿಯನ್ನು ಪರಾಮರ್ಶಿಸಲು ತನಿಖೆ ಅತ್ಯಗತ್ಗ ಎಂದು ಹೇಳಿದರು.

ಮಧ್ಯಮ ಪ್ರಮಾಣದ ಮಾದಕವಸ್ತು ಹೊಂದಿದ್ದರೂ ಆರ್ಯನ್‌ ಜೊತೆಗೆ ಕೆಲ ಆರೋಪಿಗಳನ್ನು ಹಾಜರುಪಡಿಸದೇ ಇರುವುದನ್ನು ಗಮನಿಸಿದ ನ್ಯಾಯಾಲಯ ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆದೇಶದ 6ನೇ ಪುಟದಲ್ಲಿ ತಿಳಿಸಿದೆ.

ಅರ್ಯನ್‌ ಜೊತೆ ಹಾಜರುಪಡಿಸದೆ ಇದ್ದ ಇತರ ಆರೋಪಿಗಳು "ಮಧ್ಯಮ ಪ್ರಮಾಣ"ದ ಮಾದಕವಸ್ತುಗಳನ್ನು ಹೊಂದಿದ್ದ ಬಗ್ಗೆಯೂ ಗಮನಹರಿಸಿದ ನ್ಯಾಯಾಲಯವು ಈ ಅಂಶವು ಗಂಭೀರ ತನಿಖೆಯನ್ನು ಬೇಡುತ್ತದೆ ಎಂದು ಅಭಿಪ್ರಾಯಪಟ್ಟಿತು.

“ತನಿಖೆ ಆರಂಭಿಕ ಹಂತದಲ್ಲಿದ್ದು ರಿಮಾಂಡ್‌ ರಿಪೋರ್ಟ್‌ನಲ್ಲಿ ಹೇಳಿರುವ ಕಾರಣಗಳಿಗಾಗಿ ತುಂಬಾ ಮುಖ್ಯವಾದುದಾಗಿದೆ. ವಿವರವಾದ ತನಿಖೆಗಾಗಿ ಆರೋಪಿಗಳು ಎನ್‌ಸಿಬಿಯೊಂದಿಗೆ ಇರುವುದು ಅಗತ್ಯವಾಗಿದೆ. ವಶಕ್ಕೆ ಒಪ್ಪಿಸಿರುವುದು ಪ್ರಾಸಿಕ್ಯೂಷನ್‌ಗೆ ಮಾತ್ರವಲ್ಲದೆ ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ಆರೋಪಿಗಳಿಗೆ ಕೂಡ ಅನುಕೂಲಕರವಾಗಲಿದೆ. ಈ ಅಂಶವನ್ನು ಪರಿಗಣಿಸಿ ಆರೋಪಿಗಳನ್ನು ವಶಕ್ಕೆ ಒಪ್ಪಿಸಲಾಗಿದೆ” ಎಂದು ಮ್ಯಾಜಿಸ್ಟ್ರೇಟ್‌ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಆದೇಶವನ್ನು ಇಲ್ಲಿ ಓದಿ:

Aryankhan.pdf
Preview