ಆರ್ಯನ್‌ ಖಾನ್‌ ಅ. 7ರವರೆಗೆ ಎನ್‌ಸಿಬಿ ವಶಕ್ಕೆ: ಡ್ರಗ್ಸ್‌ ಪ್ರಕರಣದಲ್ಲಿ ಮುಂಬೈ ನ್ಯಾಯಾಲಯ ಆದೇಶ

ಮೊಬೈಲ್ ಹೊರತುಪಡಿಸಿ ಬೇರೇನನ್ನೂ ವಶಪಡಿಸಿಕೊಂಡಿರುವುದನ್ನು ಪಂಚನಾಮೆ ಸೂಚಿಸುವುದಿಲ್ಲ ಎಂದು ಆರ್ಯನ್ ಪರ ವಕೀಲರು ವಾದ ಮಂಡಿಸಿದ್ದರು.
NCB, Aryan Khan
NCB, Aryan Khan

ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಅವರನ್ನು ಇದೇ ಅಕ್ಟೋಬರ್‌ 7ರವರೆಗೆ ಮುಂಬೈ ನ್ಯಾಯಾಲಯ ಎನ್‌ಸಿಬಿ ವಶಕ್ಕೆ ಒಪ್ಪಿಸಿದೆ. ಮೊಬೈಲ್‌ ಚಾಟಿಂಗ್‌ ಸಾಕ್ಷ್ಯವನ್ನು ಪರಿಗಣಿಸಿ ನಗರದ ಕಿಲ್ಲಾ ನ್ಯಾಯಾಲಯ ಈ ಆದೇಶ ನೀಡಿದೆ.

ಅಕ್ಟೋಬರ್‌ 11ರವರೆಗೆ ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ಒಪ್ಪಿಸಬೇಕು ಎಂದು ತನಿಖಾಧಿಕಾರಿಗಳ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ನ್ಯಾಯಾಲಯವನ್ನು ಕೋರಿದರು. ಆದರೆ ಮುಂದಿನ ಮೂರುದಿನಗಳವರೆಗೆ ಅಂದರೆ ಅ. 7ರವರೆಗೆ ನ್ಯಾಯಾಲಯ ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ಒಪ್ಪಿಸುವಂತೆ ಸೂಚಿಸಿತು.

“ವಾಟ್ಸಾಪ್ ಚಾಟ್ ಮೂಲಕ ಮಾದಕ ವಸ್ತು ಜಾಲದೊಂದಿಗೆ ನಂಟು ಇರುವ ಕ್ರಿಮಿನಲ್ ಸಾಕ್ಷ್ಯಗಳನ್ನು ಪತ್ತೆ ಮಾಡಲಾಗಿದೆ. ಈಗಲೂ ದಾಳಿ ನಡೆಯುತ್ತಿದೆ. ಆಘಾತಕಾರಿಯಾದ ಕ್ರಿಮಿನಲ್‌ ಸಾಕ್ಷ್ಯಗಳು ಮಾದಕವಸ್ತು ಕಳ್ಳಸಾಗಣೆಯನ್ನು ತೋರಿಸುತ್ತಿವೆ” ಎಂಬುದಾಗಿ ತನಿಖಾಧಿಕಾರಿಗಳ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್‌ ವಾದಿಸಿದರು.

“ಮಾದಕ ವಸ್ತು ಖರೀದಿಸಲು ಮಾಡಿದ ಹಣದ ಪಾವತಿ ವಿಧಾನ ಮತ್ತು ಬಳಸಿದ ಸಂಕೇತ ಭಾಷೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲಾ ಆರೋಪಿಗಳ ತನಿಖೆಯಾಗಬೇಕಿದೆ. ಅಂತರರಾಷ್ಟ್ರೀಯ ವಹಿವಾಟುಗಳ ತನಿಖೆ ನಡೆಯಬೇಕಿದೆ. ಈ ಎಲ್ಲಾ ಅಪರಾಧಗಳು ಜಾಮೀನಿಗೆ ಅರ್ಹವಾದವು ಎಂಬ ವಾದ ಕೇಳಿಬರಬಹುದು. ಬಾಂಬೆ ಹೈಕೋರ್ಟ್‌ನ ಮೂರು ತೀರ್ಪುಗಳು ಎಲ್ಲಾ ಬಗೆಯ ಎನ್‌ಡಿಪಿಎಸ್‌ ಅಪರಾಧಗಳು ಜಾಮೀನುರಹಿತವಾಗಿವೆ ಎಂದು ತಿಳಿಸುತ್ತವೆ.” ಎಂಬುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

Also Read
ಡ್ರಗ್ಸ್ ಪ್ರಕರಣ: ನಟ ಶಾರುಖ್‌ ಪುತ್ರ ಆರ್ಯನ್‌ ಖಾನ್ ಹಾಗೂ‌ ಮತ್ತಿತರರು ಅಕ್ಟೋಬರ್‌ 4ರವರೆಗೆ ಎನ್‌ಸಿಬಿ ವಶಕ್ಕೆ

ಎಲ್ಲಾ ಎನ್‌ಡಿಪಿಎಸ್‌ ಅಪರಾಧಗಳು ಜಾಮೀನುರಹಿತವಾದವು ಎಂದು ಹೇಳಲು ಬಾಂಬೆ ಹೈಕೋರ್ಟ್ ರಿಯಾ ಚಕ್ರವರ್ತಿ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಎಎಸ್‌ಜಿ ಈ ಸಂದರ್ಭದಲ್ಲಿ ಓದಿದರು. ಖ್ಯಾತನಾಮರು ಮಾದಕ ವಸ್ತು ಸೇವಿಸುವುದರಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಬಹುದು. ಆದ್ದರಿಂದ ನಾವು ಅಪಾಯ ತಡೆಯಲು ಯತ್ನಿಸಬೇಕಿದೆ. ಮೂವರನ್ನೂ ಎನ್‌ಸಿಬಿ ವಶಕ್ಕೆ ಒಪ್ಪಿಸಬೇಕು ಎಂದು ಕೋರಿದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಆರ್ಯನ್‌ ಪರ ವಕೀಲ ಎಸ್‌ ಮಾನೆಶಿಂಧೆ ನಾನು ಹಕ್ಕಿನ ವಿಚಾರವಾಗಿ ಜಾಮೀನು ಬಯಸುತ್ತಿಲ್ಲ. ಎನ್‌ಸಿಬಿ ಆರ್ಯನ್‌ನನ್ನು ಬಂಧಿಸಿದ್ದು ಕ್ರೂಸ್ ಹಡಗಿನಲ್ಲಲ್ಲ. ಆರ್ಯನ್‌ ವಿಶೇಷ ಆಹ್ವಾನಿತರಾಗಿದ್ದರು. ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಅಲ್ಲಿಗೆ ಬಂದಿದ್ದರು ಎಂದರು.

ಮೊಬೈಲ್ ಹೊರತುಪಡಿಸಿ ಬೇರೇನನ್ನೂ ವಶಪಡಿಸಿಕೊಂಡಿರುವುದನ್ನು ಪಂಚನಾಮೆ ಸೂಚಿಸುವುದಿಲ್ಲ. ಆರ್ಯನ್‌ ಸ್ನೇಹಿತನ ಬಳಿ 6 ಗ್ರಾಂ ಚರಸ್ ಇದ್ದುದರಿಂದ ಆತನನ್ನು ಬಂಧಿಸಲಾಗಿದ್ದು ಅದಕ್ಕೂ ಆರ್ಯನ್‌ಗೂ ಸಂಬಂಧವಿಲ್ಲ ಎಂದು ಹೇಳಿದರು. ಒಬ್ಬ ಆರೋಪಿಯ ಬಳಿ ಪತ್ತೆಯಾದ ವಾಣಿಜ್ಯ ಬಳಕೆ ಪ್ರಮಾಣದ ಮಾದಕ ವಸ್ತುವನ್ನು ಹೇಗೆ ಮತ್ತೊಬ್ಬ ಆರೋಪಿಯ ವಿರುದ್ಧ ದೋಷಾರೋಪ ಮಾಡಲು ಬಳಸುವಂತಿಲ್ಲ ಎಂಬುದನ್ನು ಕೂಡ ಅವರು ಈ ಸಂದರ್ಭದಲ್ಲಿ ವಿವರಿಸಿದರು.

ಇದೇ ವೇಳೆ ಮತ್ತೊಬ್ಬ ಆರೋಪಿ ಅರ್ಬಾಜ್‌ ಮರ್ಚೆಂಟ್‌ ಪರವಾಗಿ ವಾದ ಮಂಡಿಸಿದ ವಕೀಲ ತಾರೀಕ್‌ ಸಯ್ಯದ್‌ “(ವಾಟ್ಸಾಪ್‌) ಚಾಟ್‌ಗಳು ಬಹುಶಃ 5 ವರ್ಷ ಹಿಂದಿನವು ಇರಬಹುದು. ಈ ಮೊದಲು ಮಾಡಿದ ಚಾಟ್‌ಗಳಿಗಾಗಿ ಅವರು ನನ್ನನ್ನು ಸಿಲುಕಿಸಲು ಯತ್ನಿಸುತ್ತಾರೆಯೇ, ಕಸ್ಟಡಿಯಲ್ಲಿ ಇರಿಸುತ್ತಾರೆಯೇ? ಎಂದು ನ್ಯಾಯಾಲಯವನ್ನು ಪ್ರಶ್ನಿಸಿದರು.

ಆರೋಪಿ ಮೂನ್‌ಮೂನ್‌ ಧಮೇಚಾ ಪರ ವಾದ ಮಂಡಿಸಿದ ನ್ಯಾಯವಾದಿ ಅಲಿ ಖಾಸಿಫ್‌ ಖಾನ್‌ ತಮ್ಮ ಕಕ್ಷೀದಾರೆಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಕೋರಿದರು.
ಆದರೆ ವಾದ ಮುಂದುವರೆಸಿದ ಎಎಸ್‌ಜಿ ನಾವಿನ್ನೂ ತನಿಖೆಯ ಆರಂಭಕ ಘಟ್ಟದಲ್ಲಿದ್ದೇವೆ. ಹೀಗಾಗಿ ಜಾಮೀನು ಈಗಲೇ ಪರಿಗಣಿತವಾಗುವುದಿಲ್ಲ. ಕಸ್ಟಡಿ ಅವಧಿ ವಿಸ್ತರಿಸುವುದನ್ನು ಪರಿಗಣಿಸಿ ಎಂದು ನ್ಯಾಯಾಲಯವನ್ನು ಕೋರಿದರು.

ಯಾರಿಂದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿದಾಗ ಎನ್‌ಸಿಬಿ ಅಧಿಕಾರಿ ವಿವಿಧ ಆರೋಪಿಗಳಿಂದ ವಶಪಡಿಸಿಕೊಂಡ ಮಾದಕ ವಸ್ತುವಿನ ವಿಧ ಮತ್ತು ಅದರ ಪ್ರಮಾಣವನ್ನು ವಿವರಿಸಿದರು.

Related Stories

No stories found.
Kannada Bar & Bench
kannada.barandbench.com