Bombay HC, Nawab Malik and Sameer Wankhede 
ಸುದ್ದಿಗಳು

ಜವಾಬ್ದಾರಿಯುತ ಪ್ರಜೆಯಾಗಿ ನೀವು ಟ್ವೀಟ್ ಮಾಡುವ ಮುನ್ನ ಪರಿಶೀಲಿಸಿದ್ದಿರೇ? ಮಲಿಕ್‌ಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

Bar & Bench

ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಮತ್ತು ಅವರ ಕುಟುಂಬದ ಮಾಹಿತಿಯನ್ನು ಟ್ವಿಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳುವ ಮುನ್ನ ಪರಿಶೀಲಿಸಲಾಗಿದೆಯೇ ಎಂಬುದನ್ನು ಅಫಿಡವಿಟ್‌ ಮೂಲಕ ತಿಳಿಸುವಂತೆ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಅವರಿಗೆ ಬಾಂಬೆ ಹೈಕೋರ್ಟ್‌ ಸೂಚಿಸಿದೆ.

ತಮ್ಮ ಮಗ ಹಾಗೂ ತಮ್ಮ ಕುಟುಂಬದ ವಿರುದ್ಧ ಪತ್ರಿಕಾಗೋಷ್ಠಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪದ ಮೇರೆಗೆ ಧ್ಯಾನದೇವ್ ಕಚ್ರುಜಿ ವಾಂಖೆಡೆ ಅವರು ₹ 1.25 ಕೋಟಿ ಪರಿಹಾರ ಕೋರಿ ಮಲಿಕ್‌ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ರಜೆಕಾಲೀನ ಪೀಠದ ನ್ಯಾಯಮೂರ್ತಿ ಮಾಧವ್ ಜಾಮ್‌ದಾರ್ ಅವರು ಈ ನಿರ್ದೇಶನ ನೀಡಿದ್ದಾರೆ.

ಜವಾಬ್ದಾರಿಯುತ ನಾಗರಿಕ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷದ ಸದಸ್ಯರಾಗಿ (ಏನನ್ನಾದರೂ ಅಪ್‌ಲೋಡ್ ಮಾಡುವ ಮೊದಲು) ಪರಿಶೀಲಿಸುವುದು ಸಾರ್ವಜನಿಕ ಅಧಿಕಾರಿಯಾಗಿ ನಿಮ್ಮ ಕರ್ತವ್ಯವಲ್ಲವೇ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಮಲಿಕ್‌ ಅವರು ನೀಡಿರುವ ಹೇಳಿಕೆಗಳು ಸುಳ್ಳೇ ಅಥವಾ ನಿಜವೇ ಎಂಬುದನ್ನು ಸಾಬೀತುಪಡಿಸುವಂತೆ ವಾಂಖೆಡೆ ಪರ ವಕೀಲ ಅರ್ಷಾದ್ ಶೇಖ್‌ ಅವರಿಗೂ ನ್ಯಾಯಾಲಯ ಇದೇ ಸಂದರ್ಭದಲ್ಲಿ ಸೂಚನೆ ನೀಡಿತು.

"ಹೇಳಿಕೆಗಳು ಸುಳ್ಳು ಎಂಬುದನ್ನು ನೀವು ಸಾಬೀತುಪಡಿಸಬೇಕು. ಈ ಸಮಸ್ಯೆಗಳನ್ನು ಯಾವುದೇ ಸಾರ್ವಜನಿಕರು ಎತ್ತಬಹುದು ಏಕೆಂದರೆ ಅವರು (ವಾಂಖೆಡೆ) ಸಾರ್ವಜನಿಕ ಅಧಿಕಾರಿಯಾಗಿದ್ದಾರೆ. ಆದ್ದರಿಂದ ಮೊದಲು ನೀವು ಹೇಳಿಕೆಗಳನ್ನು ಸುಳ್ಳು ಎಂಬುದನ್ನು ಸಾಬೀತು ಪಡಿಸಿ ಏಕೆಂದರೆ ಅವರು (ಮಲಿಕ್) ಅವುಗಳನ್ನು ಸತ್ಯ ಎಂದು ಹೇಳುತ್ತಿದ್ದಾರೆ" ಎಂದು ಹೇಳಿದ ನ್ಯಾಯಾಲಯ ಪ್ರಕರಣವನ್ನು ನವೆಂಬರ್ 12ಕ್ಕೆ ಮುಂದೂಡಿತು.