ಎನ್‌ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಾಂಖೆಡೆ ತಂದೆ

ಮಗ ಹಾಗೂ ತಮ್ಮ ಕುಟುಂಬದ ವಿರುದ್ಧ ಪತ್ರಿಕಾಗೋಷ್ಠಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪದ ಮೇರೆಗೆ ಧ್ಯಾನದೇವ್ ಕಚ್ರುಜಿ ವಾಂಖೆಡೆ ಅವರು ₹ 1.25 ಕೋಟಿ ಮಾನನಷ್ಟ ಪರಿಹಾರ ಕೋರಿದ್ದಾರೆ.
Bombay HC, Nawab Malik and Sameer Wankhede
Bombay HC, Nawab Malik and Sameer Wankhede

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ನವಾಬ್ ಮಲಿಕ್ ವಿರುದ್ಧ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ಅವರ ತಂದೆ ಬಾಂಬೆ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಮಗ ಹಾಗೂ ತಮ್ಮ ಕುಟುಂಬದ ವಿರುದ್ಧ ಪತ್ರಿಕಾಗೋಷ್ಠಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪದ ಮೇರೆಗೆ ಧ್ಯಾನದೇವ್ ಕಚ್ರುಜಿ ವಾಂಖೆಡೆ ಅವರು ₹ 1.25 ಕೋಟಿ ಮಾನನಷ್ಟ ಪರಿಹಾರ ಕೋರಿದ್ದಾರೆ.

'ವಾಂಖೆಡೆ ಮುಸ್ಲಿಂ, ಅವರು ಹಿಂದೂಗಳಲ್ಲ' ಎಂಬ ಮಲಿಕ್‌ ಹೇಳಿಕೆಗಳು ಕುಟುಂಬದ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವಂತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮಲಿಕ್ ಅವರ ಹೇಳಿಕೆಗಳು ವಾಂಖೆಡೆ ಮತ್ತು ಅವರ ಕುಟುಂಬದ ಹೆಸರು, ಗುಣ, ಖ್ಯಾತಿ ಮತ್ತು ಸಾಮಾಜಿಕ ವ್ಯಕ್ತಿತ್ವಕ್ಕೆ ಸರಿಪಡಿಸಲಾಗದ ನಷ್ಟ, ಹಾನಿ, ತೊಂದರೆ, ತಾರತಮ್ಯ ಉಂಟುಮಾಡಿವೆ ಎಂದು ದೂರಲಾಗಿದೆ.

ವಕೀಲರಾದ ದಿವಾಕರ್ ರೈ ಮತ್ತು ಸೌರಭ್ ತಮ್ಹನ್‌ಕರ್ ಅವರ ಮೂಲಕ ಸಲ್ಲಿಸಲಾದ ಮೊಕದ್ದಮೆ ಅರ್ಜಿಯಲ್ಲಿ ಈ ಕೆಳಗಿನ ಮನವಿ ಸಲ್ಲಿಸಲಾಗಿದೆ.

  • ಮಲಿಕ್ ನೀಡಿರುವ ಹೇಳಿಕೆಗಳು "ಹಿಂಸಾತ್ಮಕ ಮತ್ತು ಮಾನನಷ್ಟ ಸ್ವಭಾವ" ಎಂದು ಘೋಷಿಸುವ ಆದೇಶ ಹೊರಡಿಸಬೇಕು.

  • ಸಾಮಾಜಿಕ ಮಾಧ್ಯಮ ಖಾತೆಗಳೂ ಸೇರಿದಂತೆ ಯಾವುದೇ ರೀತಿಯ ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದು ಅಥವಾ ಪ್ರಕಟಿಸುವುದಕ್ಕೆ ಶಾಶ್ವತ ತಡೆಯಾಜ್ಞೆ ನೀಡಬೇಕು.

  • ಮಲಿಕ್ ಬಿಡುಗಡೆ ಮಾಡಿರುವ ಹೇಳಿಕೆಗಳು, ಪತ್ರಿಕಾ ಪ್ರಕಟಣೆಗಳು, ಟ್ವೀಟ್‌ಗಳನ್ನು ಅಳಿಸಿ ಹಾಕಲು ಅವರಿಗೆ ನಿರ್ದೇಶಿಸಬೇಕು.

  • ತಮ್ಮ ಕುಟುಂಬದ ವಿರುದ್ಧ ಪತ್ರಿಕಾಗೋಷ್ಠಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪದ ಮೇರೆಗೆ ಧ್ಯಾನದೇವ್ ಕಚ್ರುಜಿ ವಾಂಖೆಡೆ ಅವರು ₹ 1.25 ಕೋಟಿ ಮಾನನಷ್ಟ ಪರಿಹಾರ ನೀಡಲು ಸೂಚಿಸಬೇಕು.

Also Read
ನವಾಬ್‌ ಮಲಿಕ್‌ ಟೀಕೆಗಳು ಎನ್‌ಸಿಬಿ ಮತ್ತು ವಾಂಖೆಡೆ ಅವರ ಸ್ಥೈರ್ಯಗೆಡಿಸಬಹುದು: ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್

ಮಲಿಕ್ ಅವರು ವಾಂಖೆಡೆ ಕುಟುಂಬವನ್ನು ವಂಚಕ ಎಂದು ಕರೆಯುತ್ತಿದ್ದಾರೆ ಎಂಬುದಾಗಿ ನ್ಯಾಯಮೂರ್ತಿ ಎಸ್‌ ಜೆ ಕಥವಲ್ಲಾ ಅವರ ರಜಾಕಾಲೀನ ಪೀಠಕ್ಕೆ ಧ್ಯಾನ್‌ದೇವ್ ಕಚ್ರುಜಿ ವಾಂಖೆಡೆ ಪರ ವಕೀಲ ಅರ್ಷದ್ ಶೇಖ್ ತಿಳಿಸಿದರು. ಮೊಕದ್ದಮೆ ಹೂಡಲು ವಕೀಲರಿಗೆ ಅನುಮತಿಸಿದ ನ್ಯಾಯಮೂರ್ತಿ ಕಥವಲ್ಲಾ ಅವರು ನಾಳೆಗೆ (ನವೆಂಬರ್ 8, 2021) ವಿಚಾರಣೆ ಮುಂದೂಡಿದರು. ಪ್ರಕರಣವನ್ನು ವಿಚಾರಣೆಗಾಗಿ ಈಗ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಪೀಠಕ್ಕೆ ಪಟ್ಟಿ ಮಾಡಲಾಗಿದೆ.

ಎನ್‌ಸಿಪಿ ನಾಯಕನ ವಿರುದ್ಧ ದಾಖಲಾದ ಎರಡನೇ ಮಾನನಷ್ಟ ಮೊಕದ್ದಮೆ ಇದಾಗಿದೆ. ಆರ್ಯನ್‌ ಖಾನ್‌ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಿಕ್‌ ಅವರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ ₹ 100 ಕೋಟಿ ಪರಿಹಾರ ನೀಡಬೇಕು ಎಂದು ಕೋರಿ ಬಿಜೆಪಿಯ ಮೋಹಿತ್ ಭಾರತೀಯ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Kannada Bar & Bench
kannada.barandbench.com