ಲೋಕಸಭೆ ಮತ್ತು ರಾಜ್ಯಸಭೆಯಿಂದ ಅಂಗೀಕೃತಗೊಂಡು, ರಾಷ್ಟ್ರಪತಿಗಳ ಅಂಕಿತ ಎದುರು ನೋಡುತ್ತಿರುವ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಪ್ರಶ್ನಿಸಿ ಸಂಸದ ಹಾಗೂ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ನಾಯಕ ಅಸಾದುದ್ದೀನ್ ಒವೈಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಭಾರತದಲ್ಲಿ ಧಾರ್ಮಿಕ ಪಂಗಡಗಳಿಗೆ ತಮ್ಮದೇ ಆದ ವ್ಯವಹಾರ ನಡೆಸುವ ಅಧಿಕಾರ ನೀಡುವ ಸಂವಿಧಾನದ 26ನೇ ವಿಧಿ ಪ್ರಕಾರ ತಿದ್ದುಪಡಿ ಮಸೂದೆ ಅಸಾಂವಿಧಾನಿಕ ಎಂದು ಅರ್ಜಿ ಹೇಳಿದೆ.
ಹಿಂದೂ, ಜೈನ ಹಾಗೂ ಸಿಖ್ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಕೆಲವು ರಕ್ಷಣೆಗಳನ್ನು ವಕ್ಫ್‌ಗಳಿಂದ ಈ ತಿದ್ದುಪಡಿ ಕಾಯಿದೆಯ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಇದು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಒವೈಸಿ ದೂರಿದ್ದಾರೆ. ವಕೀಲ ಲಾಜಫೀರ್ ಅಹ್ಮದ್ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಸಂವಿಧಾನದ 30ನೇ ವಿಧಿಯ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಅಲ್ಪಸಂಖ್ಯಾತರ ಹಕ್ಕನ್ನು ಕೂಡ ಮಸೂದೆ ಉಲ್ಲಂಘಿಸುತ್ತದೆ ಎಂದಿರುವ ಅರ್ಜಿಯು ವಕ್ಫ್ ಅನ್ನು ಯಾರು ಸೃಜಿಸಬಹುದು ಎನ್ನುವ ಬಗ್ಗೆ ಮಾಡಿರುವ ನಿರ್ಬಂಧ, 'ಬಳಕೆಯ ಕಾರಣದಿಂದಾದ ಉಂಟಾದ ವಕ್ಫ್' ಮಾನ್ಯತೆಯನ್ನು ರದ್ದುಪಡಿಸಿರುವುದು ಮತ್ತು ವಕ್ಫ್ ಮಂಡಳಿ ಮತ್ತು ವಕ್ಫ್ ಆಸ್ತಿಗಳನ್ನು ನಿರ್ವಹಿಸುವ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರ್ಪಡೆ ಮಾಡಿರುವುದು ಸರಿಯಲ್ಲ ಎಂದಿದೆ.
ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಸೂದೆಯ ಪ್ರತಿಯನ್ನು ಹರಿದು ಹಾಕಿ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದ ಒವೈಸಿ ಇದು "ಮುಸ್ಲಿಮರ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳ ಮೇಲಿನ ದಾಳಿ" ಎಂದು ದೂರಿದ್ದರು.
" ವಕ್ಫ್ ಸಮಿತಿ ಮತ್ತು ಮಂಡಳಿಗಳು ಧರ್ಮ ತಟಸ್ಥವಾಗಿರಬೇಕು ಎಂದು ಹೇಳುವ ನೀವು ನಿಮ್ಮ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುತ್ತೀರಿ. ಇದು ಯಾವ ರೀತಿಯ ಪ್ರಜಾಪ್ರಭುತ್ವದ ಅಣಕ?" ಎಂದು ಅವರು ಪ್ರಶ್ನಿಸಿದ್ದರು.
ಕಾಂಗ್ರೆಸ್‌ನಿಂದಲೂ ಅರ್ಜಿ
ಶುಕ್ರವಾರ ಬೆಳಿಗ್ಗೆ ಕಾಂಗ್ರೆಸ್ ಸದಸ್ಯ ಮೊಹಮ್ಮದ್ ಜಾವೇದ್ ಅವರು ತಿದ್ದುಪಡಿ ಮಸೂದೆಯನ್ನು ಮುಸ್ಲಿಂ ಸಮುದಾಯದ ಬಗ್ಗೆ ತಾರತಮ್ಯ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು.
ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು), 25 (ಧರ್ಮವನ್ನು ಆಚರಿಸುವ ಸ್ವಾತಂತ್ರ್ಯ), 26 (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ), 29 (ಅಲ್ಪಸಂಖ್ಯಾತರ ಹಕ್ಕುಗಳು) ಮತ್ತು 300A (ಆಸ್ತಿಯ ಹಕ್ಕು) ವಿಧಿಗಳನ್ನು ಉದ್ದೇಶಿತ ಕಾಯಿದೆ ಉಲ್ಲಂಘಿಸುತ್ತದೆ ಎಂದು ಜಾವೇದ್ ವಾದಿಸಿದ್ದಾರೆ.