Gujarat High Court 
ಸುದ್ದಿಗಳು

ಅತ್ಯಾಚಾರ: ಶಿಕ್ಷೆ ಅಮನತುಗೊಳಿಸುವಂತೆ ಕೋರಿ ಗುಜರಾತ್ ಹೈಕೋರ್ಟ್ ಮೊರೆ ಹೋದ ಸ್ವಘೋಷಿತ ದೇವಮಾನವ ಅಸಾರಾಮ್

ಶಿಷ್ಯೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಕ್ಕಾಗಿ ಅಸಾರಾಮ್ ಬಾಪು ದೋಷಿ ಎಂದು ಕಳೆದ ಜನವರಿಯಲ್ಲಿ, ಗಾಂಧಿನಗರದ ನ್ಯಾಯಾಲಯ ತೀರ್ಪು ನೀಡಿತ್ತು.

Bar & Bench

ಶಿಷ್ಯೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತನಗೆ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ಅಮಾನತಿನಲ್ಲಿಡುವಂತೆ ಕೋರಿ ವಿವಾದಾಸ್ಪದ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಗುಜರಾತ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ [ಅಶುಮಲ್‌ ಅಲಿಯಾಸ್‌ ಅಸಾರಾಂ ಥೌಮಲ್‌ ಸಿಂಧಿ (ಹರ್ಪಲಾನಿ) ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಅತ್ಯಾಚಾರ ಪ್ರಕರಣದಲ್ಲಿ ತನಗೆ ವಿಧಿಸಲಾದ ಶಿಕ್ಷೆ ಪ್ರಶ್ನಿಸಿ ಈಗಾಗಲೇ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಕೀಲ ಆಶಿಶ್ ದಗ್ಲಿ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಅಸಾರಾಮ್ ಬಾಪು ಗಮನಸೆಳೆದಿದ್ದಾರೆ.  

ಇನ್ನೂ ಪ್ರಕರಣದ ವಿಚಾರಣೆ ನಡೆಯದಿರುವ ಕಾರಣ ಹಾಗೂ ಮೇಲ್ಮನವಿಯಲ್ಲಿ ಜಯ ಸಾಧಿಸುವ ಸಂಪೂರ್ಣ ಅವಕಾಶ ತಮಗೆ ಇರುವುದರಿಂದ ಸದ್ಯಕ್ಕೆ ತಮಗೆ ವಿಧಿಸಲಾದ ಜೈಲುಶಿಕ್ಷೆಯನ್ನು ಅಮಾನತಿನಲ್ಲಿಡಬೇಕು ಎಂದು ಅವರು ಕೋರಿದ್ದಾರೆ.

ತನ್ನ ವಿರುದ್ಧದ ಪ್ರಾಸಿಕ್ಯೂಷನ್‌ ವಾದ "ನಕಲಿ, ಕಪೋಲಕಲ್ಪಿತ, ಸಂಚಿನಿಂದ” ಕೂಡಿದೆ ಎಂದು ತೋರುತ್ತದೆ ಮತ್ತು ಅಂತಹ ವಾದ ಸಂತ್ರಸ್ತೆಯ ಸುಳ್ಳು ಆಪಾದನೆಯಾಗಿರಬಹುದು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಾಸಿಕ್ಯೂಷನ್‌ ಸಾಕ್ಷಿಗಳು ತನ್ನಿಂದ ಹಣ ಸುಲಿಗೆ ಮಾಡಲು ಈ ಸಂಚು ರೂಪಿಸಿದ್ದಾರೆ ಎನ್ನುವುದಕ್ಕೆ 12 ವರ್ಷಗಳ ನಂತರ ಎಫ್‌ಐಆರ್‌ ದಾಖಲಿಸಿರುವುದೇ ಸಾಕ್ಷಿ. ವಿವಿಧ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಕಂಡುಬರುವ ಅಂಶವನ್ನು ಗಮನಿಸುವಲ್ಲಿ ವಿಚಾರಣಾ ನ್ಯಾಯಾಲಯ ಎಡವಿದೆ ಎನ್ನಲಾಗಿದೆ.

ಅಲ್ಲದೆ, ತಾನು 'ಬಲವಂತವಾಗಿ ಲೈಂಗಿಕ ಕ್ರಿಯೆ' ನಡೆಸಿರುವುದಾಗಿ ಸಂತ್ರಸ್ತೆಯ ಪ್ರಮಾಣಿತ ಹೇಳಿಕೆಯು ಘಟನೆ ನಡೆದಿದೆ ಎನ್ನಲಾದ ಸಮಯದಲ್ಲಿ ತನಗೆ 64 ವರ್ಷ ಹಾಗೂ ಸಂತ್ರಸ್ತೆಗೆ 21 ವರ್ಷ ಎನ್ನುವ ಅಂಶವನ್ನು ಗಮನಿಸಿದರೆ 'ಅತ್ಯಂತ ಅಸಂಭವ'ದ ಸಂಗತಿಯಾಗಿದೆ. "ಸಂತ್ರಸ್ತೆಯು ಅರ್ಜಿದಾರರನ್ನು ಸುಲಭವಾಗಿ ಮಣಿಸಬಹುದಾಗಿದ್ದು, ತನ್ನನ್ನು ರಕ್ಷಿಸಿಕೊಳ್ಳಲು ಸ್ಥಳದಿಂದ ಓಡಬಹುದಾಗಿರುತ್ತದೆ," ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಆ ಮೂಲಕ ಸಂತ್ರಸ್ತೆಯ ಮೇಲೆ ಅಸಾರಾಮ್ ಬಾಪು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಹೇಳಲಾಗಿದೆ.

ನ್ಯಾಯಮೂರ್ತಿ ಎ ವೈ ಕೊಗ್ಜೆ ಮತ್ತು ಹಸ್ಮುಖ್ ಸುತಾರ್ ಅವರಿದ್ದ ವಿಭಾಗೀಯ ಪೀಠ  ಆಗಸ್ಟ್ 17ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.