Asaram Bapu, Supreme Court 
ಸುದ್ದಿಗಳು

ಅಸಾರಾಂ ಬಾಪು ಅತ್ಯಾಚಾರ ಪ್ರಕರಣ: ಜಾಮೀನು ವಿರೋಧಿಸಿ ಸುಪ್ರೀಂ ಕೋರ್ಟ್‌ ಕದತಟ್ಟಿದ ಸಂತ್ರಸ್ತೆಯ ತಂದೆ

ವೈದ್ಯಕೀಯ ಕಾರಣಗಳ ಆಧಾರದಲ್ಲಿ ಬಾಪುಗೆ ಜಾಮೀನು ನೀಡಿದರೆ ತನ್ನನ್ನು ಮತ್ತು ಪುತ್ರಿಯನ್ನು ಕೊಲೆ ಮಾಡಬಹುದು ಎಂಬ ತೀವ್ರ ತರಹದ ಆತಂಕವನ್ನು ಅರ್ಜಿದಾರೆ ಸಂತ್ರಸ್ತೆಯ ತಂದೆ ವ್ಯಕ್ತಪಡಿಸಿದ್ದಾರೆ.

Bar & Bench

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ವೈದ್ಯಕೀಯ ಕಾರಣದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಯನ್ನು ಆಕ್ಷೇಪಿಸಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಂದೆ ಮನವಿ ಸಲ್ಲಿಸಿದ್ದಾರೆ. ಆರೋಪಿ ಅಸಾರಾಂ ಬಾಪುಗೆ ಜಾಮೀನು ನೀಡಿದರೆ ಪುತ್ರಿ ಮತ್ತು ತನ್ನ ಇಡೀ ಕುಟುಂಬವನ್ನು ಬಾಪು ಬೆಂಬಲಿಗರು ಕೊಲೆಗೈಯಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ಬಾಪು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜಕೀಯ ಸಂಪರ್ಕ ಹೊಂದಿದ್ದಾರೆ. ದೇಶಾದ್ಯಂತ ಅವರನ್ನು ಕುರುಡಾಗಿ ಹಿಂಬಾಲಿಸುವ ಲಕ್ಷಾಂತರ ಮಂದಿ ಬೆಂಬಲಿಗರಿದ್ದಾರೆ. ಕಾರ್ತಿಕ್‌ ಹಲ್ದಾರ್‌ ಎಂಬಾತನನ್ನು ಕೊಲೆ ಮಾಡಲು ಬಾಪು ನೇಮಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ಸಾಕ್ಷಿಯನ್ನು ಕೊಲೆ ಮಾಡಿದ್ದ ಆತ ಬಾಪು ಆದೇಶದಂತೆ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ವಕೀಲ ಉತ್ಸವ್‌ ಬೈನ್ಸ್‌ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ಸಂತ್ರಸ್ತೆ ತಂದೆ ವಿವರಿಸಿದ್ದಾರೆ.

“ಪ್ರಕರಣಕ್ಕೆ ಸಂಬಂಧಿಸಿದ ಹತ್ತು ಮಂದಿ ಪ್ರತ್ಯಕ್ಷದರ್ಶಿಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಅರ್ಜಿದಾರ ಬಾಪುಗೆ ಜಾಮೀನು ನೀಡಿದರೆ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ಬಾಲಕಿ ಮತ್ತು ಆಕೆಯ ಕುಟುಂಬ ಹಾಗೂ ಗುಜರಾತ್‌ನ ಸೂರತ್‌ನಲ್ಲಿರುವ ಪ್ರತ್ಯಕ್ಷ ಸಾಕ್ಷಿಗಳ ಪ್ರತೀಕಾರದ ಕೊಲೆಗೆ ಯತ್ನಿಸಬಹುದು” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ತನ್ನ ಮೇಲೆ ಹಾಗೂ ತನ್ನ ಕುಟುಂಬದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆಯನ್ನು ಬಾಪು ಬೆಂಬಲಿಗರು ಹಾಕಿದ್ದಾರೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. "ಬಾಪುವಿನ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದರೂ ಉತ್ತರ ಪ್ರದೇಶ ಸರ್ಕಾರವು ಕುಟುಂಬಕ್ಕೆ ಕಲ್ಪಿಸಿದ್ದ ಭದ್ರತೆಯನ್ನು ಕಡಿತಗೊಳಿಸಿದೆ. ಸಂತ್ರಸ್ತೆ ಮತ್ತು ಇಡೀ ಕುಟುಂಬವು ಬಾಪು ಬೆಂಬಲಿಗರಿಂದ ಹಲ್ಲೆಗೊಳಗಾಗಬಹುದು” ಎಂದು ಹೇಳಲಾಗಿದೆ.

ಬಾಪು ನಿರ್ದೇಶನದ ಮೇರೆಗೆ ಪ್ರಕರಣದ ಪ್ರಮುಖ ಪ್ರತ್ಯಕ್ಷ ಸಾಕ್ಷಿಗೆ ಗುಂಡಿಕ್ಕಿದ್ದಾಗಿ ಆರೋಪಿ ಹಲ್ದಾರ್‌ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಇಷ್ಟಾದರೂ ಉತ್ತರ ಪ್ರದೇಶ ಪೊಲೀಸರು ಬಾಪುವನ್ನು ಪ್ರಶ್ನಿಸುವುದಾಗಲಿ ಅಥವಾ ಬಂಧಿಸುವುದಾಗಲಿ ಅಥವಾ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಆತನನ್ನು ಆರೋಪಿಯನ್ನಾಗಿಸದಿರುವುದು ಬಾಪುಗೆ ರಾಜ್ಯ ಸರ್ಕಾರ ಪ್ರಾಯೋಜಕತ್ವ ವಹಿಸಿರುವ ದುರ್ನಡತೆ ಬಟಾಬಯಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ರಾಜಕೀಯವಾಗಿ ಸಾಕಷ್ಟು ಪ್ರಭಾವಿಯಾಗಿರುವ ಬಾಪುವನ್ನು ರಕ್ಷಿಸಲು ಉತ್ತರ ಪ್ರದೇಶ ಪೊಲೀಸರು ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಪರಾಧದ ಚಾಳಿ ಹೊಂದಿರುವ ಬಾಪು ವಿರುದ್ಧ ಗುಜರಾತ್‌ನ ಗಾಂಧಿನಗರದಲ್ಲಿರುವ ಸೆಷನ್ಸ್‌ ನ್ಯಾಯಾಲಯದಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಗಂಭೀರ ಅಪರಾಧಗಳು ಮತ್ತು ಜೋಧ್‌ಪುರ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ನಲ್ಲಿ ಕ್ರಿಮಿನಲ್‌ ಪ್ರಕರಣಗಳಿವೆ ಎಂದೂ ವಿವರಿಸಲಾಗಿದೆ.

ಆಯುರ್ವೇದ ಕೇಂದ್ರದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಜಾಮೀನು ನೀಡುವಂತೆ ಕೋರಿ ಬಾಪು ಈಚೆಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನ ಹೈಕೋರ್ಟ್‌ ಬಾಪು ಜಾಮೀನು ಮನವಿಯನ್ನು ತಿರಸ್ಕರಿಸಿದ್ದು, ಜಿಲ್ಲಾ ಮತ್ತು ಕಾರಾಗೃಹ ಆಡಳಿತಕ್ಕೆ ಸೂಕ್ತ ವೈದ್ಯಕೀಯ ಸಂಸ್ಥೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆದೇಶಿಸಿತ್ತು. ವೈದ್ಯಕೀಯ ಕಾರಣದ ಮೇಲೆ ತನ್ನ ಕಸ್ಟಡಿ ಸ್ಥಳವನ್ನು ಬದಲಿಸಿಕೊಳ್ಳಲು ಬಾಪು ಬಯಸಿದ್ದಾರೆ ಎಂದಿದ್ದ ರಾಜಸ್ಥಾನ ಸರ್ಕಾರವು ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.