Advertising Standards Council of India (ASCI)  
ಸುದ್ದಿಗಳು

ಲಕ್ಸ್ ಇಂಡಸ್ಟ್ರೀಸ್‌ ವಿರುದ್ಧ ಅಮುಲ್ ಮಾಚೊ ನೀಡಿದ್ದ ಕೃತಿಚೌರ್ಯ ದೂರು ವಜಾಗೊಳಿಸಿದ ಎಎಸ್‌ಸಿಐ

ಅಮುಲ್ ಮಾಚೊ ಮತ್ತು ಲಕ್ಸ್ ಇಂಡಸ್ಟ್ರೀಸ್ ಜಾಹೀರಾತಿನ ನಡುವೆ ಯಾವುದೇ ಸಾಮ್ಯತೆ ಇಲ್ಲ, ಹಾಗಾಗಿ ಜಾಹೀರಾತು ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ಗ್ರಾಹಕ ದೂರುಗಳ ಮಂಡಳಿ (CCC) ತಿಳಿಸಿದೆ.

Bar & Bench

ಒಳ ಉಡುಪು ಬ್ರಾಂಡ್ ʼಲಕ್ಸ್‌ ಕಾಜಿʼ ತನ್ನ ಜಾಹೀರಾತು ನಕಲು ಮಾಡಿದೆ ಎಂದು ಆರೋಪಿಸಿ ʼಅಮುಲ್ ಮಾಚೊʼ ನೀಡಿದ್ದ ದೂರನ್ನು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ವಜಾಗೊಳಿಸಿದೆ.

ತಾನು 2007ರಲ್ಲಿ ಬಿಡುಗಡೆಗೊಳಿಸಿದ್ದ 'TOING' ಜಾಹೀರಾತನ್ನು ಲಕ್ಸ್‌ ಕಾಜಿ (ಬಾಲಿವುಡ್ ನಟ ವರುಣ್ ಧವನ್ ಅವರನ್ನು ಒಳಗೊಂಡಿತ್ತು) ಸಂಪೂರ್ಣವಾಗಿ ನಕಲು ಮಾಡಿದೆ ಎಂದು ಆರೋಪಿಸಿ ಅಮುಲ್‌ ಮಾಚೊ ಬ್ರಾಂಡ್‌ ಒಡೆತನ ಹೊಂದಿರುವ ಜೆಜಿ ಹೋಸೈರಿ ಕಂಪೆನಿ ಈ ತಿಂಗಳ ಆರಂಭದಲ್ಲಿ ಎಎಸ್‌ಸಿಐಗೆ ದೂರು ನೀಡಿತ್ತು.

ಅಮುಲ್‌ ಜಾಹೀರಾತು ಗೂಗಲ್‌ನಲ್ಲಿ ಇನ್ನೂ ಲಭ್ಯವಿದ್ದು ಇದು ಅತಿ ಹೆಚ್ಚು ಜನಪ್ರಿಯತೆ ಪಡೆದ ಜಾಹೀರಾತುಗಳಲ್ಲಿ ಒಂದಾಗಿದೆ. ಹೊಸ ಲಕ್ಸ್‌ ಜಾಹೀರಾತು ಇದೇ ರೀತಿಯ ಕಥಾಹಂದರ ಒಳಗೊಂಡಿದೆ ಎಂದು ಜೆಜಿ ಹೊಸೈರಿ ವಾದಿಸಿತ್ತು. ಈ ಹಿನ್ನೆಲೆಯಲ್ಲಿ ಅಮುಲ್‌ ಮಾಚೊ ಗಳಿಸಿದ್ದ ಬ್ರಾಂಡ್‌ ವಾಣಿಜ್ಯ ಮೌಲ್ಯ, ಖ್ಯಾತಿ ಹಾಗೂ ಜನಪ್ರಿಯತೆಯ ಲಾಭವನ್ನು ಪಡೆದ ಲಕ್ಸ್‌ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೋರಿತ್ತು.

ಲಕ್ಸ್ ಕಾಜಿ ಬ್ರಾಂಡ್‌ನ ಒಡೆತನ ಹೊಂದಿರುವ ಲಕ್ಸ್ ಇಂಡಸ್ಟ್ರೀಸ್, “ಸಾರ್ವಜನಿಕರ ದೃಷ್ಟಿಯಲ್ಲಿ ಲಕ್ಸ್‌ಗೆ ಅಪಖ್ಯಾತಿ ಉಂಟುಮಾಡುವ ಮತ್ತು ಗ್ರಾಹಕ ದೂರುಗಳ ಮಂಡಳಿಯ (CCC) ಸಮಯ ವ್ಯರ್ಥ ಮಾಡುವ ಉದ್ದೇಶದಿಂದ ಈ ದೂರು ನೀಡಲಾಗಿದೆ” ಎಂದು ನ್ಯಾಯನಿರ್ಣಯ ಸಂಸ್ಥೆ ಎಎಸ್‌ಸಿಐ ಎದುರು ವಾದಿಸಿತ್ತು.

ಎರಡೂ ಜಾಹೀರಾತುಗಳ ಪರಿಕಲ್ಪನೆ, ವಿಷಯ ಹಾಗೂ ಅಭಿವ್ಯಕ್ತಿಗಳು ಹೇಗೆ ಒಂದಕ್ಕೊಂದು ಸಂಪೂರ್ಣವಾಗಿ ವಿರುದ್ಧವಾಗಿವೆ ಎಂಬುದನ್ನು ತೋರಿಸಲು ಲಕ್ಸ್ ಭಿನ್ನತೆಗಳ ಪಟ್ಟಿಯನ್ನು ನೀಡಿತು.

ಅಮೂಲ್ ಜಾಹೀರಾತು ಆಕ್ಷೇಪಾರ್ಹ ಮತ್ತು ಅಶ್ಲೀಲ ವಿಷಯ ಒಳಗೊಂಡಿದ್ದ ಕಾರಣಕ್ಕಾಗಿ ಈ ಜಾಹೀರಾತನ್ನು ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಷೇಧ ಹೇರಿತ್ತು. ಹೀಗಾಗಿ ಬ್ರಾಂಡ್‌ ವಾಣಿಜ್ಯ ಮೌಲ್ಯ, ಖ್ಯಾತಿ ಹಾಗೂ ಜನಪ್ರಿಯತೆಯ ಲಾಭ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಲಕ್ಸ್‌ ಸಮರ್ಥಿಸಿಕೊಂಡಿತು.

ಎರಡೂ ಜಾಹೀರಾತುಗಳ ನಡುವೆ ಯಾವುದೇ ಹೋಲಿಕೆ ಇಲ್ಲ ಎಂದು ಗಮನಿಸಿದ ಸಿಸಿಸಿ, ಲಕ್ಸ್‌ ಜಾಹೀರಾತು ಎಎಸ್‌ಸಿಐ ಸಂಹಿತೆಗೆ ವಿರುದ್ಧವಾಗಿಲ್ಲ ಎಂದು ಹೇಳಿ ಅಮುಲ್‌ ನೀಡಿದ್ದ ದೂರನ್ನು ತಿರಸ್ಕರಿಸಿತು. ಲಕ್ಸ್‌ ಪರವಾಗಿ ನಾಯಕ್‌ ಅಂಡ್‌ ನಾಯಕ್‌ ಕಂ., ಸಂಸ್ಥೆಯ ವಕೀಲರು ವಾದ ಮಂಡಿಸಿದರು.