ಕೋವಿಡ್ ಜಾಗೃತಿ ಜಾಹೀರಾತು ಫಲಕಗಳಿಗೆ ನೀಡಿದ್ದ ಅನುಮತಿ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್- ಸರ್ಕಾರಕ್ಕೆ ತರಾಟೆ

" ಜುಲೈ 15ರ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರನೇ ವ್ಯಕ್ತಿಗಳಿಗೆ ಜಾಹೀರಾತು ಪ್ರದರ್ಶಿಸಲು ಅನುಮತಿ ನೀಡಬಾರದಾಗಿತ್ತು. ಈ ಹಿನ್ನೆಲೆಯಲ್ಲಿ ಆದೇಶ ಹಿಂಪಡೆಯದೆ ನಮಗೆ ಬೇರೆ ಆಯ್ಕೆಗಳಿಲ್ಲ" ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೋವಿಡ್ ಜಾಗೃತಿ ಜಾಹೀರಾತು ಫಲಕಗಳಿಗೆ ನೀಡಿದ್ದ ಅನುಮತಿ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್- ಸರ್ಕಾರಕ್ಕೆ ತರಾಟೆ
ಕೋವಿಡ್ ಜಾಹೀರಾತು ಫಲಕ

ಕೋವಿಡ್-19 ಸೋಂಕು ತಡೆ ಬಗ್ಗೆ ಜಾಗೃತಿ ಮೂಡಿಸಲು ಜಾಹೀರಾತು ಫಲಕಗಳನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಈ ಹಿಂದೆ ತಾನು ನೀಡಿದ್ದ ಅನುಮತಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.

ಆರೋಗ್ಯ ಇಲಾಖೆ ಸ್ಥಾಪಿಸಿದ ಫಲಕಗಳನ್ನು ಖಾಸಗಿ ಸಂಸ್ಥೆಗಳ ಜಾಹೀರಾತಿಗೆ ಬಳಸುತ್ತಿರುವುದು ಕಂಡುಬಂದ ನಂತರ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ.

Also Read
ವಲಸೆ ಕಾರ್ಮಿಕರ ಪುನರ್ವಸತಿ ಯೋಜನೆ ಕಳಪೆ ಎಂದು ಕರ್ನಾಟಕ ಹೈಕೋರ್ಟ್ ಕೆಂಡಾಮಂಡಲ
Also Read
ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಸೂಕ್ತ ಕ್ರಮ ಜರುಗಿಸದ ಸರ್ಕಾರ: ಕರ್ನಾಟಕ ಹೈಕೋರ್ಟ್ ಅಸಮಾಧಾನ

ಜುಲೈ 15ರ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

"ವಿಸ್ತೃತ ಸಾರ್ವಜನಿಕ ಹಿತದೃಷ್ಟಿಯಿಂದ ಈ ನ್ಯಾಯಾಲಯ ಆದೇಶವನ್ನು ನೀಡಿತ್ತು. ಸಾಮಾನ್ಯ ಪ್ರಕ್ರಿಯೆಯಡಿ ಖಾಸಗಿ ಸಂಸ್ಥೆಗಳು ಜಾಹೀರಾತು ಪ್ರದರ್ಶಿಸಲು ಆಯುಕ್ತರ ಅನುಮತಿ ಅಗತ್ಯ. ಅಲ್ಲದೆ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ. ಹೀಗಾಗಿ ಜುಲೈ 15ರ ಆದೇಶವನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಈ ನ್ಯಾಯಾಲಯವು ಅಂತಹ ಯಾವುದೇ ಅನುಮತಿ ನೀಡದಿದ್ದರೂ ಖಾಸಗಿಯವರಿಗೆ ಜಾಹೀರಾತು ಪ್ರದರ್ಶಿಸಲು ಸರ್ಕಾರ ಪರವಾನಗಿ ನೀಡಿದೆ. ಆ ಮೂಲಕ ಖಾಸಗಿಯವರು ನ್ಯಾಯಾಲಯದ ಆದೇಶದ ಲಾಭ ಪಡೆದಿದ್ದಾರೆ.
ಕರ್ನಾಟಕ ಹೈಕೋರ್ಟ್

ನ್ಯಾಯಾಲಯ ಹೇಳಿದ್ದು:

  • ಫಲಕಗಳ ಮೇಲೆ ಜಾಹೀರಾತು ನೀಡಲು ರಾಜ್ಯ ಸರ್ಕಾರ ಖಾಸಗಿಯವರಿಗೆ ಅನುಮತಿ ನೀಡಿದ್ದು ಜುಲೈ 15ರಂದು ನ್ಯಾಯಾಲಯ ನೀಡಿದ್ದ ಆದೇಶ ಮತ್ತು 1976ರ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸ್ಪಷ್ಟ ಉಲ್ಲಂಘನೆ.

  • ಜುಲೈ 15ರ ಆದೇಶದ ದೃಷ್ಟಿಯಿಂದ ರಾಜ್ಯ ಸರ್ಕಾರ ಮೂರನೇ ವ್ಯಕ್ತಿಗಳಿಗೆ ಜಾಹೀರಾತು ಪ್ರದರ್ಶಿಸಲು ಅನುಮತಿ ನೀಡಬಾರದಾಗಿತ್ತು. ಈ ಹಿನ್ನೆಲೆಯಲ್ಲಿ ಆದೇಶ ಹಿಂಪಡೆಯದೆ ನಮಗೆ ಬೇರೆ ಆಯ್ಕೆಗಳಿಲ್ಲ.

  • ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದ ಆರೋಗ್ಯ ಇಲಾಖೆ ನಿರ್ದೇಶಕರ ವಿರುದ್ಧ ತನಿಖೆಗೆ ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕು. ಇವರ ವಿರುದ್ಧದ ತನಿಖಾ ವರದಿಯನ್ನು 6 ವಾರಗಳಲ್ಲಿ ಸಲ್ಲಿಸಬೇಕು.

  • ಎರಡು ವಾರದೊಳಗೆ ಎಲ್ಲಾ ಆಕ್ಷೇಪಾರ್ಹ ಜಾಹೀರಾತು ಫಲಕಗಳನ್ನು ತೆಗೆದುಹಾಕಬೇಕು.

  • ಜಾಹೀರಾತು ಪ್ರದರ್ಶಿಸಿದ ಖಾಸಗಿ ಕಂಪೆನಿಗಳಿಂದ ತೆರಿಗೆ ವಸೂಲಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪತ್ರ ಬರೆಯಬೇಕು. ಈ ಪ್ರಕ್ರಿಯೆ ಮೂರು ವಾರದೊಳಗೆ ಪೂರ್ಣಗೊಳ್ಳಬೇಕು. ವಸೂಲಿ ಮಾಡಿದ ಮೊತ್ತವನ್ನು ರಾಜ್ಯ ಸರ್ಕಾರ ಬಿಬಿಎಂಪಿಗೆ ನೀಡಬೇಕು.

  • ಸರ್ಕಾರಿ ನಿಧಿ ಅಥವಾ ಬಿಬಿಎಂಪಿ ನಿಧಿಯಿಂದ ಜಾಹೀರಾತು ಪ್ರದರ್ಶಿಸಲು ಏನಾದರೂ ಹಣ ಖರ್ಚು ಮಾಡಲಾಗಿದೆಯೆ ಎನ್ನುವ ಕುರಿತು ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಯಿತು.

ಅಲ್ಲದೆ, ನ್ಯಾಯಾಲಯವು ಅಧಿಕಾರಿಗಳಿಗೆ, “ಎ-1 ಗೋಲ್ಡ್‌ ಅಥವಾ ಇನ್ನಾವುದೇ ಏಜೆನ್ಸಿಗಳ ಜಾಹಿರಾತುಗಳನ್ನು ವಾಲ್‌ ಸ್ಟ್ರೀಟ್‌ ಕಮ್ಯುನಿಕೇಷನ್ಸ್‌ (ಕೋವಿಡ್‌-19 ಜಾಗೃತಿ ಕುರಿತ ಜಾಹೀರಾತುಗಳನ್ನು ಪ್ರದರ್ಶಿಸಲು ಸರ್ಕಾರ ನಿಯೋಜಿಸಿರುವ ಸಂಸ್ಥೆ) ಮೂಲಕ ಪ್ರದರ್ಶಿಸಲು ರಾಜ್ಯ ಸರ್ಕಾರವು ಯಾವುದಾದರೂ ಹಣ ಪಡೆದಿದೆಯೇ?” ಎಂದು ತಿಳಿಸಲು ಸೂಚಿಸಿತು.

ಈ ಅವಲೋಕನಗಳೊಂದಿಗೆ, ನ್ಯಾಯಾಲಯ ಜುಲೈ 15ರ ಆದೇಶವನ್ನು ಹಿಂಪಡೆಯಿತು.

Related Stories

No stories found.
Kannada Bar & Bench
kannada.barandbench.com