ಆಪರೇಷನ್ ಸಿಂಧೂರ್ ಕುರಿತ ಕೆಲವು ಹೇಳಿಕೆಗಳಿಗೆ ಸಂಬಂಧಿಸಿದಂತೆ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರ ಬಂಧನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು.
"ದೇಶಭಕ್ತಿಯ ಹೇಳಿಕೆ ನೀಡಿದ ಅವರನ್ನು ಬಂಧಿಸಲಾಗಿದೆ. ದಯವಿಟ್ಟು ಪ್ರಕರಣ ಪಟ್ಟಿ ಮಾಡಿ " ಎಂದ ಸಿಬಲ್ ಮಂಗಳವಾರ ಅಥವಾ ಬುಧವಾರ ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿದರು.
ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಹರಿಯಾಣ ಪೊಲೀಸರು ದೆಹಲಿಯಲ್ಲಿ ಮಹ್ಮದಾಬಾದ್ ಅವರನ್ನು ಬಂಧಿಸಿದ್ದರು. ಭಾನುವಾರ ಅವರನ್ನು 2 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಏಪ್ರಿಲ್ 22ರಂದು ಭಾರತದಲ್ಲಿ 26 ನಾಗರಿಕರನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ನೆಲದಲ್ಲಿ ಭಾರತ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ನಡೆಸಿತ್ತು.
ಫೇಸ್‌ಬುಕ್ ಹೇಳಿಕೆಯಲ್ಲಿ , ಮಹ್ಮದಾಬಾದ್ ಅವರು 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಮೂಲಕ ಭಾರತವು ಪಾಕಿಸ್ತಾನಕ್ಕೆ "ನೀವು ನಿಮ್ಮ ಭಯೋತ್ಪಾದನಾ ಸಮಸ್ಯೆಯನ್ನು ನಿಭಾಯಿಸದಿದ್ದರೆ ನಾವು ನಿಭಾಯಿಸಬೇಕಾಗುತ್ತದೆ!" ಎಂಬ ಸಂದೇಶವನ್ನು ನೀಡಿದೆ ಎಂದು ಬರೆದುಕೊಂಡಿದ್ದರು.
ಮುಂದುವರೆದು, ಯುದ್ಧವನ್ನು ಅಂಧವಾಗಿ ಬೆಂಬಲಿಸುವವರನ್ನು ಅವರು ಟೀಕಿಸಿದ್ದರು, "ಯುದ್ಧದಿಂದಾಗಿ ಎರಡೂ ಬದಿಯಲ್ಲಿ ನಾಗರಿಕರ ಜೀವಹಾನಿ ಸಂಭವಿಸುತ್ತದೆ, ಈ ಕಾರಣಕ್ಕಾಗಿಯೇ ಯುದ್ಧಗಳನ್ನು ತಪ್ಪಿಸಬೇಕು. ಕೆಲವರು ವಿವೇಚನಾರಹಿತರಾಗಿ ಯುದ್ಧವನ್ನು ಪ್ರತಿಪಾದಿಸುತ್ತಿದ್ದಾರೆ, ಆದರೆ ಅವರಾರೂ ಯುದ್ಧವನ್ನು ಕಂಡಿಲ್ಲ ಅಥವಾ ಯುದ್ಧಪೀಡಿತ ಪ್ರದೇಶಗಳಿಗೆ ಭೇಟಿಯನ್ನೂ ನೀಡಿಲ್ಲ..." ಎಂದು ಅವರು ಹೇಳಿದ್ದರು.
ಅಲ್ಲದೆ, ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗೋಷ್ಠಿಯ ನೇತೃತ್ವ ವಹಿಸಿದ್ದ ಕರ್ನಲ್ ಸೋಫಿಯಾ ಕುರೇಷಿಯನ್ನು ಹೊಗಳುತ್ತಿರುವ ಬಲಪಂಥೀಯ ಬೆಂಬಲಿಗರು, ಗುಂಪು ಹಲ್ಲೆ ಮತ್ತು ಆಸ್ತಿಗಳನ್ನು ಮನಸೋ ಇಚ್ಛೆಯಾಗಿ ಧ್ವಂಸಗೊಳಿಸುತ್ತಿರುವ ಪ್ರಕರಣಗಳ ಸಂತ್ರಸ್ತರ ಪರವಾಗಿಯೂ ಮಾತನಾಡುವಂತೆ ಕೋರಿದ್ದರು.
ಕರ್ನಲ್ ಕುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ಪತ್ರಿಕಾಗೋಷ್ಠಿ ನಡೆಸಲು ನಿಯೋಜಿಸಿದ ಆಲೋಚನೆ ನಿಜವಾಗಿಯೂ ಬದಲಾವಣೆಗಳನ್ನು ಸೂಚಿಸಬೇಕು ಇಲ್ಲದೆ ಹೋದರೆ ಅದು ಕೇವಲ ಬೂಟಾಟಿಕೆಯ ಸಂಗತಿಯಾಗುತ್ತದೆ ಎಂದಿದ್ದರು.
ಯೋಗೇಶ್ ಜಥೇರಿ ಹಾಗೂ ಹರಿಯಾಣ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರ ದೂರನ್ನು ಆಧರಿಸಿ ಅಲಿ ಅವರ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಮೇ 20ರಂದು ಮಧ್ಯಾಹ್ನ 2 ಗಂಟೆಗೆ ಅಲಿ ಅವರನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.