
ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಇಟ್ಟಿರುವ 'ಆಪರೇಷನ್ ಸಿಂಧೂರ್' ಎಂಬ ಹೆಸರನ್ನು ಬಳಸಲು ಕೋರಿ ಕೇಂದ್ರ ಸರ್ಕಾರದ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಗೆ ಸಲ್ಲಿಕೆಯಾಗಿರುವ ವಿವಿಧ ವಾಣಿಜ್ಯ ಚಿಹ್ನೆ ಅರ್ಜಿಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ಭಾರತ ಸರ್ಕಾರ ಕಾರ್ಯಾಚರಣೆಯ ಹೆಸರನ್ನು ಬಹಿರಂಗಗೊಳಿಸಿದ ಕೆಲವೇ ಗಂಟೆಗಳಲ್ಲಿ, ರಿಲಯನ್ಸ್ ಸೇರಿದಂತೆ ವಿವಿಧ ಅರ್ಜಿದಾರರು ಮನರಂಜನೆ, ಶಿಕ್ಷಣ, ಸಾಂಸ್ಕೃತಿಕ ಮತ್ತು ಮಾಧ್ಯಮ ಸೇವೆಗಳನ್ನು ಒಳಗೊಂಡಿರುವ ವರ್ಗ 41ರ ಅಡಿಯಲ್ಲಿ ಹೆಸರಿನ ವಿಶಿಷ್ಟ ಹಕ್ಕನ್ನು ತಮಗೆ ನೀಡಲು ಕೋರಿ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಿಲಯನ್ಸ್ ಅರ್ಜಿ ಹಿಂಪಡೆದಿತ್ತು. ಪ್ರಸ್ತುತ 11 ಸಂಘಸಂಸ್ಥೆಗಳು ಮತ್ತು ವ್ಯಕ್ತಿಗಳು ಆಪರೇಷನ್ ಸಿಂಧೂರ್ ವಾಣಿಜ್ಯ ಚಿಹ್ನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಪ್ರಶ್ನಿಸಿ ದೆಹಲಿ ಮೂಲದ ವಕೀಲ ದೇವ್ ಆಶಿಶ್ ದುಬೆ ಎಂಬುವವರು ವಕೀಲ ಓಂ ಪ್ರಕಾಶ್ ಪರಿಹಾರ್ ಎಂಬುವರ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು 'ಆಪರೇಷನ್ ಸಿಂಧೂರ್' ಪದ ರಾಷ್ಟ್ರೀಯ ಶೋಕ ಮತ್ತು ಸೇನಾ ಶೌರ್ಯದ ಸಾಕಾರ ರೂಪದಂತಿದ್ದು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಹುತಾತ್ಮರ ಘನತೆ ಮತ್ತು ಅವರ ಕುಟುಂಬಗಳ ಭಾವನೆಗೆ ಧಕ್ಕೆ ತರುತ್ತದೆ ಎಂದಿದ್ದಾರೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಆರಂಭದಲ್ಲಿ ಕೈಗೊಳ್ಳಲಾದ 'ಆಪರೇಷನ್ ಸಿಂಧೂರ್', ವಿಶೇಷವಾಗಿ ಹುತಾತ್ಮ ಸೈನಿಕರ ಕುಟುಂಬಗಳಿಗೆ ಸಂಬಂಧಿಸಿದಂತೆ ಆಳವಾದ ಭಾವನಾತ್ಮಕ ಮೌಲ್ಯವನ್ನು ಹೊಂದಿದೆ. ಈ ಹೆಸರು ವಿಧವೆಯರ ತ್ಯಾಗವನ್ನು ಸಂಕೇತಿಸುತ್ತದೆ. ಇದು ಭಾರತದಲ್ಲಿ ವೈವಾಹಿಕ ಸಂಪ್ರದಾಯದ ಸಂಕೇತವಾದ "ಸಿಂಧೂರ್"ಗೆ ನಂಟು ಹೊಂದಿದೆ ಎಂದು ಅರ್ಜಿ ಹೇಳಿದೆ.
ಆಪರೇಷನ್ ಸಿಂಧೂರ್ ಹೆಸರಿನ ವಾಣಿಜ್ಯ ಚಿಹ್ನೆ ನೋಂದಣಿಯನ್ನು ಕೋರುವ ಇಂತಹ ಪ್ರಯತ್ನಗಳು ಸಂವೇದನಾರಹಿತವಾಗಿದೆ. ಜೊತೆಗೆ ಸಾರ್ವಜನಿಕ ಭಾವನೆಗಳಿಗೆ ನೋವುಂಟು ಮಾಡುವ ಅಥವಾ ವಾಣಿಜ್ಯ ಸಂದರ್ಭದಲ್ಲಿ ವಿಶಿಷ್ಟತೆ ಹೊಂದಿರದ ಪದಗಳ ನೋಂದಣಿಯನ್ನು ನಿಷೇಧಿಸುವ 1999ರ ವಾಣಿಜ್ಯ ಚಿಹ್ನೆ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ಹೀಗಾಗಿ, ರಾಷ್ಟ್ರೀಯ ತ್ಯಾಗ ಮತ್ತು ಸೇನಾ ಶೌರ್ಯಕ್ಕೆ ಸಂಬಂಧಿಸಿದ ಹೆಸರಿನ ವಾಣಿಜ್ಯೀಕರಣ ತಡೆಗಟ್ಟಲು ಅಧಿಕಾರಿಗಳು ವಾಣಿಜ್ಯ ಚಿಹ್ನೆಗೆ ಮಾನ್ಯತೆ ನೀಡದಂತೆ ಆದೇಶಿಸಬೇಕೆಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಪ್ರಕರಣವು ಬೌದ್ಧಿಕ ಆಸ್ತಿ ಕಾನೂನಿನಲ್ಲಿನ ನೈತಿಕ ಎಲ್ಲೆಗಳ ಸುತ್ತ ಅದರಲ್ಲಿಯೂ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಒದಗಿದಾಗ ಮಹತ್ವದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅರ್ಜಿ ತಿಳಿಸಿದೆ.