LGBTQ and India Map
LGBTQ and India Map 
ಸುದ್ದಿಗಳು

ಸಲಿಂಗ ವಿವಾಹ: ವಿರೋಧ ವ್ಯಕ್ತಪಡಿಸಿದ ಅಸ್ಸಾಂ, ಆಂಧ್ರಪ್ರದೇಶ, ರಾಜಸ್ಥಾನ

Bar & Bench

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಕುರಿತಂತೆ ಅಸ್ಸಾಂ, ಆಂಧ್ರಪ್ರದೇಶ ಹಾಗೂ ರಾಜಸ್ಥಾನ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆ.

ಏಪ್ರಿಲ್‌ 18ರಂದು ಕೇಂದ್ರ ಸರ್ಕಾರ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ರಾಜ್ಯಗಳು ತಮ್ಮ ಅಭಿಪ್ರಾಯ ಸಲ್ಲಿಸಿವೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಲಿಂಗ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳಿಂದ ಪ್ರತಿಕ್ರಿಯೆ ಆಹ್ವಾನಿಸಲಾಗಿದೆ.

ತಾನು ರಾಜ್ಯದ ವಿವಿಧ ಧರ್ಮಗಳ ಧಾರ್ಮಿಕ ಮುಖ್ಯಸ್ಥರನ್ನು ಸಂಪರ್ಕಿಸಿ ಮಾಹಿತಿಪಡೆದಿರುವುದಾಗಿ ತಿಳಿಸಿರುವ ಆಂಧ್ರಪ್ರದೇಶ ಸರ್ಕಾರ ಅವರೆಲ್ಲರೂ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದನ್ನು ವಿರೋಧಿಸಿದ್ದಾರೆ. ಅಂತೆಯೇ, ಇದು ಸಲಿಂಗ ವಿವಾಹ ಮತ್ತು/ಅಥವಾ ಎಲ್‌ಜಿಬಿಟಿಕ್ಯೂಐಎ+ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ವಿವಾಹಕ್ಕೆ ತಾನು ವಿರುದ್ಧ ಎಂದು ಅದು ತಿಳಿಸಿದೆ.

ಸಲಿಂಗ ಜೋಡಿ ಮತ್ತು ಎಲ್‌ಜಿಬಿಟಿಕ್ಯೂಐಎ+ ವಿವಾಹಕ್ಕೆ ಮಾನ್ಯತೆ ನೀಡುವುದು ರಾಜ್ಯದಲ್ಲಿ ಜಾರಿಯಲ್ಲಿರುವ ವಿವಾಹ ಮತ್ತು ವೈಯಕ್ತಿಕ ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸುತ್ತದೆ ಎಂದು ಅಸ್ಸಾಂ ಸರ್ಕಾರ ಹೇಳಿದೆ. ಜೊತೆಗೆ ಇದು ಶಾಸಕಾಂಗ ನಿರ್ಧರಿಸಬೇಕಾದ ವಿಚಾರ ಎಂದು ಅದು ಪ್ರತಿಪಾದಿಸಿದೆ. ಅಂತೆಯೇ ಪ್ರಕರಣದಲ್ಲಿ ಅರ್ಜಿದಾರರು ತೆಗೆದುಕೊಂಡ ಅಭಿಪ್ರಾಯಗಳನ್ನು ವಿರೋಧಿಸಿದ ಅದು ತನ್ನ ಅಭಿಪ್ರಾಯಗಳನ್ನು ಮಂಡಿಸಲು ಇನ್ನಷ್ಟು ಸಮಯ ಕೋರಿದೆ.

ರಾಜಸ್ಥಾನದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವರದಿ ಪ್ರಕಾರ, ಸಲಿಂಗ ವಿವಾಹಗಳು ಸಾಮಾಜಿಕ ರಚನೆಯಲ್ಲಿ ಅಸಮತೋಲನವನ್ನು ಉಂಟುಮಾಡುವುದರಿಂದ ಸಾಮಾಜಿಕ ಮತ್ತು ಕುಟುಂಬ ವ್ಯವಸ್ಥೆ ಮೇಲೆ  ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ತಾನು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಈ ಪದ್ಧತಿ ಚಾಲ್ತಿಯಲ್ಲಿಲ್ಲದಿರುವುದರಿಂದ ಮತ್ತು ಸಾರ್ವಜನಿಕ ಅಭಿಪ್ರಾಯಕ್ಕೆ ವಿರುದ್ಧವಾಗಿರುವ ಕಾರಣ ಸಲಿಂಗ ವಿವಾಹದ ಬಗ್ಗೆ ಕಾನೂನು ಇರಬಾರದು ಎಂದು ಅಭಿಪ್ರಾಯಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಇದಲ್ಲದೆ, ಸಾರ್ವಜನಿಕ ಅಭಿಪ್ರಾಯವು ಸಲಿಂಗ ವಿವಾಹಗಳ ಪರವಾಗಿದ್ದರೆ, ಆಗ ಶಾಸಕಾಂಗವೇ ಸೂಕ್ತ ಹೆಜ್ಜೆ ಇರಿಸಲಿದೆ. ಹೀಗಾಗಿ ಸಲಿಂಗ ವಿವಾಹಕ್ಕೆ ತನ್ನ ವಿರೋಧ ಇದ್ದರೂ ಸಲಿಂಗ ಮನೋಧರ್ಮದ ಇಬ್ಬರು ಸಹಜೀವನ ನಡೆಸುವುದು ತಪ್ಪಲ್ಲ ಎಂದು ಅದು ಹೇಳಿದೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ಮಣಿಪುರ ಹಾಗೂ ಸಿಕ್ಕಿಂ ಸರ್ಕಾರಗಳು ತಮ್ಮ ಅಭಿಪ್ರಾಯ ನೀಡಲು ಹೆಚ್ಚಿನ ಸಮಯಾವಕಾಶ ಕೋರಿವೆ.