Congress Kampli MLA Ganesh and Minister Anand Singh, Karnataka HC 
ಸುದ್ದಿಗಳು

ರೆಸಾರ್ಟ್‌ನಲ್ಲಿ ಆನಂದ್‌ ಸಿಂಗ್‌-ಗಣೇಶ್‌ ನಡುವೆ ಮಾರಾಮಾರಿ: ರಾಜಿ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಬಿಜೆಪಿಯ ಆಪರೇಷನ್‌ ಕಮಲ ಪ್ರಯತ್ನ ವಿಫಲಗೊಳಿಸಲು ಕಾಂಗ್ರೆಸ್‌ ಶಾಸಕರನ್ನು ಜನವರಿ 18ರಂದು ಕೆಲವು ದಿನಗಳ ಕಾಲ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. 2019 ಜನವರಿ 19ರ ರಾತ್ರಿ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದಿತ್ತು.

Bar & Bench

ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಮತ್ತು ಕಾಂಗ್ರೆಸ್‌ ಶಾಸಕ ಕಂಪ್ಲಿ ಗಣೇಶ್ ನಡುವಿನ ಹಲ್ಲೆ ಪ್ರಕರಣವು ಸಂಧಾನದ ಹಿನ್ನೆಲೆಯಲ್ಲಿ ಸೋಮವಾರ ಅಂತ್ಯಕಂಡಿದ್ದು ಕರ್ನಾಟಕ ಹೈಕೋರ್ಟ್‌ ಪ್ರಕರಣವನ್ನು ರದ್ದು ಮಾಡಿದೆ. ಬಿಜೆಪಿಯ ʼಆಪರೇಷನ್‌ ಕಮಲʼದಿಂದ ಪಾರಾಗಲು ಬೆಂಗಳೂರಿನ ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ತನ್ನ ಶಾಸಕರನ್ನು ಇಟ್ಟಿದ್ದ ಸಂದರ್ಭದಲ್ಲಿ ಆಗ ಕಾಂಗ್ರೆಸ್‌ನಲ್ಲಿದ್ದ ಆನಂದ್‌ ಸಿಂಗ್‌ ಮತ್ತು ಗಣೇಶ್‌ ನಡುವೆ ಮಾರಾಮಾರಿ ನಡೆದಿತ್ತು. ಘಟನೆಯಲ್ಲಿ ಆನಂದ್‌ ಸಿಂಗ್‌ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ನೇತೃತ್ವದ ಏಕ ಸದಸ್ಯ ಪೀಠವು ಹಲ್ಲೆ ಪ್ರಕರಣದಲ್ಲಿ ಕೊಲೆ ಯತ್ನ ಆರೋಪ ಅನ್ವಯವಾಗುವುದಿಲ್ಲ. ಅಲ್ಲದೇ, ಆರೋಪಿ ಗಣೇಶ್‌ ಮತ್ತು ಹಲ್ಲೆಗೊಳಗಾದ ಆನಂದ್‌ ಸಿಂಗ್‌ ನಡುವೆ ಸಂಧಾನ ಆಗಿರುವ ಹಿನ್ನೆಲೆಯಲ್ಲಿ ಪ್ರಕರಣ ರದ್ದುಪಡಿಸಲಾಗಿದೆ ಎಂದರು.

ಕಂಪ್ಲಿ ಗಣೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರು ಕೊಲೆ ಯತ್ನ ಆರೋಪ ಹಿನ್ನೆಲೆಯಲ್ಲಿ ರಾಜಿ ಸಾಧ್ಯವಾಗಿರಲಿಲ್ಲ. ಇದು ಹಣಕಾಸಿನ ವ್ಯಾಜ್ಯಕ್ಕೆ ನಡೆದ ಜಗಳವಷ್ಟೇ. ಕೊಲೆ ಯತ್ನದ ಉದ್ದೇಶ, ಪ್ರಯತ್ನ ಇರಲಿಲ್ಲ. ಪ್ರಕರಣದಲ್ಲಿ ಕೊಲೆ ಯತ್ನ ಸೆಕ್ಷನ್ ಅನ್ವಯವಾಗುವುದಿಲ್ಲ. ಜೊತೆಗೆ ಈಗಾಗಲೇ ಇಬ್ಬರೂ ರಾಜಿಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಇದನ್ನು ದಾಖಲಿಸಿಕೊಂಡು ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದರು.

ಪೊನ್ನಣ್ಣ ಅವರ ವಾದವನ್ನು ಪುರಸ್ಕರಿಸಿದ ಪೀಠವು ಶಾಸಕ ಗಣೇಶ್ ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶ ಮಾಡಿತು.

ಬಿಜೆಪಿಯ ಆಪರೇಷನ್‌ ಕಮಲ ಪ್ರಯತ್ನವನ್ನು ವಿಫಲಗೊಳಿಸುವ ಉದ್ದೇಶದಿಂದ ಕಾಂಗ್ರೆಸ್‌ ಶಾಸಕರನ್ನು 2019ರ ಜನವರಿ 18ರಿಂದ ಕೆಲವು ದಿನಗಳ ಕಾಲ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. 2019 ಜನವರಿ 19ರ ರಾತ್ರಿ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆನಂದ್‌ ಸಿಂಗ್ ಅವರನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ, ಆನಂದ್ ಸಿಂಗ್ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಗಣೇಶ್ ವಿರುದ್ಧ ಕೊಲೆ ಯತ್ನದಡಿ ಎಫ್‌ಐಆರ್ ದಾಖಲಿಸಿದ್ದರು. ಈ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತ್ತು.

ಗಲಾಟೆ ಬಳಿಕ ಶಾಸಕ ಗಣೇಶ್ ತಲೆ ಮರೆಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಹಿರಿಯ ನಾಯಕರ ಸೂಚನೆಯಂತೆ ಇಬ್ಬರೂ ಪ್ರಕರಣದಲ್ಲಿ ರಾಜಿಯಾಗಲು ನಿರ್ಧರಿಸಿದ್ದರು. ಆದರೆ, ನ್ಯಾಯಾಲಯ ಕೊಲೆ ಯತ್ನ ಆರೋಪ ಇದ್ದುದರಿಂದ ರಾಜಿಗೆ ಸಮ್ಮತಿಸಿರಲಿಲ್ಲ. ನಂತರ ತಲೆ ಮರೆಸಿಕೊಂಡಿದ್ದ ಗಣೇಶ್ ಹಾಗೂ ಆನಂದ್ ಸಿಂಗ್ ಇಬ್ಬರೂ ಹೈಕೋರ್ಟ್‌ನಲ್ಲಿ ರಾಜಿ ಮಾಡಿಕೊಳ್ಳಲು ಸಮ್ಮತಿಸುವಂತೆ ಮನವಿ ಮಾಡಿದ್ದರು.