ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಭಾಸ್ಕರ್ ಜಾಧವ್ ಅವರನ್ನು ನಿಂದಿಸಿದ ಮತ್ತು ಅವರನ್ನು ಹಿಡಿದು ಎಳೆದಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದ ವರೆಗೆ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳದಂತೆ ಅಮಾನತು ಮಾಡಿದ್ದ ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ಶಾಸಕರ ಅಮಾನತು ಮುಂಗಾರು ಅಧಿವೇಶನಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.
“ಶಾಸಕರ ಮನವಿಗೆ ಸಮ್ಮತಿಸಲಾಗಿದೆ. ವಿಧಾನಸಭೆಯ ನಿರ್ಣಯವು ಕಾನೂನಿನ ದೃಷ್ಟಿಯಲ್ಲಿ ದುರುದ್ದೇಶಪೂರಿತವಾಗಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ವಿಧಾನಸಭಾ ಕ್ಷೇತ್ರದ ಸದಸ್ಯರಾಗಿರುವ ಅರ್ಜಿದಾರರು ಎಲ್ಲಾ ಸೌಲಭ್ಯಗಳಿಗೆ ಅರ್ಹರಾಗಿದ್ದಾರೆ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಅಶೀಶ್ ಶೆಲಾರ್, ಡಾ. ಸಂಜಯ್ ಕುಟೆ, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಾಲ್ಕರ್, ಹರೀಶ್ ಪಿಂಪ್ಲೆ, ಜೈಕುಮಾರ್ ರಾವಲ್, ಯೋಗೇಶ್ ಸಾಗರ್, ನಾರಾಯಣ್ ಕುಚೆ, ಬುಂಟಿ ಭಂಗಾಡಿಯಾ, ಪರಾಗ್ ಅಲ್ವಾನಿ ಮತ್ತು ರಾಮ್ ಸಾತ್ಪುತೆ ಅವರನ್ನು 2021ರ ಮುಂಗಾರು ಅಧಿವೇಶನದಲ್ಲಿ ಸ್ಪೀಕರ್ ಜೊತೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸದನ ಪ್ರವೇಶಿಸದಂತೆ ಅಮಾನತು ಮಾಡಲಾಗಿತ್ತು.
ತಮ್ಮ ಅಮಾನತು ಪ್ರಶ್ನಿಸಿ, ಸಂವಿಧಾನದ 14ನೇ ವಿಧಿ ಮತ್ತು ಸ್ವಾಭಾವಿಕ ನ್ಯಾಯ ಉಲ್ಲಂಘನೆ ಮಾಡಲಾಗಿದೆ ಎಂದು ಶಾಸಕರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಸ್ಪೀಕರ್ ಭಾಸ್ಕರ್ ಜಾಧವ್ ಅವರನ್ನು ಅವರ ಕಚೇರಿಯಲ್ಲಿ ನಿಂದನೆ ಮತ್ತು ಅವರನ್ನು ಹಿಡಿದು ಎಳೆದಾಡಿದ್ದನ್ನು ಅಲ್ಲಗಳೆದಿದ್ದ ಅರ್ಜಿದಾರರು ಸ್ಪೀಕರ್‌ಗೆ ಕ್ಷಮೆ ಕೋರಿದ್ದಾಗಿ ಮನವಿಯಲ್ಲಿ ಉಲ್ಲೇಖಿಸಿದ್ದರು. ಅರ್ಜಿದಾರ ಶಾಸಕರು ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೊ ತುಣುಕು ನೀಡುವಂತೆ ಕೋರಿದ್ದರು. ಆದರೆ, ಹಾಗೆ ಮಾಡುವುದು ಸದನದ ನಿಯಮಗಳಿಗೆ ವಿರುದ್ಧ ಎಂದು ವಿಡಿಯೊ ತುಣುಕು ನೀಡಲು ಉಪ ಸ್ಪೀಕರ್ ನಿರಾಕರಿಸಿದ್ದರು.
ಹೆಚ್ಚಿನ ವಿವರಗಳಿಗೆ ಬಾರ್ ಅಂಡ್ ಬೆಂಚ್ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ