ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕದ್ರಿ ಪೂರ್ವ ಠಾಣೆ ಪೋಲಿಸರು ದಾಖಲಿಸಿದ್ದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಮತ್ತು ಮಂಗಳೂರಿನ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಸಂಸದ ನಳೀನ್ ಕುಮಾರ್ ಕಟೀಲ್ ಅವರು 2017ರಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಅರ್ಜಿ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಪ್ರಕರಣದಲ್ಲಿ ಆರೋಪ ರುಜುವಾತುಪಡಿಸುವಂತಹ ಅಂಶಗಳಿಲ್ಲ. ಅಲ್ಲದೇ ಸಂವಿಧಾನದ 105ನೇ ವಿಧಿಯಡಿ ಸರ್ಕಾರದ ಆಡಳಿತ ಯಂತ್ರ ಅಥವಾ ಅಧಿಕಾರಿಗಳು ತಪ್ಪು ಮಾಡುತ್ತಿದ್ದಾರೆ ಎಂಬುದು ಅರಿವಿಗೆ ಬಂದರೆ ಜನಪ್ರತಿನಿಧಿಗಳು (ಸಂಸದರು) ಮಧ್ಯಪ್ರವೇಶಿಸುವ ಅಧಿಕಾರ ಹೊಂದಿದ್ದಾರೆ. ಆ ಕರ್ತವ್ಯವನ್ನು ಸಂಸದರು ನಿಭಾಯಿಸಿದ್ದಾರೆ. ಜನರನ್ನು ಪ್ರಚೋದಿಸುವ ಅಥವಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶ ಅವರದ್ದಾಗಿರಲಿಲ್ಲ” ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಮಾನ್ಯ ಮಾಡಿದ ಪೀಠವು ಎಫ್‌ಐಆರ್ ಮತ್ತು ವಿಚಾರಣೆಯನ್ನು ರದ್ದುಪಡಿಸಿದೆ. ಜೆಎಂಎಫ್‌ಸಿ ನ್ಯಾಯಾಲಯ ತಿರಿಸ್ಕರಿಸಿದ್ದ ಬಿ ರಿಪೋರ್ಟ್ ಅನ್ನು ಹೈಕೋರ್ಟ್ ಅಂಗೀಕರಿಸಿದೆ.
ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ 2017ರಂದು ಸೆಪ್ಟೆಂಬರ್ 7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೆರವಣಿಗೆ ನಡೆಸಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಮಂಗಳೂರು ಪೂರ್ವ ಠಾಣಾ ಇನ್ಸ್‌ಪೆಕ್ಟರ್ ಬಂಧಿಸಿದ್ದರು. ಈ ಕುರಿತು ದೂರವಾಣಿ ಕರೆ ಮೂಲಕ ಮಾಹಿತಿ ಪಡೆದಿದ್ದ ನಳಿನ್ ಕುಮಾರ್ ಕಟೀಲ್ ಅವರು ಅಂದು ಮಧ್ಯಾಹ್ನ 3 ಗಂಟೆಗೆ ಠಾಣೆಗೆ ತೆರಳಿ ಕಾರ್ಯಕರ್ತರ ಬಂಧನದ ಕುರಿತ ಡೈರಿಯನ್ನು ತಮಗೆ ತೋರಿಸುವಂತೆ ಇನ್ಸ್‌ಪೆಕ್ಟರ್ ಅವರನ್ನು ಕೇಳಿದ್ದರು.
ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ಜಿ. ನಾಯಕ್ ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಸಂಬಂಧ ಕಟೀಲ್ ಅವರ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಠಾಣಾಧಿಕಾರಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.