ಸುದ್ದಿಗಳು

ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕ: ಆರು ವಾರಗಳಲ್ಲಿ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್‌ ಗಡುವು

Siddesh M S

ರಾಜ್ಯದಾದ್ಯಂತ ಖಾಲಿ ಇರುವ 205 ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕಾತಿ ಪ್ರಕ್ರಿಯೆಯನ್ನು ಆರು ವಾರಗಳಲ್ಲಿ ಪೂರ್ಣಗೊಳಿಸಬೇಕು. ತಪ್ಪಿದ್ದಲ್ಲಿ ಪ್ರಾಸಿಕ್ಯೂಷನ್‌ ನಿರ್ದೇಶನಾಲಯದ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಕರ್ನಾಟಕ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“205 ಎಪಿಪಿಗಳ ನೇಮಕಾತಿಗೆ ಸಂಬಂಧಿಸಿದಂತೆ ಮೇ 28 ಮತ್ತು 29ರಂದು ಪರೀಕ್ಷೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಶ್ನೆ ಪತ್ರಿಕೆ ರೂಪಿಸುವ ಜವಾಬ್ದಾರಿಯನ್ನು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್‌ಎಲ್‌ಎಸ್‌ಐಯು) ಎನ್‌ಎಲ್‌ಎಸ್‌ಐಯುಗೆ ನೀಡಲಾಗಿತ್ತು. ಈ ಪ್ರಶ್ನೆ ಪತ್ರಿಕೆಯಲ್ಲಿ ಸಾಂವಿಧಾನಿಕ ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚು ಪ್ರಶ್ನೆಗಳಿದ್ದು, ಇದಕ್ಕೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಮತ್ತು ಬೆಂಗಳೂರು ವಕೀಲರ ಸಂಘ (ಎಎಬಿ) ಆಕ್ಷೇಪಿಸಿದ್ದರಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದನ್ನು ಪರಿಗಣಿಸಿ ಆರು ವಾರಗಳ ಹೆಚ್ಚು ಸಮಯವನ್ನು ಪರೀಕ್ಷೆ ನಡೆಸಲು ನೀಡಲಾಗಿದೆ. ಇದನ್ನು ಪಾಲಿಸಲು ವಿಫಲವಾದಲ್ಲಿ ಪ್ರಾಸಿಕ್ಯೂಷನ್‌ ನಿರ್ದೇಶನಾಲಯದ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ವಿಚಾರಣೆಗೆ ಹಾಜರಾಗಬೇಕು” ಎಂದು ನ್ಯಾಯಾಲಯ ಆದೇಶ ಮಾಡಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ವಿಜಯಕುಮಾರ್‌ ಎ. ಪಾಟೀಲ್‌ ಅವರು “205 ಎಪಿಪಿಗಳ ನೇಮಕಾತಿ ಕುರಿತು ಮೇ 28 ಮತ್ತು 29ರಂದು ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಬೆಂಗಳೂರಿನ ಎನ್‌ಎಲ್‌ಎಸ್‌ಐಯುಗೆ ಕೋರಲಾಗಿತ್ತು. ಎನ್‌ಎಲ್‌ಎಸ್‌ಐಯು ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ಸಾಂವಿಧಾನಿಕ ಕಾನೂನಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಕೆಎಸ್‌ಬಿಸಿ ಮತ್ತು ಎಎಬಿ ಆಕ್ಷೇಪ ವ್ಯಕ್ತಪಡಿಸಿದ್ದವು" ಎಂದು ವಿವರಿಸಿದರು.

ಮುಂದುವರೆದದು, "ಪಾರದರ್ಶಕತೆ ಕಾಯ್ದುಕೊಳ್ಳಲು ಎನ್‌ಎಲ್‌ಎಸ್‌ಐಯುಗೆ ಪ್ರಶ್ನೆ ಪತ್ರಿಕೆ ರೂಪಿಸುವ ಜವಾಬ್ದಾರಿ ನೀಡಿದ್ದೆವು. ಹಿಂದೆ ಪಾರದರ್ಶಕತೆ ಕಾಯ್ದುಕೊಳ್ಳಲಾಗಿಲ್ಲ ಎಂದು ಆಕ್ಷೇಪಿಸಿ ಎರಡು ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಕರ್ನಾಟಕ ಲೋಕಸೇವಾ ಆಯೋಗವನ್ನೂ ಪ್ರಶ್ನೆ ಪತ್ರಿಕೆ ರೂಪಿಸಲು ಕೋರಲಾಗಿತ್ತು. ಈ ಮೊದಲು ಗೃಹ ಇಲಾಖೆ ಮತ್ತು ಪ್ರಾಸಿಕ್ಯೂಷನ್‌ ನಿರ್ದೇಶಕರು ಜೊತೆಗೂಡಿ ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸುತ್ತಿದ್ದರು. ಅಂತಿಮ ಪ್ರಶ್ನೆ ಪತ್ರಿಕೆಯನ್ನು ಪ್ರಾಸಿಕ್ಯೂಷನ್‌ ನಿರ್ದೇಶಕರು ತಯಾರಿಸುತ್ತಿದ್ದರು. ಈ ಬಾರಿ ಕೆಎಸ್‌ಬಿಸಿ ಮತ್ತು ಎಎಬಿಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಷ್ಟಕರವಾದ ರೀತಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ರೂಪಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ” ಎಂದರು.

“ಹೀಗಾಗಿ, ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿ, ಪರೀಕ್ಷಾ ದಿನಾಂಕವನ್ನು ಪುನರ್‌ ನಿಗದಿ ಮಾಡಲು ಎರಡು ವಾರ ಸಮಯ ನೀಡಬೇಕು. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದ ಹೈಕೋರ್ಟ್‌ನ ಸೌಲಭ್ಯವನ್ನು ನಾವು ಪಡೆದುಕೊಳ್ಳುತ್ತೇವೆ" ಎಂದು ಹೇಳಿದರು. ಅಲ್ಲದೆ, "ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶಾಶ್ವತ ಅಭಿಯೋಜಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಎರಡು ತಿಂಗಳು ಕಾಲಾವಕಾಶ ನೀಡಬೇಕು” ಎಂದು ಇದೇ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಕೋರಿದರು.

ಇದಕ್ಕೆ ನ್ಯಾಯಾಲಯವು “ನೀವು ಎನ್‌ಎಲ್‌ಎಸ್‌ಯುಐ ಸಂಪರ್ಕಿಸಿದರೆ ಅವರು ಏನು ಮಾಡುತ್ತಾರೆ? ಅವರು ಅದನ್ನೇ ಮಾಡುತ್ತಾರೆ. ನೀವು ನಮ್ಮನ್ನು ಕೋರಿದ್ದರೆ ನಾವು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿಕೊಡುತ್ತಿದ್ದೆವು. ನೀವು ಸೂಚನೆ ಪಡೆದು, ಪರೀಕ್ಷೆ ನಡೆಸುವ ಮುಂದಿನ ದಿನಾಂಕವನ್ನು ನಮಗೆ ತಿಳಿಸಿ. ನಮ್ಮಲ್ಲಿ ಸಾಕಷ್ಟು ಪ್ರಶ್ನೆ ಪತ್ರಿಕೆಗಳು ಸಿದ್ಧವಾಗುತ್ತವೆ. ನಿಮಗೆ ಎರಡು ದಿನಗಳಲ್ಲಿ ಪ್ರಶ್ನೆ ಪತ್ರಿಕೆ ನೀಡಬಹುದು. ನಮ್ಮಲ್ಲಿ ನೇಮಕಾತಿಗೆ ಸಂಬಂಧಿಸಿದ ರಿಜಿಸ್ಟ್ರಾರ್‌ ಇದ್ದಾರೆ. 15 ದಿನದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿ, 45 ದಿನಗಳಲ್ಲಿ ಫಲಿತಾಂಶ ಪ್ರಕಟಿಸಬೇಕು. ಫೆಬ್ರವರಿಯಲ್ಲಿ ನಾವು ನಿಮಗೆ ಮೂರು ತಿಂಗಳು ಕಾಲಾವಕಾಶ ನೀಡಿದ್ದೆವು. ಆದರೆ, ಏನೇನೂ ಆಗಿಲ್ಲ” ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.