ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ಅನ್ನು ದೆಹಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ರದ್ದುಗೊಳಿಸಿದೆ.
ಬಿಜೆಪಿ ತನ್ನ ಶಾಸಕರನ್ನು ಸಂಪರ್ಕಿಸಿ ಪಕ್ಷಾಂತರಕ್ಕಾಗಿ ಲಂಚದ ಆಮಿಷ ಒಡ್ಡುತ್ತಿದೆ ಎಂದು ಎಎಪಿ ನಾಯಕರು ಮಾಡಿದ ಆರೋಪ ಪ್ರಶ್ನಿಸಿ ಬಿಜೆಪಿ ಮುಖಂಡ ಪ್ರವೀಣ್ ಶಂಕರ್ ಕಪೂರ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಮೇ 28, 2024ರಂದು ಎಸಿಎಂಎಂ ನ್ಯಾಯಾಲಯ ಹೊರಡಿಸಿದ ಆದೇಶ ವಾಸ್ತವಿಕ ದೋಷ ಮತ್ತು ದೌರ್ಬಲ್ಯದಿಂದ ಕೂಡಿದೆ ಎಂದು ಶಾಸಕರು ಮತ್ತು ಸಂಸದರ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ತಿಳಿಸಿದರು.
ಅಸಮಾನ ರಾಜಕೀಯ ರಚನೆಗಳ ನಡುವೆ ಪ್ರಜಾಸತ್ತಾತ್ಮಕ ಸಮತೋಲನ ಬುಡಮೇಲಾಗುವಂತೆ ಮತ್ತು ಅನ್ಯಾಯಕ್ಕೊಳಗಾಗದ ವ್ಯಕ್ತಿಗಳು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯಿಂದಾಗಿ ಯೋಜಿತ ಕ್ರಿಮಿನಲ್ ಮೊಕದ್ದಮೆಗಳ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಹಾಗೂ ಮತದಾನದ ಹಕ್ಕಿನ ವಿರುದ್ಧ ತಾನು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಕಠಿಣ ಪದಗಳಲ್ಲಿ ವಿವರಿಸಿದೆ.
ಅಲ್ಲದೆ ಬಿಜೆಪಿ ನಾಯಕನ ದೂರಿನ ಬಗ್ಗೆಯೂ ಕಿಡಿಕಾರಿರುವ ನ್ಯಾಯಾಲಯ ಮಾನನಷ್ಟ ಮೊಕದ್ದಮೆಯ ಅಸ್ತ್ರ ಬಳಸಿ ಸಣ್ಣ ಪಕ್ಷವಾದ ಎಎಪಿಯ ಧ್ವನಿ ಹತ್ತಿಕ್ಕಲು ಬಿಜೆಪಿಯಂತಹ ದೊಡ್ಡ ಪಕ್ಷ ಯತ್ನಿಸುತ್ತಿರುವಂತೆ ತೋರುತ್ತಿದ್ದು ಇದಕ್ಕೆ ಅನುಮತಿ ನೀಡಲಾಗದು ಎಂದಿದೆ.
ಪರ್ಯಾಯ ರಾಜಕೀಯ ಸಂಕಥನ ಒಪ್ಪಿಕೊಳ್ಳುವಲ್ಲಿ ಬಿಜೆಪಿ ವಿಶಾಲ ಮನೋಭಾವ ತಳೆಯಬೇಕು ಎಂದು ಕೂಡ ನ್ಯಾಯಾಲಯ ಕಿವಿಮಾತು ಹೇಳಿದೆ.
ಸಮನ್ಸ್‌ಗೆ ಹಿನ್ನೆಲೆಯಾದ ಪುರಾವೆಗಳು ಅತಿಶಿ ಅವರನ್ನು ಆರೋಪಿಯನ್ನಾಗಿ ಮಾಡಲು ಸಾಕಷ್ಟು ಆಧಾರ ಒದಗಿಸಿಲ್ಲ. ಅತಿಶಿ ಆರೋಪ ಬಿಜೆಪಿಯ ಮಾನಹಾನಿ ಮಾಡುವಂಥದ್ದು ಎಂದು ಪರಿಗಣಿಸಲಾಗದು. ಅತಿಶಿ ಮಾಡಿದ ಆರೋಪಗಳು ರಾಜಕೀಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಒಳಗೊಂಡಿವೆಯೇ ವಿನಾ ಐಪಿಸಿ ಸೆಕ್ಷನ್ 500ರ ಅಡಿ ಮಾನನಷ್ಟ ಮೊಕದ್ದಮೆ ವ್ಯಾಪ್ತಿಗೆ ಬರುವುದಿಲ್ಲ ಎಂದ ನ್ಯಾಯಾಲಯ ಸಮನ್ಸ್ ಆದೇಶ ರದ್ದುಗೊಳಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]