Andhra Pradesh Chief Minister Jagan Mohan Reddy
Andhra Pradesh Chief Minister Jagan Mohan Reddy 
ಸುದ್ದಿಗಳು

ಆಂಧ್ರ ಸಿಎಂ ಜಗನ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ಕೋರಿ ಅಟಾರ್ನಿ ಜನರಲ್‌ಗೆ ಪತ್ರ

Bar & Bench

ಆಂಧ್ರಪ್ರದೇಶದ ಮುಖ್ಯ ಮಂತ್ರಿ ವೈ ಎಸ್ ಜಗನ್‌ ಮೋಹನ್ ರೆಡ್ಡಿ ಮತ್ತು ಅವರ ಪ್ರಧಾನ ಸಲಹೆಗಾರ ಅಜೇಯ ಕಲ್ಲಂ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ಕೋರಿ ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕರೊಬ್ಬರು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತಿತರ ನ್ಯಾಯಮೂರ್ತಿಗಳ ವಿರುದ್ಧ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿಗೆ ಜಗನ್‌ ಅವರು ಬರೆದ ಪತ್ರದಿಂದಾಗಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಅಧಿಕಾರಗಳೆರಡೂ ಅಪವಾದಕ್ಕೆ ತುತ್ತಾಗಿವೆ ಎಂದು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಪತ್ರದಲ್ಲಿ ತಿಳಿಸಿದ್ದಾರೆ.

ʼಇಂತಹ ಪ್ರವೃತ್ತಿಗೆ ಅನುಮತಿ ನೀಡಿದರೆ ರಾಜಕೀಯ ನಾಯಕರು ತಮ್ಮ ಪರವಾಗಿ ತೀರ್ಪು ನೀಡದ ನ್ಯಾಯಾಧೀಶರ ವಿರುದ್ಧ ಮನಬಂದಂತೆ ಆರೋಪ ಮಾಡಲಾರಂಭಿಸುತ್ತಾರೆʼ ಮತ್ತು ಈ ನಡೆ ಶೀಘ್ರದಲ್ಲೇ ಸ್ವತಂತ್ರ ನ್ಯಾಯಾಂಗದ ಪಾಲಿಗೆ ಮರಣಮೃದಂಗವಾಗುತ್ತದೆ" ಎಂದು ಉಪಾಧ್ಯಾಯ ಹೇಳಿದ್ದಾರೆ. ʼಭ್ರಷ್ಟಾಚಾರ ತಡೆ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಕನಿಷ್ಠ 31 ಪ್ರಕರಣಗಳಲ್ಲಿ ಆಂಧ್ರ ಸಿಎಂ ಸ್ವತಃ ಆರೋಪಿಯಾಗಿದ್ದಾರೆʼ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅವರಿಗೆ ಜಾಮೀನು ನೀಡಲಾಗಿದ್ದು ವಿಚಾರಣೆ ನಡೆಯುತ್ತಿರುವಾಗಲೇ ಸಾರ್ವಜನಿಕ ಸೇವಕರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಜಗನ್ ಒಬ್ಬ ಶಾಸಕರು ಕೂಡ ಆಗಿದ್ದು ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆ ಕುರಿತು ತಾವು ಸಲ್ಲಿಸಿದ್ದ ಅರ್ಜಿ ಆಧರಿಸಿ ಸುಪ್ರೀಂಕೋರ್ಟ್‌ಗೆ ತೆಲಂಗಾಣ ಸರ್ಕಾರ ಮಾಹಿತಿ ನೀಡಿದ್ದು ಜಗನ್‌ ಅವರ ಮೇಲೆ ನೇರ ಪ್ರಭಾವ ಬೀರಿದೆ ಎಂದು ಅವರು ಹೇಳಿದ್ದಾರೆ.

ಎನ್‌ ವಿ ರಮಣ ವಿರುದ್ಧ ಜಗನ್‌ ಅವರು ಬರೆದ ಪತ್ರ ಕೀಳು ಅಭಿರುಚಿಯಿಂದ ಕೂಡಿದ್ದು ಶಾಸಕರ ವಿರುದ್ಧ ತ್ವರಿತ ವಿಚಾರಣೆ ಕೋರಿ ತಾವು ಸಲ್ಲಿಸಿದ್ದ ಅರ್ಜಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಜಗನ್‌ ಅವರ ಪ್ರಧಾನ ಸಲಹೆಗಾರ ಕಲ್ಲಂ ವಿರುದ್ಧವೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅವರು ʼಕಲ್ಲಂ ರೀತಿಯ ವ್ಯಕ್ತಿಗಳು ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದು ಅಂತಹ ವಿಷಯಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮುನ್ನ ಚೆನ್ನಾಗಿ ಅರಿತಿರಬೇಕಿತ್ತು” ಎಂದು ಹೇಳಿದ್ದಾರೆ.