Justice Suraj Govindraj 
ಸುದ್ದಿಗಳು

ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ: ಪತ್ನಿ ನಿಖಿತಾ ಜಾಮೀನು ಅರ್ಜಿಯನ್ನು ಜ. 4ರಂದೇ ಇತ್ಯರ್ಥಪಡಿಸಲು ಹೈಕೋರ್ಟ್ ನಿರ್ದೇಶನ

ಪ್ರಸ್ತುತ ಅರ್ಜಿದಾರರು ನ್ಯಾಯಾಂಗ ಬಂಧನಲ್ಲಿದ್ದು, ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ತಮ್ಮನ್ನು ಬಂಧಿಸುವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂಬುದಕ್ಕೆ ವಿವರಣೆ ನೀಡಿಲ್ಲ ಎಂದು ಆಕ್ಷೇಪಣೆ.

Bar & Bench

ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಿಖಿತಾ ಸಿಂಘಾನಿಯಾ (ಅತುಲ್ ಪತ್ನಿ) ಜಾಮೀನು ಅರ್ಜಿಯನ್ನು ಜನವರಿ 4ರಂದೇ ಇತ್ಯರ್ಥಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಪತ್ನಿ ಮತ್ತು ಆಕೆಯ ಕುಟುಂಬದವರ ಕಿರುಕುಳದಿಂದಾಗಿ ಬೇಸತ್ತಿರುವುದಾಗಿ ಹೇಳಿ ಸುದೀರ್ಘ ವಿಡಿಯೋ ಮಾಡಿ ಅತುಲ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿತ್ತು.

ಪ್ರಕರಣದಲ್ಲಿ ಜಾಮೀನು ಕೋರಿರುವ ನಿಖಿತಾ ಮತ್ತು ಕುಟುಂಬದವರು ಸೂಕ್ತ ಕಾರಣ ನೀಡದೆ ತಮ್ಮನ್ನು ಬಂಧಿಸಲಾಗಿದೆ ಎಂದು ಜಾಮೀನು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ. ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂತಿ ಸೂರಜ್ ಗೋವಿಂದರಾಜ್‌ ಅವರ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ಅರ್ಜಿದಾರರಲ್ಲಿ ಒಬ್ಬರಾದ ನಿಖಿತಾಗೆ ಸಣ್ಣ ಮಗುವಿದೆ. ಮಗುವನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಮಗುವಿನ ಅಜ್ಜ (ತಂದೆಯ ಅಪ್ಪ) ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಸಂಬಂಧ ನಿಖಿತಾ ಸಿಂಘಾನಿಯಾ ಅವರಿಗೆ ನೋಟಿಸ್ ಜಾರಿಯಾಗಿದೆ. ಆ ನೋಟಿಸ್‌ಗೆ ಪ್ರತಿಕ್ರಿಯೆ ನೀಡಬೇಕಾಗಿದೆ. ಆದರೆ, ಪ್ರಸ್ತುತ ಅರ್ಜಿದಾರರು ನ್ಯಾಯಾಂಗ ಬಂಧನಲ್ಲಿದ್ದು, ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ತಮ್ಮನ್ನು ಬಂಧಿಸುವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂಬುದಕ್ಕೆ ವಿವರಣೆ ನೀಡಿಲ್ಲ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು” ಎಂದು ಮನವಿ ಮಾಡಿದರು.

ಸರ್ಕಾರದ ಪರ ವಕೀಲರು “ಪ್ರಕರಣ ಸಂಬಂಧ ತನಿಖಾಧಿಕಾರಿಗಳಿಂದ ಮಾಹಿತಿ ಪಡೆಯಬೇಕಾಗಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು” ಎಂದು ಪೀಠಕ್ಕೆ ತಿಳಿಸಿದರು.

ವಾದ ಆಲಿದ ಪೀಠವು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿದಾರರ ಜಾಮೀನು ಅರ್ಜಿ 2025ರ ಜನವರಿ 4ಕ್ಕೆ ನಿಗದಿಯಾಗಿದ್ದು, ಅಂದೇ ವಿಚಾರಣೆ ಪೂರ್ಣಗೊಳಿಸಿ ಇತ್ಯರ್ಥಪಡಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ಪತ್ನಿ ಹಾಗೂ ಆಕೆಯ ಮನೆಯವರು ಕಿರುಕುಳ ನೀಡಿರುವುದಾಗಿ ಆರೋಪಿಸಿ ಸುದೀರ್ಘ ಡೆತ್ ನೋಟ್ ಬರೆದು ಡಿಸೆಂಬರ್‌ 9ರಂದು ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೆಕೊಳಲಿನಲ್ಲಿದ್ದ ಮನೆಯಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಾವಿಗೂ ಮುನ್ನ ಮೊಬೈಲ್‌ನಲ್ಲಿ ಮಾಡಿಕೊಂಡಿದ್ದ ವಿಡಿಯೊ ವೈರಲ್ ಆಗುತ್ತಿದ್ದಂತೆ ರಾಷ್ಟ್ರದೆಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 108ರ ಅಡಿ ಆತ್ಮಹತ್ಯೆಗೆ ಪ್ರಚೋದನೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಡಿಸೆಂಬರ್‌ 20ರಂದು ನಿಖಿತಾಳನ್ನು ಹರಿಯಾಣದ ಗುರುಗ್ರಾಮ ಹಾಗೂ ತಾಯಿ ಮತ್ತು ಸಹೋದರನನ್ನು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಹೋಟೆಲ್‌ವೊಂದರಲ್ಲಿ ಬಂಧಿಸಿದ್ದರು. ಸದ್ಯ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.