
ಉತ್ತರ ಪ್ರದೇಶ ಮೂಲದ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಅತುಲ್ ಸುಭಾಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಅವರ ಪರಿತ್ಯಕ್ತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬ ಸದಸ್ಯರು ನಿರೀಕ್ಷಣಾ ಜಾಮೀನು ಕೋರಿ ಅಲಾಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೈಕೋರ್ಟ್‌ನ ಜಾಲತಾಣದ ಪ್ರಕಾರ, ನಿಕಿತಾ, ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಮತ್ತು ಮಾವ ಸುಶೀಲ್ ಸಿಂಘಾನಿಯಾ ಅವರು ಡಿಸೆಂಬರ್ 13 ರಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯುವ ನಿರೀಕ್ಷೆಯಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ ಅಡಿಯಲ್ಲಿ ನಿಕಿತಾ ಮತ್ತು ಅವರ ಮೂವರು ಕುಟುಂಬ ಸದಸ್ಯರ ವಿರುದ್ಧ ಅತುಲ್ ಸಹೋದರ ಬಿಕಾಸ್ ಕುಮಾರ್ ಅವರು ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಸಾಫ್ಟ್‌ವೇರ್ ಇಂಜಿನಿಯರ್ ಸುಭಾಷ್ (34 ವರ್ಷ) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಪರಿತ್ಯಕ್ತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬವು ತನಗೆ ಕಿರುಕುಳ ನೀಡಿದೆ ಎಂದು ಅವರು ಡೆತ್ ನೋಟ್ ಬರೆದಿದ್ದಲ್ಲದೆ 90 ನಿಮಿಷಗಳ ವಿಡಿಯೋ ಕೂಡ ರೆಕಾರ್ಡ್ ಮಾಡಿದ್ದರು.
ಅವರ ವಿಡಿಯೋ ಮತ್ತು ಸೂಸೈಡ್ ನೋಟ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದ್ದು, ನಿಕಿತಾ ಮತ್ತು ಅವರ ಕುಟುಂಬ ಸದಸ್ಯರನ್ನು ಬಂಧಿಸುವಂತೆ ಹಲವರು ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದ ಜೌನ್‌ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ, ಜೀವನಾಂಶ ಮತ್ತು ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಯುತ್ತಿರುವಾಗಲೇ ನಿಕಿತಾ ಸಿಂಘಾನಿಯಾ ಮತ್ತವರ ಕುಟುಂಬ ತನ್ನ ವಿರುದ್ಧ ಅನೇಕ ವೈವಾಹಿಕ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದೆ ಎಂದು ಅವರು ವಿಡಿಯೋದಲ್ಲಿ ಆರೋಪಿಸಿದ್ದರು.
ಮತ್ತೊಂದೆಡೆ, ಘಟನೆಯ ಹಿನ್ನೆಲೆಯಲ್ಲಿ ಪುರುಷರ ವಿರುದ್ಧ ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯ ಕಾನೂನುಗಳ ದುರುಪಯೋಗ ತಪ್ಪಿಸಲು ಮಾರ್ಗಸೂಚಿ ರೂಪಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ.