ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು 'ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯಿದೆ- 1991'ರ ಸಿಂಧುತ್ವ ಕುರಿತು ವ್ಯವಹರಿಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ಯು ಯು ಲಲಿತ್, ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಹಾಗೂ ಅಜಯ್ ರಾಸ್ತೋಗಿ ಅವರಿದ್ದ ಪೀಠ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಮೆಹ್ತಾ ಉತ್ತರಿಸಿದರು.
"1991ರ ಕಾಯಿದೆಯು ಅಯೋಧ್ಯೆಯ ತೀರ್ಪಿನ ವ್ಯಾಪ್ತಿಗೆ ಒಳಪಟ್ಟಿದೆಯೇ? ನಿಮ್ಮ ವೈಯಕ್ತಿಕ ದೃಷ್ಟಿಕೋನವೇನು" ಎಂದು ಪೀಠ ಎಸ್‌ಜಿ ಮೆಹ್ತಾ ಅವರನ್ನು ಕೇಳಿತು. ಅದಕ್ಕೆ ಅವರು “ಇದನ್ನು ಒಳಗೊಂಡಿಲ್ಲ” ಎಂದು ಪ್ರತಿಕ್ರಿಯಿಸಿದರು.
ರಾಮ ಜನ್ಮಭೂಮಿ ಆಂದೋಲನ ಉತ್ತುಂಗದಲ್ಲಿದ್ದಾಗ ಜಾರಿಗೆ ಬಂದ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆಯು ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ನಿರ್ಬಂಧ ವಿಧಿಸುತ್ತದೆ. ಅಲ್ಲದೆ ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಇಂತಹ ಪ್ರಕರಣಗಳನ್ನು ಕೈಬಿಡುವಂತೆ ಅದು ಹೇಳುತ್ತದೆ.
ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಇಂತಹ ಪ್ರಕರಣಗಳು ಕೊನೆಯಾಗಬೇಕು ಎಂದು ಕಾಯಿದೆ ಹೇಳಿತ್ತು. ಆದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳು ಪ್ರಕರಣ ಪರಿಶೀಲಿಸಲು ಮತ್ತು ತೀರ್ಪು ನೀಡಲು ಆಧಾರವಾಗಿದ್ದ ಈ ಕಾನೂನು ರಾಮ ಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ವಿನಾಯಿತಿ ನೀಡಿತ್ತು.
ಅಯೋಧ್ಯೆ ಭೂಮಿಗೆ ವಿನಾಯಿತಿ ನೀಡಿದ್ದರಿಂದ, ಅಯೋಧ್ಯೆಯಲ್ಲಿ ವಿವಾದಿತ ಸ್ಥಳವನ್ನು ಬಾಲ ದೈವ ರಾಮ್ ಲಲ್ಲಾಗೆ ನೀಡುವಾಗ ಸುಪ್ರೀಂ ಕೋರ್ಟ್ 2019ರಲ್ಲಿ ಈ ಕಾನೂನನ್ನು ಬಳಸಿತು.
ಆದರೆ ಕಾಯಿದೆಯ ದೃಷ್ಟಿಯಿಂದಾಗಿ ಇತರ ಜಾಗಗಳಿಗೆ ಸಂಬಂಧಿಸಿದ ಇಂತಹದ್ದೇ ವ್ಯಾಜ್ಯಗಳನ್ನು ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಸ್ಪಷ್ಟಪಡಿಸಿತ್ತು.
ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಪ್ರಸ್ತುತ ಅರ್ಜಿಯಲ್ಲಿ, ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಕಾಯಿದೆಯ ಸಿಂಧುತ್ವವು ಪರಿಗಣನೆಯಲ್ಲಿರಲಿಲ್ಲ ಮತ್ತು ಆ ತೀರ್ಪಿನಲ್ಲಿನ ಕಾಯಿದೆಗೆ ಸಂಬಂಧಿಸಿದಂತೆ ನ್ಯಾಯಾಲಯ ಮಾಡಿದ ಅವಲೋಕನಗಳು ಕೇವಲ ಪ್ರಾಸಂಗಿಕ ಅಭಿಪ್ರಾಯ ಮಾತ್ರವಾಗಿತ್ತು ಎಂದು ವಾದಿಸಲಾಗಿದೆ.
ಹಿಂದೂ, ಜೈನ, ಬೌದ್ಧ ಹಾಗೂ ಸಿಖ್ಖರಿಗೆ ಕಾನೂನು ಪರಿಹಾರಗಳನ್ನು ನಿರ್ಬಂಧಿಸುವ ಮೂಲಕ ಆಕ್ರಮಣಕಾರರ ಕಾನೂನುಬಾಹಿರ ಕೃತ್ಯಗಳನ್ನು ಶಾಶ್ವತವಾಗಿ ಮುಂದುವರೆಸಲು ಕಾಯಿದೆ ಅವಕಾಶ ನೀಡುತ್ತದೆ ಎಂದು ಬಿಜೆಪಿ ವಕ್ತಾರ ಅಶ್ವಿನಿ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ದೂರಿದ್ದಾರೆ. ಕಳೆದ ವರ್ಷ ಮೇನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿತ್ತು.
ಅಶ್ವಿನ್ ಅವರ ಅರ್ಜಿಯಲ್ಲಿ ಮಧ್ಯಪ್ರವೇಶ ಕೋರಿ ಜಮೀಯತ್ ಉಲೇಮಾ- ಎ-ಹಿಂದ್ ಪ್ರಸ್ತುತ ಇಸ್ಲಾಮ್ ಸ್ವರೂಪದಲ್ಲಿರುವ ಪೂಜಾ ಸ್ಥಳಗಳನ್ನು ಪರೋಕ್ಷವಾಗಿ ಗುರಿಯಾಗಿಸಲು ಅರ್ಜಿ ಯತ್ನಿಸುತ್ತಿದೆ ಎಂದಿತ್ತು. ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿತ್ತು.
ಇಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ಕೋರಿತು. ಜಮೀಯತ್ ಉಲೇಮಾ-ಎ- ಹಿಂದ್ ಪರ ವಾದ ಮಂಡಿಸಿದ ವಕೀಲೆ ವೃಂದಾ ಗ್ರೋವರ್ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ ನಂತರ ಪ್ರತಿಕ್ರಿಯೆ ಸಲ್ಲಿಸುವುದಾಗಿ ತಿಳಿಸಿದರು. ಅಯೋಧ್ಯೆ ತೀರ್ಪು 1991ರ ಕಾಯ್ದೆಗೆ ಸಂಬಂಧಿಸಿದ್ದು ಎಂಬುದು ಪ್ರತಿವಾದಿಗಳ ವಾದವಾಗಿದೆ ಎಂದು ಪೀಠ ತಿಳಿಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಅಯೋಧ್ಯೆ ಪ್ರಕರಣದಲ್ಲಿ ಕಾಯಿದೆಯ ಸಿಂಧುತ್ವ ಪರಿಗಣನೆಯಲ್ಲಿರಲಿಲ್ಲ ಎಂದರು. ಅಲ್ಲಿ ನಡೆದ ಎಲ್ಲಾ ಚರ್ಚೆಗಳು ನಿರ್ಣಾಯಕ ಅಂಶವಾಗಿರದೆ ಕೇವಲ ಅಭಿಪ್ರಾಯರೂಪದವಾಗಿದ್ದವು ಎಂದು ಅವರು ಪೀಠದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅವರು ನ್ಯಾಯಾಲಯದ ಪರಿಗಣಿಸಬೇಕಾದ ಕಾನೂನು ಪ್ರಶ್ನೆಗಳ ಪಟ್ಟಿಯನ್ನು ಕೂಡ ಸಲ್ಲಿಸಿದರು.
ವಕೀಲ ಕನು ಅಗರ್‌ವಾಲ್ ಅವರಿಗೆ ಪಟ್ಟಿ ಹಸ್ತಾಂತರಿಸುವಂತೆ ಸೂಚಿಸಿದ ನ್ಯಾಯಾಲಯ, ಈ ಪ್ರಶ್ನೆಗಳನ್ನು ಒಗ್ಗೂಡಿಸಿ ನ್ಯಾಯಾಲಯವು ಗಮನ ಕೇಂದ್ರೀಕರಿಸಬೇಕಾದ ಅಂಶಗಳ ಕುರಿತಾದ ಪ್ರಶ್ನೆಗಳನ್ನು ರೂಪಿಸಲು ಅವರಿಗೆ ಸೂಚಿಸಿತು. ಹಾಗೂ ಆ ಕ್ರೋಢೀಕೃತ ಪ್ರತಿಯನ್ನು ಎಲ್ಲ ಪಕ್ಷಕಾರರ ವಕೀಲರೊಂದಿಗೆ ಹಂಚಿಕೊಳ್ಳಲು, ಅದಕ್ಕೆ ಪಕ್ಷಕಾರರ ವಕೀಲರು ಮೂರು ಪುಟಗಳಿಗೆ ಮೀರದಂತೆ ಉತ್ತರಿಸಲು ಸೂಚಿಸಿತು. ನವೆಂಬರ್ 14ಕ್ಕೆ ಪ್ರಕರಣ ಮುಂದೂಡಿತು.