ಪೂಜಾ ಸ್ಥಳ ಕಾಯಿದೆ ಪ್ರಶ್ನಿಸಿದ್ದ ಅರ್ಜಿ ಆಲಿಸಲಿರುವ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಭಾಗೀಯ ಪೀಠ ನೋಟಿಸ್ ಜಾರಿಗೊಳಿಸಿದ್ದರೂ ಕೇಂದ್ರ ಸರ್ಕಾರ ಯಾವುದೇ ಉತ್ತರ ಸಲ್ಲಿಸಿಲ್ಲ ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠ ಎಂದು ಗಮನಿಸಿದೆ.
Supreme Court
Supreme Court

ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ- 1991 ಅನ್ನು ಪ್ರಶ್ನಿಸುವ ಅರ್ಜಿಗಳನ್ನು ಮುಂದಿನ ತಿಂಗಳು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.

ರಾಮ ಜನ್ಮಭೂಮಿ ಆಂದೋಲನ ಉತ್ತುಂಗದಲ್ಲಿದ್ದಾಗ ಜಾರಿಗೆ ಬಂದ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆಯು ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್‌ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ ನಿರ್ಬಂಧ ವಿಧಿಸುತ್ತದೆ. ಅಲ್ಲದೆ ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಇಂತಹ ಪ್ರಕರಣಗಳನ್ನು ಕೈಬಿಡುವಂತೆ ಅದು ಹೇಳುತ್ತದೆ.

Also Read
ಆರಾಧನಾ ಸ್ಥಳಗಳ ಕಾಯಿದೆ ಪ್ರಶ್ನಿಸಿ ಅರ್ಜಿ: ಪಕ್ಷಕಾರರನ್ನಾಗಿ ಸೇರಿಸಿಕೊಳ್ಳಲು ಸುಪ್ರೀಂಗೆ ಜಾಮಿಯತ್‌ ಉಲಾಮಾ ಮನವಿ

“ಪ್ರಕರಣವನ್ನು ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳು ಆಲಿಸಲಿದ್ದು ಅಕ್ಟೋಬರ್ 11, 2022 ರಂದು ಇದನ್ನು ಪಟ್ಟಿ ಮಾಡಲಾಗುವುದು. ಈ ಮಧ್ಯೆ ಎಲ್ಲಾ ಪಕ್ಷಕಾರರು ಪ್ರಕರಣಕ್ಕೆ ಸಂಬಂಧಿಸಿದ ಮನವಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಭಾಗೀಯ ಪೀಠ ನೋಟಿಸ್ ಜಾರಿಗೊಳಿಸಿದ್ದರೂ ಕೇಂದ್ರ ಸರ್ಕಾರ ಯಾವುದೇ ಉತ್ತರ ಸಲ್ಲಿಸಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠ ಎಂದು ಗಮನಿಸಿತು.

Also Read
ಆರಾಧನಾ ಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ವ್ಯಾಜ್ಯಗಳನ್ನು 32ನೇ ವಿಧಿಯಡಿ ಸರ್ವೋಚ್ಚ ನ್ಯಾಯಾಲಯಕ್ಕೆ ತರುವಂತಿಲ್ಲ: ಸುಪ್ರೀಂ

ಹೀಗಾಗಿ ಉತ್ತರ ಸಲ್ಲಿಸಲು ಸರ್ಕಾರಕ್ಕೆ ನ್ಯಾಯಾಲಯ ಎರಡು ವಾರಗಳು ಮತ್ತು ಮರುಪರಿಶೀಲನೆಗೆ ಇನ್ನೊಂದು ವಾರ ಕಾಲಾವಕಾಶ ನೀಡಿತು. ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ಕಾಶಿ ರಾಜಮನೆತನ ಮತ್ತು ಜಮಿಯತ್ ಉಲೇಮಾ-ಇ-ಹಿಂದ್‌ನ ಅರ್ಜಿಗಳನ್ನು ಕೂಡ ನ್ಯಾಯಾಲಯ ಪುರಸ್ಕರಿಸಿತು.

ಕಾಯಿದೆ ಜಾರಿಯಲ್ಲಿದ್ದರೂ ರಾಮ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಯಿತಿ ನೀಡಿದ್ದು ಇದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳಿಗೆ ವಿವಾದ ಪರಿಶೀಲಿಸಲು ಆಧಾರವಾಗಿದೆ. ಅಯೋಧ್ಯೆ ಭೂಮಿಗೆ ಮಾತ್ರ ಈ ವಿನಾಯಿತಿ ಇದ್ದು ಬೇರೆ ವಿವಾದಿತ ಸ್ಥಳಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿತ್ತು.

Also Read
ಜ್ಞಾನವಾಪಿ ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಳ್ಳಲು ಆರಾಧನಾ ಸ್ಥಳ ಕಾಯಿದೆ ಪ್ರಶ್ನಿಸಿದವರಿಂದ ಸುಪ್ರೀಂಗೆ ಮನವಿ

ಪ್ರಕರಣದ ತ್ವರಿತ ವಿಚಾರಣೆ ಕೋರಿ ಅರ್ಜಿ ಸಲ್ಲಿಸಿದ್ದ ಬಿಜೆಪಿ ವಕ್ತಾರ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಹಿಂದೂ, ಜೈನ, ಬೌದ್ಧ ಹಾಗೂ ಸಿಖ್ಖರಿಗೆ ಕಾನೂನು ಪರಿಹಾರ ನಿರಾಕರಿಸುವ ಮೂಲಕ ಅಕ್ರಮ ಆಕ್ರಮಣಕಾರರ ಕಾನೂನುಬಾಹಿರ ಕೃತ್ಯಗಳನ್ನು ಶಾಶ್ವತವಾಗಿ ಮುಂದುವರೆಸಲು ಕಾಯಿದೆ ಅನುಮತಿಸುತ್ತದೆ ಎಂದು ದೂರಿದ್ದರು.

ಕೇಂದ್ರ ಸರ್ಕಾರ ಕಾನೂನು ಪ್ರಕ್ರಿಯೆ ಮೂಲಕ ವಿವಾದ ಪರಿಹರಿಸದೆ, ಮೊಕದ್ದಮೆ/ವಿಚಾರಣೆಗಳನ್ನು ರದ್ದುಗೊಳಿಸಿದ್ದು ಇದು ಅಸಾಂವಿಧಾನಿಕ ಮತ್ತು ಕಾನೂನು ರೂಪಿಸುವ ಅಧಿಕಾರ ವ್ಯಾಪ್ತಿಯನ್ನು ಮೀರಿದ ನಡೆಯಾಗಿದೆ ಎಂದು ಉಪಾಧ್ಯಾಯ ವಾದಿಸಿದ್ದರು. ಕಳೆದ ವರ್ಷ ಮೇನಲ್ಲಿ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿತ್ತು.

Also Read
ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪ ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ: ಸುಪ್ರೀಂ

ಜ್ಞಾನವಾಪಿ- ಕಾಶಿ ವಿಶ್ವನಾಥ ಪ್ರಕರಣದ ವಿಚಾರಣೆ ವೇಳೆ ನ್ಯಾ. ಡಿ ವೈ ಚಂದ್ರಚೂಡ್ ಅವರು ಮೌಖಿಕವಾಗಿ "1991ರ ಕಾಯಿದೆಯ ಸೆಕ್ಷನ್ 3 ಧಾರ್ಮಿಕ ಸ್ವರೂಪದ ನಿರ್ಣಯ ಮಾಡದಂತೆ ನಿರ್ಬಂಧಿಸುವುದಿಲ್ಲ. ಒಂದೆಡೆ ಪಾರ್ಸಿ ದೇವಾಲಯವಿದ್ದು ಆ ಪ್ರದೇಶದ ಮೂಲೆಯಲ್ಲಿ ಒಂದು ಶಿಲುಬೆ ಇದೆ ಎಂದು ಭಾವಿಸೋಣ. ಆಗ ಅಗ್ಯಾರಿಯ (ಪಾರ್ಸಿಗಳ ದೇಗುಲ) ಇರುವಿಕೆಯು ಅದನ್ನು ಅಗ್ಯಾರಿ ಎಂದು ಮಾಡುತ್ತದೆಯೋ ಅಥವಾ ಅದು ಕ್ರೈಸ್ತ ಅಗ್ಯಾರಿ ಆಗುತ್ತದೆಯೇ? ಈ ಹೈಬ್ರಿಡ್ ಸ್ವರೂಪ ಅಪರಿಚಿತವೇನಲ್ಲ" ಎಂದಿದ್ದರು.

ಉಪಾಧ್ಯಾಯ ಅವರ ಮನವಿಯಲ್ಲಿ ಮಧ್ಯಪ್ರವೇಶ ಕೋರಿದ್ದ ಜಮಿಯತ್ ಉಲೇಮಾ-ಇ-ಹಿಂದ್, ಉಪಾಧ್ಯಾಯ ಅವರು ಇಸ್ಲಾಮಿಕ್ ಸ್ವರೂಪದ ಪೂಜಾ ಸ್ಥಳಗಳನ್ನು ಪರೋಕ್ಷವಾಗಿ ಗುರಿಯಾಗಿಸಲು ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟ ಎಂದಿತ್ತು. ಆದ್ದರಿಂದ ಅದು ಮುಸ್ಲಿಂ ಸಮುದಾಯದ ಅಭಿಪ್ರಾಯಗಳನ್ನು ಮುಂದಿಡಲು ಅವಕಾಶ ನೀಡುವಂತೆ ಕೋರಿತ್ತು. ಈಗ ಈ ಪ್ರಕರಣವನ್ನು ಅಕ್ಟೋಬರ್ 11 2022ರಂದು ನ್ಯಾಯಾಲಯದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.

Related Stories

No stories found.
Kannada Bar & Bench
kannada.barandbench.com