Supreme Court, AYUSH
Supreme Court, AYUSH 
ಸುದ್ದಿಗಳು

ಕೋವಿಡ್‌ ಗುಣಪಡಿಸುವ ಔಷಧಿ ಎನ್ನುವ ಶಿಫಾರಸು ಅಥವಾ ಜಾಹೀರಾತನ್ನು ಆಯುಷ್ ವೈದ್ಯರು ನೀಡುವಂತಿಲ್ಲ: ಸುಪ್ರೀಂ ಕೋರ್ಟ್‌

Bar & Bench

ಕೋವಿಡ್‌-19 ಅನ್ನು ಗುಣಪಡಿಸುವ ಔಷಧಿ ಎನ್ನುವ ಶಿಫಾರಸು ಅಥವಾ ಜಾಹೀರಾತನ್ನು ಆಯುಷ್ ವೈದ್ಯರು ನೀಡುವಂತಿಲ್ಲ ಎನ್ನುವ ಕೇರಳ ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಕೇರಳ ಹೈಕೋರ್ಟ್‌ ಆಗಸ್ಟ್‌ 21ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಡಾ. ಎಕೆಬಿ ಸದ್ಭಾವನಾ ಮಿಷನ್‌ ಆಫ್‌ ಹೋಮಿಯೊ ಫಾರ್ಮಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸುಭಾಷ್‌ ರೆಡ್ಡಿ ಮತ್ತು ಎಂ ಆರ್‌ ಶಾ ಅವರಿದ್ದ ತ್ರಿಸದಸ್ಯ ಪೀಠವು ತೀರ್ಪಿನಲ್ಲಿ ಬದಲಾವಣೆ ಮಾಡಲು ನಿರಾಕರಿಸಿತು.

2020ರ ಮಾರ್ಚ್‌ 6ರಂದು ಕೇಂದ್ರ ಸರ್ಕಾರವು ಹೊರಡಿಸಿದ ಸಲಹೆ-ಸೂಚನೆಯ ಅನ್ವಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಹೊರತುಪಡಿಸಿ ಆಯುಷ್‌ ವೈದ್ಯರು ಕೋವಿಡ್‌ ಗುಣಪಡಿಸುವ ಔಷಧಿ ಎಂದು ಶಿಫಾರಸ್ಸು ಅಥವಾ ಜಾಹೀರಾತು ನೀಡುವುದಕ್ಕೆ ಕೇರಳ ಹೈಕೋರ್ಟ್‌ ನಿಷೇಧ ಹೇರಿತ್ತು. ಕೋವಿಡ್‌ ಅಪಾಯ ಕುಂದಿಸಲು ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸಲು ಹೋಮಿಯೋಪತಿ, ಆಯುರ್ವೇದ, ಸಿದ್ಧ, ಯುನಾನಿ ಮುಂತಾದ ಪದ್ದತಿಗಳ ಮೂಲಕ ತಯಾರಿಸಲಾದ ಔಷಧಗಳನ್ನು ಬಳಸಬಹುದು ಎಂದು ಕೇರಳ ಹೈಕೋರ್ಟ್ ಹೇಳಿತ್ತು.

ಬೇಜವಾಬ್ದಾರಿಯಿಂದ ವರ್ತಿಸುವ ಆಯುಷ್‌ ವೈದ್ಯಪದ್ದತಿ ಅಭ್ಯಾಸ ಮಾಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ – 2015ರ ನಿಬಂಧನೆಗಳ ಅಡಿ ಸೂಕ್ತ ಕ್ರಮಕೈಗೊಳ್ಳುವ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೀಡಿತ್ತು.

ಕೋವಿಡ್‌ ಸೋಂಕಿತರಿಗೆ ಹೋಮಿಯೋಪಥಿ ವೈದ್ಯ ಪದ್ದತಿ ಅಭ್ಯಾಸ ಮಾಡುತ್ತಿರುವವರು ಮುಂಜಾಗರೂಕತಾ ಚಿಕಿತ್ಸೆ ಎಂದು ಶುಶ್ರೂಷೆಯನ್ನು ಸಲಹೆ ಮಾಡಬಹುದಾಗಿದೆ. ಆದರೆ, ಅದನ್ನು ಕೋವಿಡ್‌ ಗುಣಪಡಿಸುವ ಚಿಕಿತ್ಸೆ ಎಂದು ಹೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಂದೆ ಕೇಂದ್ರ ಸರ್ಕಾರ ಹೇಳಿದೆ.

“ಸಾಂಪ್ರದಾಯಿಕ ಚಿಕಿತ್ಸೆಗೆ ಪೂರಕವಾಗಿ ಈ ಎಲ್ಲಾ ಔಷಧಿಗಳನ್ನು ಮುಂಜಾಗರೂಕತೆಯ ದೃಷ್ಟಿಯಿಂದ ರೋಗಿಗೆ ನೀಡಬಹುದು. ಆದರೆ, ಅದನ್ನೇ ರೋಗ ಗುಣಮುಖಪಡಿಸುವ ಔಷಧ ಎಂದು ಹೇಳುವಂತಿಲ್ಲ” ಎಂದು ಆಯುಷ್‌ ಪದ್ಧತಿ ಅಭ್ಯಾಸ ಮಾಡುವವರಿಗೆ ಹೊರಡಿಸಲಾದ ಮಾರ್ಗಸೂಚಿಯಲ್ಲಿ ಆಯುಷ್‌ ಸಚಿವಾಲಯವು ಸ್ಪಷ್ಟವಾಗಿ ಹೇಳಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದೆ.