Babri Masjid
Babri Masjid 
ಸುದ್ದಿಗಳು

[ಬ್ರೇಕಿಂಗ್] ಬಾಬರಿ ಮಸೀದಿ ಧ್ವಂಸ ಪ್ರಕರಣ: ಎಲ್ಲ 32 ಆರೋಪಿತರನ್ನೂ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ

Bar & Bench

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅತ್ಯಂತ ಕರಾಳ ಘಟನೆಗಳಲ್ಲಿ ಒಂದಾದ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟವಾಗಿದ್ದು ಉತ್ತರ ಪ್ರದೇಶದ ಲಖನೌನ ವಿಶೇಷ ನ್ಯಾಯಾಲಯವು ಎಂಟು ಮಂದಿ ಬಿಜೆಪಿಯ ಹಿರಿಯ ನಾಯಕರೂ ಸೇರಿದಂತೆ ಎಲ್ಲಾ 32 ಮಂದಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

“ಪ್ರಕರಣವು ಪೂರ್ವ ನಿಯೋಜಿತವಲ್ಲ” ಎಂದಿರುವ ನ್ಯಾ. ಸುರೇಂದ್ರ ಕುಮಾರ್ ಯಾದವ್ ಅವರ ನೇತೃತ್ವದ ಪೀಠವು ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ನಾಯಕರಾದ ಎಲ್‌ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್‌ ಸಿಂಗ್, ವಿನಯ್‌ ಕಟಿಯಾರ್, ಸಾಕ್ಷಿ ಮಹಾರಾಜ್, ಲಲ್ಲು ಸಿಂಗ್, ಬಿ ಬಿ ಶರಣ್‌ ಸಿಂಗ್ ಅವರನ್ನು ಆರೋಪ ಮುಕ್ತಗೊಳಿಸಿದ್ದು, ಎಲ್ಲರನ್ನೂ ಖುಲಾಸೆಗೊಳಿಸಿದೆ.

ನ್ಯಾ. ಎಸ್ ಕೆ ಯಾದವ್ ಅವರಿದ್ದ ಪೀಠವು 197/1992 ಮತ್ತು 198/1992 ಎಫ್‌ಐಆರ್‌ಗಳ ಕುರಿತು ತೀರ್ಪು ನೀಡಿದೆ. ಎಫ್‌ಐಆರ್‌ 197 ಧ್ವಂಸ ಪ್ರಕರಣದಲ್ಲಿ ಭಾಗಿಯಾದ ಹೆಸರು ಉಲ್ಲೇಖಿಸಿರದ ಕರಸೇವಕರ ಕುರಿತಾದದ್ದಾದರೆ, ಎಫ್‌ಐಆರ್‌ 198 ಮಸೀದಿ ಧ್ವಂಸಗೊಳಿಸಲು ಪ್ರಚೋದನೆ ನೀಡಿದ ಎಂಟು ಬಿಜೆಪಿ ನಾಯಕರ ವಿರುದ್ಧ ದಾಖಲಿಸದ್ದಾಗಿತ್ತು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯ ಜಾಗವು ರಾಮನ ಜನ್ಮಭೂಮಿ ಎಂದು 1992ರ ಡಿಸೆಂಬರ್ 6ರಂದು ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದ್ದ ಪ್ರಕರಣ ಇದಾಗಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ನಡೆಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ 2017ರ ಏಪ್ರಿಲ್ ನಲ್ಲಿ ಅಡ್ವಾಣಿ, ಜೋಶಿ, ಉಮಾ ಭಾರತಿ ಹಾಗೂ ಮತ್ತಿತರ ನಾಯಕರ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ಕೇಂದ್ರೀಯ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯು ಎರಡು ವರ್ಷಗಳ ಒಳಗೆ ಪೂರ್ಣಗೊಳ್ಳಬೇಕು ಮತ್ತು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು ಎಂದು ಆದೇಶಿಸಿತ್ತು.

ಕಳೆದ ಆಗಸ್ಟ್‌ ನಲ್ಲಿ ಪ್ರಕರಣದ ವಿಚಾರಣೆ ಮತ್ತು ತೀರ್ಪು ಪ್ರಕಟ ವಿಚಾರಕ್ಕೆ ನಿಗದಿಗೊಳಿಸಿದ್ದ ಗಡುವನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.