Senior Advocate Kapil Sibal at Jantar Mantar
Senior Advocate Kapil Sibal at Jantar Mantar  
ಸುದ್ದಿಗಳು

ಸಿಬಿಐ ಅಥವಾ ಪಿಎಂಎಲ್ಎ ಪ್ರಕರಣಗಳಲ್ಲಿ ಜಾಮೀನು ಸಿಗುವುದಿಲ್ಲ ಎಂದು ನೇರವಾಗಿ ಕಕ್ಷಿದಾರರಿಗೆ ಹೇಳುತ್ತಿದ್ದೇವೆ: ಸಿಬಲ್

Bar & Bench

ಚುನಾಯಿತ ಶಾಸಕರ ಅಕ್ರಮ ಪಕ್ಷಾಂತರಗಳ ಬಗ್ಗೆ ದೇಶದ ನ್ಯಾಯಾಲಯಗಳು ಮೌನವಾಗಿದ್ದು ಜಾರಿ ನಿರ್ದೇಶನಾಲಯ (ಇ ಡಿ), ಸಿಬಿಐ ರೀತಿಯ ತನಿಖಾ ಸಂಸ್ಥೆಗಳು ಆಡಳಿತಾರೂಢ ಸರ್ಕಾರದ ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಿದರೆ ಅವು ಪರಿಹಾರ ನೀಡುತ್ತಿಲ್ಲ ಎಂದು ಹಿರಿಯ ನ್ಯಾಯವಾದಿ ಮತ್ತು ರಾಜಕಾರಣಿ ಕಪಿಲ್‌ ಸಿಬಲ್‌ ವಿಷಾದ ವ್ಯಕ್ತಪಡಿಸಿದರು.

ದೆಹಲಿಯ ಜಂತರ್‌ಮಂತರ್‌ನಲ್ಲಿ ತಮ್ಮ ಕನಸಿನ ಕೂಸಾದ, ಅನ್ಯಾಯದ ವಿರುದ್ಧ ಹೋರಾಡುವ ʼಇನ್ಸಾಫ್‌ ಕೆ ಸಿಪಾಯಿʼ (ನ್ಯಾಯದ ಯೋಧ) ಸಂಘಟನೆಗೆ ವಿಧ್ಯುಕ್ತವಾಗಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.

ಸಿಬಿಐ ನ್ಯಾಯಾಲಯದಂತಹ ವಿಶೇಷ ನ್ಯಾಯಾಲಯಗಳು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ಅಸ್ತಿತ್ವದಲ್ಲಿರುವ ನ್ಯಾಯಾಲಯಗಳು ರಾಜಕೀಯ ವಿರೋಧಿಗಳಿಗೆ ಜಾಮೀನು ನೀಡದಿರುವ ನಿರೀಕ್ಷಿತ ಫಲಿತಾಂಶ ಇರುವುದರಿಂದ ನ್ಯಾಯಾಲಯಗಳು ಸಾರ್ವಜನಿಕರ ನಂಬಿಕೆ ಕಳೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಜಾಮೀನು ದೊರೆಯುವುದಿಲ್ಲ ಎಂದು ತಮ್ಮ ಬಳಿಗೆ ಬರುವ ಕಕ್ಷಿದಾರರಿಗೆ ಸ್ಪಷ್ಟವಾಗಿ ಹೇಳಿಬಿಡುತ್ತೇವೆ ಎಂದು ಕೇಂದ್ರದ ಮಾಜಿ ಕಾನೂನು ಸಚಿವರೂ ಆದ ಸಿಬಲ್‌ ತಿಳಿಸಿದರು.

“ನ್ಯಾಯ ಹೇಗೆ ಸಿಗುತ್ತದೆ ಮತ್ತು ನ್ಯಾಯಾಲಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಸಿಬಿಐ ಅಥವಾ ಇ ಡಿ ನ್ಯಾಯಾಲಯಗಳಿಗೆ ಹೋಗಿ ನೋಡಿ, ಅಲ್ಲಿ ಏನಾಗುತ್ತಿದೆ ಎಂದು ನೀವು ಊಹಿಸಲೂ ಸಾಧ್ಯವಿಲ್ಲ. ನ್ಯಾಯ ಮರೆತುಬಿಡಿ. ನಿಮಗೆ ಜಾಮೀನು ಸಿಗುವುದೇ ಇಲ್ಲ ಎಂದು ನಾವು ಪ್ರಮಾಣಿಕವಾಗಿ ಹೇಳುತ್ತಿದ್ದೇವೆ. ನಾನು ನ್ಯಾಯಾಂಗದ ವಿರುದ್ಧ ಮಾತನಾಡುತ್ತಿಲ್ಲ. ಆದರೆ ಕೈದಿಗಳಿಗೆ ಜಾಮೀನು ಸಿಗುವುದಿಲ್ಲ ಎಂದು ಜನ ಯೋಚಿಸುತ್ತಿದ್ದಾರೆ. ಜನ ನ್ಯಾಯಾಲಯಗಳ ಬಗ್ಗೆ ಹೀಗೆ ಮಾತನಾಡಿಕೊಂಡರೆ ಪ್ರಜಾಪ್ರಭುತ್ವದಲ್ಲಿ ಏನು ಉಳಿದಂತಾಗುತ್ತದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಾಮಾನ್ಯ ಭಾರತೀಯರು ನ್ಯಾಯಾಲಯಗಳ ಬಗೆಗಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಅವರು ಹೇಳಿದರು.

ನ್ಯಾಯಾಂಗವನ್ನು ಹೊರತುಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಸ್ವತಂತ್ರ ಸಂಸ್ಥೆಗಳನ್ನು ಸಂಪೂರ್ಣವಾಗಿ ತಮ್ಮ ಕೈವಶ ಮಾಡಿಕೊಂಡಿದ್ದು ಅದನ್ನು ಕೂಡ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯತ್ನ ನಡೆಯುತ್ತಿದೆ” ಎಂದು ಅವರು ಆರೋಪಿಸಿದರು.

“ಇದು ಪ್ರಧಾನಿ ಮೋದಿ ಓಡಿಸುತ್ತಿರುವ ವಾಹನವಾಗಿದ್ದು ಅದರಲ್ಲಿ ಒಂದು ಚಕ್ರ ಅವರ ನಿಯಂತ್ರಣದಲ್ಲಿರುವ ಸಂಸತ್ತು. ಎರಡನೆಯದು   ಚುನಾವಣಾ ಆಯೋಗ, ಮೂರನೆಯದು ಅವರ ಅಧೀನದಲ್ಲಿರುವ ಕಾರ್ಯಾಂಗ. ನಾಲ್ಕನೆಯ ಚಕ್ರ ನ್ಯಾಯಾಂಗವಾಗಿದ್ದು ಅದನ್ನು ತಮ್ಮ ನಿಯಂತ್ರಣಕ್ಕೆ ತಗೆದುಕೊಳ್ಳುವ ಉದ್ದೇಶ ಅವರಿಗೆ ಇದೆ. ಚಾಲಕ ಎಲ್ಲವನ್ನೂ ನಿಯಂತ್ರಣಕ್ಕೆ ಪಡೆದರೆ ನಂತರ ಇ ಡಿಯನ್ನು ಎಲ್ಲಿ ಬೇಕಾದರೂ ಬಿಚ್ಚಿಡಬಹುದು” ಎಂದು ಅವರು ವ್ಯಂಗ್ಯವಾಡಿದರು.

ಅದರಲ್ಲಿಯೂ ಶಾಸಕರ ಪಕ್ಷಾಂತರ ವಿಚಾರ ಭಾರತೀಯ ರಾಜಕಾರಣದಲ್ಲಿ ಸಾಮಾನ್ಯವಾಗಿಬಿಟ್ಟಿದ್ದು ಸುಮಾರು ಎಂಟು ರಾಜ್ಯ ಸರ್ಕಾರಗಳನ್ನು ಬಿಜೆಪಿ ಉರುಳಿಸಿತು ಎಂದು ಸಿಬಲ್‌ ಹೇಳಿದರು.

"ಕುದುರೆ ವ್ಯಾಪಾರದ ಮೂಲಕ ಚುನಾಯಿತ ಸರ್ಕಾರಗಳನ್ನು ಉರುಳಿಸಿದ್ದನ್ನು ಯಾವುದೇ ಪ್ರಜಾಪ್ರಭುತ್ವದಲ್ಲಿ ಕೇಳಿಲ್ಲ. ಯಾವ ಕಾನೂನು ಇದನ್ನು ಹೇಳುತ್ತದೆ? ನ್ಯಾಯಾಲಯಗಳು ಸಹ ಮೌನವಾಗಿವೆ. ಇದು ರಾಜಕೀಯ ಅನ್ಯಾಯ, ಹೌದಲ್ಲವೇ? ಈ ಪಕ್ಷಾಂತರಿಗಳು ಮಂತ್ರಿಯಾಗುತ್ತಾರೆ. ಇದು ಯಾವ ರೀತಿಯ ಕಾನೂನು ಮತ್ತು ಈ ಕಾನೂನನ್ನು ಏಕೆ ರದ್ದುಗೊಳಿಸಿಲ್ಲ?"  ಎಂದು ಸಿಬಲ್ ಆಕ್ರೋಶ ವ್ಯಕ್ತಪಡಿಸಿದರು.

ಹಾಗಾಗಿ ಶಾಸಕರು ಪಕ್ಷಾಂತರ ಮಾಡಿ ಬೇರೆ ಪಕ್ಷಕ್ಕೆ ಸೇರಿದರೆ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಮತ್ತು ಯಾವುದೇ ಸಾರ್ವಜನಿಕ ಹುದ್ದೆಗಳನ್ನು ಅವರಿಗೆ ನೀಡಬಾರದು. ಹೀಗೆ ಮಾಡಿದರೆ ಪಕ್ಷಾಂತರ ಎಂಬುದು ನಾಳೆಯಿಂದಲೇ ನಡೆಯುವುದಿಲ್ಲ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ಭಾರತದ ನಾಲ್ಕು ವಲಯಗಳಲ್ಲಿ ಮೇಲ್ಮನವಿ ನ್ಯಾಯಾಲಯಗಳನ್ನು ಸ್ಥಾಪಿಸಿ ತಾನು ಸಾಂವಿಧಾನಿಕ ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಬೇಕು ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.