CJI NV Ramana, Justices Krishna Murari and Hima Kohli 
ಸುದ್ದಿಗಳು

ಅಪರಾಧದ ಮಹತ್ವ ಅಥವಾ ಸಾಮಾಜಿಕ ಪರಿಣಾಮ ಪರಿಗಣಿಸದೇ ನೀಡಿದ ಜಾಮೀನನ್ನು ಉನ್ನತ ನ್ಯಾಯಾಲಯ ರದ್ದುಗೊಳಿಸಬಹುದು: ಸುಪ್ರೀಂ

ಸಾಕ್ಷಿ, ಅಪರಾಧದ ಮಹತ್ವ ಅಥವಾ ಸಾಮಾಜಿಕ ಪರಿಣಾಮ ಪರಿಗಣಿಸದೇ ನೀಡಿದ ಜಾಮೀನನ್ನು ಉನ್ನತ ನ್ಯಾಯಾಲಯ ರದ್ದುಗೊಳಿಸಬಹುದು: ಸುಪ್ರೀಂ

Bar & Bench

ಕೆಳ ನ್ಯಾಯಾಲಯ ಈಗಾಗಲೇ ನೀಡಿರುವ ಜಾಮೀನನ್ನು ರದ್ದುಗೊಳಿಸುವ ಸಂದರ್ಭಗಳಲ್ಲಿ ಉನ್ನತ ನ್ಯಾಯಾಲಯ ಮಹತ್ವದ ಪರಿಶೀಲನೆ ನಡೆಸುವ ಅಗತ್ಯವಿದ್ದು ಸಂಬಂಧಪಟ್ಟ ಸಾಕ್ಷಿ, ಅಪರಾಧದ ಗುರುತ್ವ ಅಥವಾ ಸಾಮಾಜಿಕ ಪ್ರಭಾವ ಪರಿಗಣಿಸದೇ ಕೆಳ ಹಂತದ ನ್ಯಾಯಾಲಯ ಜಾಮೀನು ನೀಡಿದ್ದಾಗ ಅದನ್ನು ಉನ್ನತ ನ್ಯಾಯಾಲಯ ರದ್ದುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ [ಇಮ್ರಾನ್ ಮತ್ತು ಮೊಹಮ್ಮದ್ ಬಾವಾ ನಡುವಣ ಪ್ರಕರಣ].

ಇಬ್ಬರು ಪ್ರತಿವಾದಿಗಳಿಗೆ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಗೊಳಿಸುವ ವೇಳೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

"ಯಾಂತ್ರಿಕ ರೀತಿಯಲ್ಲಿ ಜಾಮೀನು ನೀಡಿದರೆ ಅಂತಹ ಸಂದರ್ಭಗಳಲ್ಲಿ, ಜಾಮೀನು ಆದೇಶವನ್ನು ರದ್ದುಗೊಳಿಸಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಘಟನೆ 2020ರ ಜೂನ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ನಡೆದಿತ್ತು. ಪ್ರಾಸಿಕ್ಯೂಷನ್‌ ಪ್ರಕಾರ ಪ್ರಕರಣದ ಮೊದಲ ಆರೋಪಿಯಾದ ದಾವೂದ್‌ ಹಕೀಂ ಎಂಬಾತ ಬದ್ರುಲ್ ಮುನೀರ್ ಎಂಬಾತನೊಂದಿಗೆ ದ್ವೇಷ ಹೊಂದಿದ್ದ. ಸಹ ಆರೋಪಿಗಳೊಂದಿಗೆ ಸೇರಿ ಮುನೀರ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಒಟ್ಟು ಮೂವರ ಮೇಲೆ ದಾಳಿ ನಡೆದಿತ್ತು. ಆಗ ಅಬ್ದುಲ್‌ ಲತೀಫ್‌ ಎಂಬಾತ ಮೃತಪಟ್ಟಿದ್ದ. ಉಳಿದ ಆರೋಪಿಗಳಿಗೆ ಜಾಮೀನು ದೊರೆತಿದ್ದರಿಂದ ಸಮಾನತೆಯ ಆಧಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಉಲ್ಲೇಖಿಸಿರುವ ಪ್ರತಿವಾದಿಗಳಿಗೂ ಹೈಕೋರ್ಟ್‌ ಜಾಮೀನು ನೀಡಿತ್ತು.

ಆದರೆ ಆ ಬಳಿಕ ಉಳಿದ ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಅದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು.

ಆದ್ದರಿಂದ, ಅಪರಾಧದ ಗುರುತ್ವವನ್ನು ಪರಿಗಣಿಸದೆ ಹೈಕೋರ್ಟ್ ತಪ್ಪೆಸಗಿದ್ದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತಿತರ ಸಾಕ್ಷ್ಯಾಧಾರಗಳನ್ನು ಅದು ಕಡೆಗಣಿಸಿದೆ ಎಂದು ತಿಳಿಸಿ ಅರ್ಜಿದಾರರು ಪ್ರತಿವಾದಿಗಳ ಜಾಮೀನನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಬ್ಬರಿಗೂ ಜಾಮೀನು ನೀಡುವುದು ಎಲ್ಲಾ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಗಮನಾರ್ಹ ಬೆದರಿಕೆ ಉಂಟುಮಾಡುತ್ತದೆ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿತ್ತು. “ಜಾಮೀನು ರದ್ದಾಗಿದ್ದ ಉಳಿದ ಆರೋಪಿಗಳು ಇನ್ನೂ ಶರಣಾಗಿಲ್ಲ. ಅವರು ಮೇಲ್ಮನವಿದಾರರಿಗೆ ಮತ್ತು ವಿಚಾರಣೆಯಲ್ಲಿ ಭಾಗಿಯಾಗಿರುವ ಇತರ ಪ್ರತ್ಯಕ್ಷದರ್ಶಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಪೀಠದ ಗಮನಕ್ಕೆ ತರಲಾಯಿತು.

ಇಬ್ಬರೂ ಪ್ರತಿವಾದಿಗಳು ಅಪರಾಧದಲ್ಲಿ ಭಾಗಿಯಾಗಿಲ್ಲ. ಅಲ್ಲದೆ ನ್ಯಾಯಯುತ ವಿಚಾರಣೆಗೆ ಅವಕಾಶ ನೀಡಲು ಯಾವುದೇ ಮೇಲ್ವಿಚಾರಣಾ ಸಂದರ್ಭಗಳು ಅನುಕೂಲಕರವಾಗಿಲ್ಲವೇ ಎಂಬುದನ್ನು ಪರಿಗಣಿಸದೆ ಒಮ್ಮೆ ನೀಡಿದ ಜಾಮೀನನ್ನು ಯಾಂತ್ರಿಕ ರೀತಿಯಲ್ಲಿ ರದ್ದುಗೊಳಿಸಲಾಗದು ಎಂದು ಸಹ ಹೇಳಲಾಗಿದೆ.

ಆದ್ದರಿಂದ ಹೈಕೋರ್ಟ್‌ ಯಾಂತ್ರಿಕವಾಗಿ ತನ್ನ ವಿವೇಚನಾಧಿಕಾರ ಚಲಾಯಿಸಿತೇ ಎಂಬುದು ಸುಪ್ರೀಂಕೋರ್ಟ್‌ ಎದುರಿದ್ದ ಪ್ರಶ್ನೆಯಾಗಿತ್ತು.

ಒಮ್ಮೆ ಜಾಮೀನು ನೀಡಿದರೆ ಅದನ್ನು ರದ್ದುಪಡಿಸಲು ಅಗಾಧವಾದ ಸಕಾರಣಗಳು ಬೇಕಾಗುತ್ತವೆ ಎಂಬುದು ಸುಸ್ಥಾಪಿತ ತತ್ವವಾಗಿದೆ ಎಂದು ತಿಳಿಸಿದ ಪೀಠ ವಿಪನ್ ಕುಮಾರ್ ಧೀರ್ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣದಲ್ಲಿ ಅಪರಾಧದ ಗುರುತ್ವ ಮತ್ತು ಅದರ ಸಾಮಾಜಿಕ ಪರಿಣಾಮವನ್ನು ನಿರ್ಲಕ್ಷಿಸಿದ್ದಾಗ ಉನ್ನತ ನ್ಯಾಯಾಲಯ ಜಾಮೀನನ್ನು ಹಿಂಪಡೆಯಬಹುದು ಎಂದು ನೀಡಲಾದ ತೀರ್ಪನ್ನು ಉಲ್ಲೇಖಿಸಿತು. ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಆದೇಶವನ್ನು ಅದು ರದ್ದುಗೊಳಿಸಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Imran_v_Mohammed_Bhava.pdf
Preview