ಇಂದು ನಡೆಯುತ್ತಿರುವ ಬಕ್ರೀದ್ (ಈದ್ ಅಲ್-ಅಧಾ) ಅಂಗವಾಗಿ ಪ್ರಾಣಿಬಲಿ ನೀಡಲು ಅಥವಾ ನಿರ್ಬಂಧಿಸಲು ಅನುಮತಿ ಕೋರಿ ವಿವಿಧ ಕಕ್ಷಿದಾರರು ಸಲ್ಲಿಸಿದ ಕೊನೆ ಕ್ಷಣದ ಅರ್ಜಿಗಳ ಬಗ್ಗೆ ಕನಿಷ್ಠ ಮೂರು ಹೈಕೋರ್ಟ್‌ಗಳು ಬುಧವಾರ ಅಸಮಾಧಾನ ವ್ಯಕ್ತಪಡಿಸಿವೆ.
ಅಂತಹ ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ಏನು ಹೇಳಿವೆ ಎಂಬುದರ ವಿವರ ಇಲ್ಲಿದೆ:
ಬಾಂಬೆ ಹೈಕೋರ್ಟ್
ಕೋಟೆ ಆವರಣದಲ್ಲಿ ಪ್ರಾಣಿಗಳನ್ನು ವಧೆ ಮಾಡಲು ಅನುಮತಿ ಕೋರಿ ವಿಶಾಲಗಡ ಕೋಟೆಯ ನಿವಾಸಿಗಳು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವನ್ನು ಎಡತಾಕಿದ್ದರು.
ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ "ಕೊನೆಯ ಗಳಿಗೆಯಲ್ಲಿ ಇಂತಹ ಅರ್ಜಿಗಳನ್ನು ಪದೇ ಪದೇ ಸಲ್ಲಿಸುತ್ತಿರುವುದಕ್ಕೆ ನಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದೇವೆ. ಬಕ್ರೀದ್ ಎಂದು ನಡೆಯುತ್ತದೆ ಎಂದು ಬಹುತೇಕ ಎಲ್ಲಾ ವರ್ಷಗಳ ಕ್ಯಾಲೆಂಡರ್‌ನಲ್ಲಿನಮೂದಾಗಿರುತ್ತದೆ” ಎಂದು ಕುಟುಕಿತು.
ಅರ್ಜಿಯನ್ನು ತುರ್ತಾಗಿ ಪರಿಗಣಿಸಲು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಮನವಿ ಮಾಡಿದರು. ಆಗ ತಾನು ಅನುಮತಿ ನೀಡಲು ನಿರ್ದೇಶಿಸುವುದಿಲ್ಲ ಬದಲಿಗೆ ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕು ಎಂದಷ್ಟೇ ಸೂಚಿಸುವುದಾಗಿ ತಿಳಿಸಿತು.
ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದರಿಂದ ತಮ್ಮ ಸೊಸೈಟಿಯಲ್ಲಿ ಪ್ರಾಣಿವಧೆಗೆ ಅವಕಾಶ ಕಲ್ಪಿಸದಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಮತ್ತು ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಮುಂಬೈ ನಿವಾಸಿ ಹರೇಶ್ ಜೈನ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಸಂಜೆ 7 ಗಂಟೆಗೆ ನಡೆದ ವಿಚಾರಣೆಯಲ್ಲಿ, ಬಿಎಂಸಿ ಹಸಿರು ನಿಶಾನೆ ತೋರದ ಹೊರತು ಈ ಸೊಸೈಟಿಯಲ್ಲಿ ಯಾವುದೇ ಅಕ್ರಮ ಪ್ರಾಣಿ ಹತ್ಯೆಗೆ ಅವಕಾಶ ನೀಡಬಾರದು ಎಂದು ಕೋರ್ಟ್ ತೀರ್ಪು ನೀಡಿತು.
ದೆಹಲಿ ಹೈಕೋರ್ಟ್
ಪರವಾನಗಿ ಪಡೆದ ಕಸಾಯಿಖಾನೆಗಳ ಹೊರತಾಗಿ ಬೇರೆಡೆ ಯಾವುದೇ ಪ್ರಾಣಿಬಲಿ ನಡೆಯಬಾರದು ಎಂಬ ಮನವಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲು ನ್ಯಾಯಮೂರ್ತಿಗಳಾದ ಸಿ ಹರಿ ಶಂಕರ್ ಮತ್ತು ಮನೋಜ್ ಜೈನ್ ಅವರಿದ್ದ ರಜಾಕಾಲೀನ ಪೀಠ ನಿರಾಕರಿಸಿತು.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಾಕಷ್ಟು ಸಮಯ ಇದ್ದರೂ ಹಬ್ಬದ ಒಂದು ದಿನ ಮೊದಲು ಸಲ್ಲಿಸಲಾದ ಮನವಿ ಬಗ್ಗೆ ಅದು ಅಸಮಾಧಾನ ಹೊರಹಾಕಿತು.
ಸದ್ಯಕ್ಕೆ ಅರ್ಜಿಯ ಕುರಿತು ಯಾವುದೇ ಆದೇಶಗಳನ್ನು ನೀಡುವುದಿಲ್ಲ ಎಂದು ಒತ್ತಿಹೇಳಿದ ಪೀಠ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠಕ್ಕೆ ಕಳುಹಿಸಿತು. ಗೋಹತ್ಯೆ ವಿರುದ್ಧ ಗೌತಮ್ ಸಲ್ಲಿಸಿರುವ ಅರ್ಜಿ ಈಗಾಗಲೇ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆ ಎದುರು ನೋಡುತ್ತಿದೆ.
ಕಲ್ಕತ್ತಾ ಹೈಕೋರ್ಟ್
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಕೊನೆಯ ಕ್ಷಣದ ಆದೇಶ ನೀಡಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ಪೀಠವು ಹಬ್ಬದ ಹೊಸ್ತಿಲಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಕ್ಕಾಗಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.