K N Shivakumar, Magistrate MP/MLA Special court  
ಸುದ್ದಿಗಳು

ಬಳ್ಳಾರಿ ಗಲಾಟೆ ಪ್ರಕರಣ: 25 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ಕಾಯ್ದಿರಿಸಿದ್ದ ಆದೇಶ ಪ್ರಕಟಿಸಿದರು.

Bar & Bench

ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಬಂಧಿಸಲಾಗಿದ್ದ 26 ಮಂದಿ ಆರೋಪಿಗಳ ಪೈಕಿ 25 ಮಂದಿ ಆರೋಪಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು  ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ಕಾಯ್ದಿರಿಸಿದ್ದ ಆದೇಶ ಪ್ರಕಟಿಸಿದರು.

ಖಾಸಗಿ ಗನ್‌ ಮ್ಯಾನ್‌ ಗುರುಚರಣ್‌ ಸಿಂಗ್‌ ಫೈರ್‌ ಮಾಡಿದ ಗುಂಡಿನಿಂದಲೇ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್‌ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗುರುಚರಣ್‌ ಸಿಂಗ್‌ಗೆ ಜಾಮೀನು ಸಿಕ್ಕಿಲ್ಲ. ಬಳ್ಳಾರಿ ಗಲಾಟೆ ಪ್ರಕರಣ ಸಂಬಂಧ ಬ್ರೂಸ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ 6 ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿವೆ. ಇದು ಎಫ್‌ಐಆರ್‌ ಸಂಖ್ಯೆ 4ರ ಪ್ರಕರಣವಾಗಿದೆ.

ಕಾರ್ತಿಕ್‌, ಮುಕ್ಕಣ್ಣ, ಇನಾಯತುಲ್ಲಾ, ರಾಜು, ಮುಸ್ತಫಾ, ಶ್ರೀಕಾಂತ್‌, ಮೊಹಮಮ್ದ್‌ ರಸೂಲ್‌, ಬಾಬು, ವೆಂಕಟೇಶ್‌, ಮಾಬಾಷ, ಗುರುಪ್ರಸಾದ್‌, ವಸುಂಧರ, ಶಿವಕುಮಾರ್‌, ಸಚಿನ್‌, ಅಬ್ದುಲ್‌ ರಜಾಕ್‌, ಬಜ್ಜಯ್ಯ, ಎಂ ತಿಮ್ಮಪ್ಪ, ಗುಂಡಾಲಿ ಶ್ರೀನಿವಾಸ್‌, ಕೆ ಬಿ ಲಕ್ಷ್ಮಣ, ಪಿ ಶ್ರೀನಿವಾಸ್‌ ರೆಡ್ಡಿ, ಪೋತಪ್ಪ, ಷಡಕ್ಷರಿ, ರವಿಬಾಬು, ರವಿಕುಮಾರ್‌, ರಂಗಸ್ವಾಮಿ ಜಾಮೀನು ಪಡೆದ ಆರೋಪಿಗಳಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿವಾಸದ ಬಳಿ ಜನವರಿ 1ರಂದು ಸಂಜೆ ಬ್ಯಾನರ್‌ ಕಟ್ಟುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿತ್ತು. ಜನಾರ್ದನ ರೆಡ್ಡಿ ಬೆಂಬಲಿಗರು ಮತ್ತು ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರು. ಈ ನಡುವೆ ನಡೆದ ಗುಂಡಿನ ದಾಳಿ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್‌ ಮೃತಪಟ್ಟಿದ್ದರು. ಗಲಾಟೆ ನಿಯಂತ್ರಣದ ವೇಳೆ ಕಲ್ಲೇಟು ಬಿದ್ದು ಕರ್ತವ್ಯ ನಿರತ ಕೆಲ ಪೊಲೀಸರು ಗಾಯಗೊಂಡಿದ್ದರು. ಈ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಶ್ರೀರಾಮಲು ಸೇರಿದಂತೆ ಇತರರ ವಿರುದ್ಧ ಬ್ರೂಸ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ಸಂಬಂಧ  ಬ್ರೂಸ್‌ ಪೇಟೆ ಠಾಣೆ ಪೊಲೀಸರು ಜನವರಿ 4ರಂದು 26 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಜನವರಿ 5ರಂದು ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲವು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು.