Bangalore Club
Bangalore Club 
ಸುದ್ದಿಗಳು

ಸಂಪತ್ತು ತೆರಿಗೆ ಪಾವತಿಗೆ ಬೆಂಗಳೂರು ಕ್ಲಬ್‌‌ನ ಬಾಧ್ಯತೆ ಮತ್ತು ಚರ್ಚಿಲ್‌ರ ₹13 ಬಿಲ್: ಸುಪ್ರೀಂಕೋರ್ಟ್ ಹೇಳಿದ್ದೇನು?

Bar & Bench

ಸಂಪತ್ತು ತೆರಿಗೆ ಕಾಯಿದೆ ಅಡಿ ಬೆಂಗಳೂರು ಕ್ಲಬ್ ಸಂಪತ್ತು ತೆರಿಗೆ ಪಾವತಿಸುವ ಬಾಧ್ಯತೆ ಇಲ್ಲ ಎಂದಿರುವ ಸುಪ್ರೀಂ ಕೋರ್ಟ್,‌ ಮಂಗಳವಾರ ಕರ್ನಾಟಕ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದೆ (ಬೆಂಗಳೂರು ಕ್ಲಬ್ ವರ್ಸಸ್ ಆಸ್ತಿ ತೆರಿಗೆ ಆಯುಕ್ತ ಮತ್ತು ಇತರರು).

ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರಿಮನ್, ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿತು.

ನ್ಯಾ. ನಾರಿಮನ್ ಅವರು ಅತ್ಯಂತ ಆಕರ್ಷಕ ವಿಚಾರದೊಂದಿಗೆ ತೀರ್ಪು ಬರವಣಿಗೆ ಮಾಡಿದ್ದಾರೆ. ಬ್ರಿಟನ್ ಪ್ರಧಾನ ಮಂತ್ರಿಯಾಗುವುದಕ್ಕೂ ಮುನ್ನವೇ ಸರ್ ವಿನ್‌ಸ್ಟನ್ ಚರ್ಚಿಲ್ ಅವರ ಹೆಸರು ಬೆಂಗಳೂರು ಕ್ಲಬ್‌ನ ಸುಸ್ತಿದಾರರ ಪಟ್ಟಿಯಲ್ಲಿತ್ತು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. 1899ರಲ್ಲಿ ನಡೆದ ಘಟನೆಯನ್ನು ತೀರ್ಪಿನಲ್ಲಿ ಹೀಗೆ ವಿವರಿಸಲಾಗಿದೆ,

“... ಕ್ಲಬ್‌ನಲ್ಲಿ ₹13 ಬಿಲ್ ಪಾವತಿ ಮಾಡದೇ ಇದ್ದುದಕ್ಕೆ ದಿವಂಗತ ವಿ ಎಲ್ ಎಸ್ ಚರ್ಚಿಲ್ ಅವರ ಹೆಸರನ್ನು ಕ್ಲಬ್‌ನ ಸುಸ್ತಿದಾರರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿತ್ತು. ಇದುವರೆಗೂ ಆ ಬಾಕಿ ಹಣವನ್ನು ಪಾವತಿಸಲಾಗಿಲ್ಲ. ದಿವಂಗತ ವಿ ಎಲ್ ಎಸ್ ಚರ್ಚಿಲ್ ಅವರು ಮುಂದೆ ಬ್ರಿಟನ್ ಪ್ರಧಾನ ಮಂತ್ರಿ ಸರ್ ವಿನ್‌ಸ್ಟನ್ ಲಿಯೋನಾರ್ಡ್ ಸ್ಪೆನ್ಸರ್ ಚರ್ಚಿಲ್ ಆದರು. ಇತ್ತ ಬೆಂಗಳೂರು ಕ್ಲಬ್ ಮಾತ್ರ ತನ್ನ ಶುಷ್ಕ ಅಸ್ತಿತ್ವವನ್ನು ಹಾಗೇ ಉಳಿಸಿಕೊಂಡಿದೆ, ಅದಕ್ಕೆ ದೊರೆತ ಒಂದೇ ಒಂದು ರೋಚಕತೆ ಎಂದರೆ ತೆರಿಗೆ ವಸೂಲಿ ಅಧಿಕಾರಿ ತನ್ನ ಪಾಲಿನ ತುತ್ತನ್ನು ಒಯ್ಯಲೆಂದು ಅದರ ಕದ ತಟ್ಟಿದ್ದು ಮಾತ್ರ"

ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸಂಪತ್ತು ತೆರಿಗೆ ಕಾಯಿದೆ ಸೆಕ್ಷನ್ 3ರ ವ್ಯಾಪ್ತಿಯ ಬಗ್ಗೆ ಆಳಕ್ಕಿಳಿದು ವಿವರಿಸಿದ್ದು, ಸದರಿ ಕಾಯಿದೆ ಅಡಿ ಯಾರಿಗೆಲ್ಲಾ ತೆರಿಗೆ ವಿಧಿಸಬಹುದು ಎಂಬುದನ್ನು ಪಟ್ಟಿ ಮಾಡಿದೆ. ತೀರ್ಪು ಇಂತಿದೆ,

“ತೆರಿಗೆ ಕಾಯಿದೆ ಸೆಕ್ಷನ್ 3ರ ಅಡಿ ವ್ಯಕ್ತಿಗಳು, ಅವಿಭಜಿತ ಹಿಂದೂ ಕುಟುಂಬಗಳು ಮತ್ತು ಕಂಪೆನಿಗಳು ಈ ಮೂರು ವಿಧದಡಿ ಸಂಪತ್ತಿನ ತೆರಿಗೆ ವಿಧಿಸಲು ಮೌಲ್ಯ ಮಾಪನ ಮಾಡಬಹುದಾಗಿದೆ. ಸೆಕ್ಷನ್ 3(1)ರ ಕಡೆ ಚಿತ್ತ ಹರಿಸಿದರೆ ಬೆಂಗಳೂರು ಕ್ಲಬ್ ವ್ಯಕ್ತಿಯೂ ಅಲ್ಲ, ಅವಿಭಜಿತ ಹಿಂದೂ ಕುಟುಂಬವೂ ಅಲ್ಲ, ಈ ನಿಬಂಧನೆಯಡಿ ತರಬಹುದಾದ ಕಂಪೆನಿಯೂ ಅಲ್ಲ.”
”ಉದ್ದಿಮೆ ಅಥವಾ ವೃತ್ತಿಪರ ಉದ್ದೇಶ ಹೊಂದಿರುವ ವ್ಯಕ್ತಿಗಳನ್ನೊಳಗೊಂಡ ಗುಂಪು ಆದಾಯ ಅಥವಾ ಲಾಭಕ್ಕಾಗಿ ಒಗ್ಗೂಡುವವರು ನಿಬಂಧನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಸಾಮಾಜಿಕ ಕ್ಲಬ್ ಆದ ಬೆಂಗಳೂರು ಕ್ಲಬ್ ಅಪೀಲು ನ್ಯಾಯಾಧಿಕರಣ ಹೇಳಿರುವಂತೆ ಕ್ಲಬ್‌ನ ಉದ್ದೇಶಗಳು ಲಾಭ ಅಥವಾ ಆದಾಯ ಮಾಡಿಕೊಳ್ಳುವ ದೃಷ್ಟಿಯಿಂದ ಉದ್ಯಮ ಅಥವಾ ವ್ಯವಹಾರಕ್ಕಾಗಿ ಒಟ್ಟಾಗಿ ಸೇರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಹಿರಿಯ ವಕೀಲ ನಿಖಿಲ್ ನಯ್ಯರ್ ಅವರು ಬೆಂಗಳೂರು ಕ್ಲಬ್ ಪ್ರತಿನಿಧಿಸಿದರೆ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಂಜಿತ್ ಬ್ಯಾನರ್ಜಿ ಅವರು ಮೌಲ್ಯಮಾಪನ ಪ್ರಾಧಿಕಾರವನ್ನು ಪ್ರತಿನಿಧಿಸಿದ್ದರು.