ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯಿದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಹೋಟೆಲುಗಳ ಸಂಘ ಕರ್ನಾಟಕ ಹೈಕೋರ್ಟ್ ಮಟ್ಟಿಲೇರಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಕಾರ್ಮಿಕರು ಅಥವಾ ನೌಕರರ ಆರೋಗ್ಯ, ಯೋಗಕ್ಷೇಮ, ಸುರಕ್ಷತೆ ಕೆಲಸದ ಅವಧಿ, ವಾರದ ರಜೆ, ಒಟ್ಟು ರಜೆ ದಿನಗಳು, ವೇತನ ಸಹಿತ ರಜೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾಯಿದೆ-ಕಾನೂನುಗಳಿದ್ದು, ಅದರಂತೆ ಉದ್ದಿಮೆ, ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಈಗ ಏಕಾಏಕಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ ಸೌಲಭ್ಯ ಒದಗಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಉದ್ದಿಮೆಗಳ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಆಗಲಿದೆ, ಆರ್ಥಿಕ ಹೊರೆ ಸಹ ಬೀಳಲಿದೆ ಎನ್ನಲಾಗಿದೆ.
ಕಾಯಿದೆಗೆ ತಿದ್ದುಪಡಿ ಇಲ್ಲದೆ, ಕಾರ್ಯಕಾರಿ ಆದೇಶದ ಮೂಲಕ ಇಂತಹ ಸೌಲಭ್ಯ ಜಾರಿಗೊಳಿಸಲು ಅವಕಾಶವಿಲ್ಲ. ಇದೊಂದು ಕಾನೂನು ಬಾಹಿರ ಮತ್ತು ಏಕಪಕ್ಷೀಯ ಕ್ರಮವಾಗಿದ್ದು, ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.