
ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ವಲಯಗಳ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ವೇತನ ಸಹಿತ ರಜೆಯನ್ನು ಋತುಚಕ್ರದ ರಜೆಯಾಗಿ ಪಡೆಯಲು ಅನುವು ಮಾಡಿಕೊಡುವ ನೀತಿಗೆ ಗುರುವಾರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಆ ಮೂಲಕ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ ಒಟ್ಟು 12 ದಿನಗಳ ಋತುಸ್ರಾವ ರಜೆ ಮಹಿಳೆಯರಿಗೆ ದೊರೆಯಲಿದೆ
ಕಾನೂನು ಸಚಿವ ಎಚ್ ಕೆ ಪಾಟೀಲ್ ಸಂಪುಟ ಸಭೆ ಬಳಿಕ ಗುರುವಾರ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು. ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪೆನಿಗಳು, ಐಟಿ ಮತ್ತಿತರೆ ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ "ಋತುಚಕ್ರ ರಜೆ ನೀತಿ"ಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ವಿವರಿಸಿದರು.
ಋತುಚಕ್ರ ಆರೋಗ್ಯ ಮಹಿಳೆಯರು ಹಕ್ಕಾಗಿದ್ದು ಕೆಲಸದ ಸ್ಥಳದಲ್ಲಿ ಸುಧಾರಣೆ ತರುವ ಮೂಲಭೂತ ಅಂಶ ಎಂದು ಪರಿಗಣಿಸಿ ಅದರ ಮಹತ್ವವನ್ನು ಗುರುತಿಸಲಾಗಿದೆ. ಈ ಬಗೆಯ ರಜೆ ಮಹಿಳೆಯರು ಯಾವುದೇ ಕಳಂಕ ಅಥವಾ ಪರಿಣಾಮಗಳ ಭಯ ಇಲ್ಲದೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವಂತಹ ಪೂರಕ ವಾತಾವರಣ ಸೃಷ್ಟಿಸುವ ಸಕ್ರಿಯ ಹೆಜ್ಜೆಯಾಗಿದೆ ಎಂದರು.
ದೇಶದಲ್ಲೆಡೆ ಋತುಚಕ್ರ ರಜೆಗೆ ನಿರ್ದಿಷ್ಟ ಶಾಸನ ಇಲ್ಲದಿದ್ದರೂ ಹಲವು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪೆನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ನೀಡುವ ನೀತಿ ಅಳವಡಿಸಿಕೊಂಡಿವೆ ಎಂದರು. ಕಾರ್ಮಿಕ ಇಲಾಖೆ 2025ರ ಮಾಸಿಕ ಋತುಸ್ರವ ರಜೆ ನೀತಿ ಜಾರಿಗಾಗಿ ಆಡಳಿತಾತ್ಮಕ ಅನುಮೋದನೆ ಕೋರಿತ್ತು. ರಜೆ ನೀಡುತ್ತಿರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದರು.
ಬೇರೆ ಬೇರೆ ಸ್ವರೂಪದಲ್ಲಿ ಕೇರಳ ಬಿಹಾರ ಒಡಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಋತುಸ್ರಾವ ರಜೆಗೆ ಅವಕಾಶ ಕಲ್ಪಿಸಲಾಗಿದ್ದರೂ ಖಾಸಗಿ ಹಾಗೂ ಸರ್ಕಾರಿ ವಲಯಗಳ ಮಹಿಳಾ ಉದ್ಯೋಗಿಗಳಿಗೆ ಸಮಗ್ರವಾಗಿ ನೀತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಎನ್ನಲಾಗುತ್ತಿದೆ.
ಬೆಂಗಳೂರಿನ ಕ್ರೈಸ್ಟ್ (ಡೀಮ್ಡ್ ಟು ಬಿ) ವಿಶ್ವವಿದ್ಯಾಲಯದ ಕಾನೂನು ಶಾಲೆಯ ಸಹಾಯಕ ಡೀನ್ ಮತ್ತು ಮುಖ್ಯಸ್ಥೆ ಸಪ್ನಾ ಎಸ್ ನೇತೃತ್ವದ 18 ಸದಸ್ಯರ ಸಮಿತಿ 2024 ರಲ್ಲಿ ಸಲ್ಲಿಸಿದ ವರದಿ ಆಧರಿಸಿ ಈ ನೀತಿಯನ್ನು ರೂಪಿಸಲಾಗಿದೆ.
ಸಮಿತಿಯು ಕೈಗಾರಿಕೆಗಳು, ಕಾರ್ಮಿಕ ಸಂಘಗಳು, ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳು, ವೈದ್ಯರು, ಸ್ತ್ರೀರೋಗತಜ್ಞರು ಮತ್ತು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಎಸ್‌ಇಸಿ) ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಒಳಗೊಂಡಿತ್ತು.