ಬೆಂಗಳೂರು ಗಲಭೆಗೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸುವ ಕುರಿತು ಕೇಂದ್ರ ಸರ್ಕಾರವು ಒಂದೆರಡು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ತನಿಖಾ ಸಂಸ್ಥೆಯ ಪರ ವಕೀಲ ಶುಕ್ರವಾರ ರಾಜ್ಯ ಹೈಕೋರ್ಟ್‌ಗೆ ತಿಳಿಸಿದರು.
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿ ದೂರು ದಾಖಲಿಸಿರುವ ಎರಡು ಪ್ರಕರಣಗಳನ್ನು ಎನ್‌ಐಎಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದರು. ಸೆಪ್ಟೆಂಬರ್ 21ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಆಗಸ್ಟ್ 11ರಂದು ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ಅಶೋಕ್ ಎಸ್ ಕಿಣಗಿ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಎನ್‌ಐಎ ಪರ ವಕೀಲ ವಿವರಿಸಿದರು. ಈ ಸಂಬಂಧದ ಅಧಿಸೂಚನೆಯನ್ನು ಮುಂದಿನ ವಾರ ನ್ಯಾಯಪೀಠಕ್ಕೆ ದಾಖಲೆಯ ರೂಪದಲ್ಲಿ ಸಲ್ಲಿಸಲಾಗುವುದು ಎಂದರು.
ಗಲಭೆಯ ಸಂದರ್ಭದಲ್ಲಿ ಉಂಟಾಗಿರುವ ಆಸ್ತಿ ನಷ್ಟ ಅಂದಾಜಿಸಲು ಪರಿಹಾರ ಆಯುಕ್ತರನ್ನಾಗಿ (ಕ್ಲೇಮ್ ಕಮಿಷನರ್) ನಿವೃತ್ತ ನ್ಯಾಯಮೂರ್ತಿ ಎಚ್ ಎಸ್ ಕೆಂಪಣ್ಣ ಅವರನ್ನು ನೇಮಕ ಮಾಡಿರುವ ಸೆಪ್ಟೆಂಬರ್ 11ರ ಮೆಮೊವನ್ನು ದಾಖಲೆಯ ರೂಪದಲ್ಲಿ ಸಲ್ಲಿಸಲಾಗಿದೆ ಎಂದ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಎಚ್ ಎಸ್ ಕೆಂಪಣ್ಣ ಅವರಿಗೆ ಅಗತ್ಯ ಮೂಲಸೌಕರ್ಯ ಮತ್ತಿತರ ಸೌಲಭ್ಯ ಕಲ್ಪಿಸಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಮನವಿಗಳ ಜೊತೆ ಯೂನಿಯನ್ ಆಫ್ ಇಂಡಿಯಾವನ್ನು ಪ್ರತಿವಾದಿಯನ್ನಾಗಿಸುವ ಅರ್ಜಿಗೆ ನ್ಯಾಯಾಲಯವು ಅನುವು ಮಾಡಿಕೊಟ್ಟಿತು.
ಸಿಆರ್‌ಪಿಸಿ ಸೆಕ್ಷನ್ 41Cರ ಅಡಿ ಬೆಂಗಳೂರು ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿವರವನ್ನು ಪೊಲೀಸ್ ನಿಯಂತ್ರಣಾ ಕೊಠಡಿಯ ಸೂಚನಾ ಫಲಕದಲ್ಲಿ ಪ್ರಕರಟಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಹಿತಿ ನೀಡಿತು.