ಬೆಂಗಳೂರು ಗಲಭೆ: ಪೋಲಿಸ್‌ ನಿಯಂತ್ರಣ ಕೊಠಡಿ ಹೊರಗೆ ಬಂಧಿತರ ಹೆಸರು ಪ್ರಕಟಣೆ ಕೋರಿಕೆ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರಿನಲ್ಲಿ ಆಗಸ್ಟ್ 11ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ಹಾಗೂ ಅವರ ಹುದ್ದೆಗಳನ್ನು ಪ್ರಕಟಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಬೆಂಗಳೂರು ಗಲಭೆ: ಪೋಲಿಸ್‌ ನಿಯಂತ್ರಣ ಕೊಠಡಿ ಹೊರಗೆ ಬಂಧಿತರ ಹೆಸರು ಪ್ರಕಟಣೆ ಕೋರಿಕೆ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Bangalore Riots 2020

ಬೆಂಗಳೂರು ಗಲಭೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೊಳಗಾಗಿರುವವರ ಹೆಸರುಗಳನ್ನು ಪೊಲೀಸ್ ನಿಯಂತ್ರಣ ಕೊಠಡಿಗಳಲ್ಲಿ ಪ್ರಕಟಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ನೋಟಿಸ್ ಜಾರಿಗೊಳಿಸಿದೆ (ಜುನೈದ್ ಅಹ್ಮದ್ v. ಕರ್ನಾಟಕ ರಾಜ್ಯ).

ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ ಪಿಎಸ್) ಸೆಕ್ಷನ್ 41C ಅನ್ವಯ ಕೋರಿಕೆ ಸಲ್ಲಿಸಲಾಗಿದ್ದು, ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಹುದ್ದೆಯನ್ನೂ ಪ್ರಕಟಿಸುವಂತೆ ಮನವಿ ಮಾಡಲಾಗಿದೆ.

Also Read
ಬೆಂಗಳೂರು ಗಲಭೆ: ಹಾನಿ ಅಂದಾಜಿಗೆ ನಿವೃತ್ತ ನ್ಯಾ. ಎಚ್ ಎಸ್ ಕೆಂಪಣ್ಣರನ್ನು ಪರಿಹಾರ ಆಯುಕ್ತರಾಗಿ ನೇಮಿಸಿದ ಹೈಕೋರ್ಟ್

ವಕೀಲ ಸಯ್ಯದ್ ಜಹೀರುದ್ದೀನ್ ಬರೀದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ನೋಟಿಸ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ಸೆಪ್ಟೆಂಬರ್ 11ಕ್ಕೆ ವಿಚಾರಣೆ ಮುಂದೂಡಿತು.

ತನ್ನ ಆದೇಶದಲ್ಲಿ ನ್ಯಾಯಾಲಯವು ಹೀಗೆ ಹೇಳಿದೆ,

“ಬೆಂಗಳೂರು ನಗರದಲ್ಲಿ ಆಗಸ್ಟ್‌ 11, 2020ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಸಿಆರ್ ಪಿಸಿ ಸೆಕ್ಷನ್-1973ರ ಸೆಕ್ಷನ್ 41Cಕ್ಕೆ ಅನುಗುಣವಾಗಿ ಮೆಮೊ/ಆಕ್ಷೇಪಣಾ ಹೇಳಿಕೆ/ಲಿಖಿತ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ.”
ಕರ್ನಾಟಕ ಹೈಕೋರ್ಟ್‌

ಇದೇ ಸಂದರ್ಭದಲ್ಲಿ ನ್ಯಾಯಾಲಯವು ಬೆಂಗಳೂರು ಗಲಭೆ ಪ್ರಕರಣಗಳ ಜೊತೆ ಇದನ್ನೂ ಸೇರಿಸುವಂತೆ ರಿಜಿಸ್ಟ್ರಿಗೆ ಸೂಚಿಸಿತು. ತಮ್ಮ ಕುಟುಂಬದ ಪುರುಷರನ್ನು ಆಗಸ್ಟ್ 12-16ರ ನಡುವೆ ಮಧ್ಯರಾತ್ರಿಯಲ್ಲಿ ಬಂಧಿಸಲಾಗಿದೆ ಎಂದು ಹಲವರು ತಮಗೆ ತಿಳಿಸಿರುವುದಾಗಿ ಅರ್ಜಿದಾರ ವಕೀಲ ಸಯ್ಯದ್ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಬಂಧಿತ ಕುಟುಂಬ ಸದಸ್ಯರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಬಂಧಿತರನ್ನು ಎಲ್ಲಿ ಇಡಲಾಗಿದೆ ಎಂಬುದರ ಮಾಹಿತಿಯನ್ನೂ ಕುಟುಂಬದವರಿಗೆ ನೀಡಲಾಗಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Also Read
ಬೆಂಗಳೂರು ಗಲಭೆಗಳು: ಆರೋಪಿತರ ಹೆಸರನ್ನು ಪ್ರಕಟಿಸುವಂತೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್‌

ಅರ್ಜಿದಾರರು ಸಂಬಂಧಿತ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದರೂ ಯಾವುದೇ ಸುಳಿವು ದೊರೆತಿಲ್ಲ. ಬೆಂಗಳೂರಿನ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಂಧಿತರ ಹೆಸರನ್ನು ನೋಡುವುದಾಕ್ಕಾಗಿಯೇ ಅರ್ಜಿದಾರರು ವೈಯಕ್ತಿಕ ಭೇಟಿ ನೀಡಿದ್ದರೂ ಅಲ್ಲಿಯೂ ಮಾಹಿತಿ ಪ್ರಕಟಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com