Bangalore Riots 2020 
ಸುದ್ದಿಗಳು

[ಬೆಂಗಳೂರು ಗಲಭೆ] ರಾಜ್ಯ ಪೊಲೀಸರು ಸಂಗ್ರಹಿಸಿರುವ ದಾಖಲೆ, ಮಾಹಿತಿ ಕೋರಿದ್ದ ಅರ್ಜಿ ವಜಾ ಮಾಡಿದ ವಿಶೇಷ ನ್ಯಾಯಾಲಯ

Siddesh M S

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿಕೊಂಡಿರುವ ಆರೋಪಿಗಳ ಸ್ವಯಂಪ್ರೇರಿತ ಹೇಳಿಕೆ ಮತ್ತಿತರ ಮಾಹಿತಿಯನ್ನು ನೀಡಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ವಿಶೇಷ ನ್ಯಾಯಾಲಯವು ಈಚೆಗೆ ವಜಾ ಮಾಡಿದೆ.

ಕೆ ಜಿ ಮತ್ತು ಡಿ ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ 20ನೇ ಆರೋಪಿಯಾಗಿರುವ ಮೊಹಮ್ಮದ್‌ ಮುದಾಸಿರ್‌ ಕಲೀಂ ಅವರು ಸಲ್ಲಿಸಿದ್ದ ಮನವಿಯನ್ನು 69ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಡಾ. ಕಸನಪ್ಪ ನಾಯ್ಕ್‌ ಅವರು ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದ್ದಾರೆ.

“ಹಾಲಿ ಪ್ರಕರಣದಲ್ಲಿ ಇನ್ನೂ ಆರೋಪ ನಿಗದಿ ಮಾಡಲಾಗಿಲ್ಲ. ಅರ್ಜಿದಾರರು ಕೋರಿರುವ ದಾಖಲೆಗಳನ್ನು ಪ್ರಾಸಿಕ್ಯೂಷನ್‌ ತನ್ನ ಸಮರ್ಥನೆ ಬಳಸುತ್ತಿಲ್ಲ. ಹೇಳಿಕೆಗಳು ಇನ್ನು ದಾಖಲೆಯ ಭಾಗವಾಗಿಲ್ಲ. ಪರಿಸ್ಥಿತಿ ಹೀಗಿರುವುದರಿಂದ ಆರೋಪಿ ಮುದಾಸಿರ್‌ ಅವರು ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

“ತಾವು ಮುಗ್ಧ ಎಂದು ಸಾಬೀತುಪಡಿಸಲು ಆ ದಾಖಲೆಗಳು ಅಗತ್ಯವೆನಿಸಿದರೆ ತಮ್ಮ ಸಮರ್ಥನೆಗಾಗಿ ಆ ಸಂದರ್ಭದಲ್ಲಿ ಆರೋಪಿಯು ತಮ್ಮ ಈ ಹಕ್ಕನ್ನು ಚಲಾಯಿಸಬಹುದಾಗಿದೆ. ಇಲ್ಲಿ, ಆರೋಪಿಯು ತಮ್ಮ ಮನವಿಯನ್ನು ಪುರಸ್ಕರಿಸುವುದಕ್ಕೆ ಸೂಕ್ತ ಸಮರ್ಥನೆ ನೀಡದಿರುವುದರಿಂದ ಮನವಿ ವಜಾ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

“ರಾಜ್ಯ ಪೊಲೀಸರು ದಾಖಲಿಸಿಕೊಂಡಿರುವ ಆರೋಪಿಗಳ ಸ್ವಯಂಪ್ರೇರಿತ ಹೇಳಿಕೆಗಳು, 27 ಪೊಲೀಸ್‌ ಸಿಬ್ಬಂದಿ ಮತ್ತು 24 ಸಾರ್ವಜನಿಕರ ಹೇಳಿಕೆಗಳು, 2020ರ ನವೆಂಬರ್‌ 3ಕ್ಕೂ ಮುನ್ನ ದಾಖಲಿಸಿಕೊಳ್ಳಲಾದ ಸಂರಕ್ಷಿತ ಸಾಕ್ಷಿಗಳ ಹೇಳಿಕೆಗಳು, 52ನೇ ಪಟ್ಟಿ ಮಾಡಲಾದ ಸಾಕ್ಷಿಯ (ಎಲ್‌ಡಬ್ಲು) ಹೇಳಿಕೆ ದಾಖಲಿಸಿಕೊಳ್ಳುವಾಗ ಆತನಿಗೆ ತೋರಿಸಲಾದ ವಿಡಿಯೊ ತುಣುಕನ್ನು ಸಲ್ಲಿಸಲು ಎನ್‌ಐಎಗೆ ನಿರ್ದೇಶಿಸಬೇಕು” ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮೊಹಮ್ಮದ್‌ ತಾಹಿರ್ ಅವರು “ಎನ್‌ಐಎ ತನಿಖೆಯು ಪಕ್ಷಪಾತದಿಂದ ಕೂಡಿದ್ದು, ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಲಾಗಿದೆ. ಆರೋಪ ಪಟ್ಟಿಯಲ್ಲಿ ನಾಲ್ಕು ವಿಧದ ವ್ಯಕ್ತಿಗಳನ್ನು ಉಲ್ಲೇಖಿಸಲಾಗಿದೆ. ಸಾರ್ವಜನಿಕ ಸಾಕ್ಷಿಗಳ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ತಮಗೆ ಅನುಕೂಲಕರವಾದ ಆಯ್ದ ಮತ್ತು ತಿರುಚಿದ ದಾಖಲೆಗಳನ್ನು ಸಲ್ಲಿಸಲಾಗಿದೆ. ರಾಜ್ಯ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಗೂ ಎನ್‌ಐಎ ಸಲ್ಲಿಸಿರುವ ಆರೋಪ ಪಟ್ಟಿಗೂ ಸಾಕಷ್ಟು ವ್ಯತ್ಯಾಸಗಳಿವೆ. ನ್ಯಾಯದಾನ ದೃಷ್ಟಿಯಿಂದ ಮೇಲೆ ಉಲ್ಲೇಖಿಸಿರುವ ದಾಖಲೆಗಳನ್ನು ಸಲ್ಲಿಸುವಂತೆ ಎನ್‌ಐಎಗೆ ಆದೇಶಿಸಬೇಕು” ಎಂದು ಕೋರಿದ್ದರು.

“ಅರ್ಜಿದಾರರು ಮತ್ತು ಇತರೆ ಆರೋಪಿಗಳ ವಿರುದ್ಧ ಎನ್‌ಐಎ ಸುಳ್ಳು ಪ್ರಕರಣ ಹುಟ್ಟು ಹಾಕಿದ್ದು, ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸುವ ಮೂಲಕ ಮಾತ್ರ ಅದನ್ನು ರುಜುವಾತುಪಡಿಸಲು ಸಾಧ್ಯ. ಹೀಗಾಗಿ, ಮನವಿಯನ್ನು ಪರಿಗಣಿಸಬೇಕು” ಎಂದು ಕೋರಿದ್ದರು.

ಎನ್‌ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು “ವಿಚಾರಣೆ ಅಥವಾ ಸಾಕ್ಷಿ ದಾಖಲೀಕರಣದ ವೇಳೆ ನಿರ್ದಿಷ್ಟ ಸಂದರ್ಭದಲ್ಲಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದ್ದು, ಆರೋಪ ನಿಗದಿಪಡಿಸುವ ಸಂದರ್ಭದಲ್ಲಿ ದಾಖಲೆ ಸಲ್ಲಿಸುವಂತೆ ಆಗ್ರಹಿಸಲು ಆರೋಪಿಗಳಿಗೆ ಯಾವುದೇ ಹಕ್ಕು ಇಲ್ಲ. ಈ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ಗೆ ನಿರ್ದೇಶನ ನೀಡಬೇಕು ಎಂದು ಕೋರುವ ಯಾವುದೇ ಹಕ್ಕು ಇರುವುದಿಲ್ಲ. ಹೀಗಾಗಿ. ಅರ್ಜಿಯನ್ನು ವಜಾ ಮಾಡಬೇಕು” ಎಂದು ಕೋರಿದ್ದರು.

“ಎನ್‌ಐಎ ಪ್ರಕರಣದ ವಿಚಾರಣೆಯನ್ನು ತನ್ನ ಕೈಗೆತ್ತಿಕೊಂಡಿದ್ದು, ಹಲವು ಕಡೆ ಶೋಧ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಸ್ವತಂತ್ರವಾಗಿ ತನಿಖೆ ನಡೆಸಿ ಎನ್‌ಐಎ ಅಂತಿಮ ವರದಿಯನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಲ್ಲಿ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪಾತ್ರದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆರೋಪ ಪಟ್ಟಿಯ ಜೊತೆಗೆ ಸಂಬಂಧಿತ ಎಲ್ಲಾ ದಾಖಲೆಗಳನ್ನೂ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಹೀಗಾಗಿ, ಅರ್ಜಿಯನ್ನು ಪರಿಗಣಿಸಬಾರದು” ಎಂದು ಕೋರಿದ್ದರು.

ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 143, 147, 148, 353, 333, 332, 436, 427 ಮತ್ತು 149, ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್‌ಗಳಾದ 15, 16, 18 ಮತ್ತು 20, ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆ 1984ರ ಅಡಿ 2020ರ ಸೆಪ್ಟೆಂಬರ್‌ 22ರಂದು ಎನ್‌ಐಎ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

NIA Versus Kaleem.pdf
Preview