ಬೆಂಗಳೂರು ಗಲಭೆಯ ಚಿತ್ರಣ 
ಸುದ್ದಿಗಳು

ತನಿಖಾ ಆಯೋಗ ಕಾಯಿದೆ ನಿಬಂಧನೆಯ ಅನುಸಾರ ಪರಿಹಾರ ಆಯುಕ್ತರನ್ನು ಸಶಕ್ತಗೊಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು ಗಲಭೆ ವಿಚಾರವು ಸೂಕ್ಷ್ಮವಾಗಿರುವುದರಿಂದ ಸಕಾರಣದಿಂದ ಆಯೋಗ ತೆಗೆದುಕೊಳ್ಳುವ ನಿರ್ಧಾರದ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವುದರಿಂದ ಆಯೋಗವನ್ನು ರಕ್ಷಿಸಲು ತನಿಖಾ ಆಯೋಗ ಕಾಯಿದೆ ಸೆಕ್ಷನ್ 9 ನೆರವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಬೆಂಗಳೂರು ಗಲಭೆಯ ಸಂದರ್ಭದಲ್ಲಿ ಉಂಟಾದ ಆಸ್ತಿ ಹಾನಿ ಮತ್ತು ನಷ್ಟ ಅಂದಾಜಿಸಲು ಹೈಕೋರ್ಟ್ ನಿಂದ ಪರಿಹಾರ ಆಯುಕ್ತರಾಗಿ (ಕ್ಲೇಮ್ಸ್ ಕಮಿಷನರ್) ನೇಮಿಸಲ್ಪಟ್ಟಿರುವ ನಿವೃತ್ತ ನ್ಯಾ. ಎಚ್ ಎಸ್ ಕೆಂಪಣ್ಣ ಅವರನ್ನು ತನಿಖಾ ಆಯೋಗ ಕಾಯಿದೆ-1952ರ ನಿಬಂಧನೆಯ ಅನ್ವಯ ಸಶಕ್ತಗೊಳಿಸಲು ಮುಂದಾಗುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಕಾಯಿದೆ ಅನ್ವಯ ಸೆಕ್ಷನ್ 4 (ಆಯೋಗದ ಅಧಿಕಾರಗಳು), ಸೆಕ್ಷನ್ 5 (ಆಯೋಗದ ಹೆಚ್ಚುವರಿ ಅಧಿಕಾರಗಳು) ಮತ್ತು ಸೆಕ್ಷನ್ 9 (ಸಕಾರಣ ಭದ್ರತಾ ನಿರ್ಧಾರ) ಅಡಿ ಪರಿಹಾರ ಆಯುಕ್ತರಿಗೆ ಅಧಿಕಾರ ನೀಡುವುದು ಅಗತ್ಯ ಎಂದು ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ಪರ ವಕೀಲ ಶ್ರೀಧರ್ ಪ್ರಭು ವಾದಿಸಿದರು.

ಬೆಂಗಳೂರು ಗಲಭೆ ಪ್ರಕರಣವು ಅತಿಸೂಕ್ಷ್ಮ ವಿಚಾರವಾಗಿರುವುದರಿಂದ ಸೆಕ್ಷನ್ 9ರ ಅಡಿ ಪರಿಹಾರ ಆಯುಕ್ತರಿಗೆ ಭದ್ರತೆ ಕಲ್ಪಿಸಿವುದು ಅತ್ಯಗತ್ಯ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು. “ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಯಾರೊಬ್ಬರೂ ನಿವೃತ್ತ ನ್ಯಾಯಮೂರ್ತಿ ಅವರನ್ನು ಯಾವುದೇ ತೆರನಾದ ಪ್ರಕ್ರಿಯೆಗೆ ಒಳಪಡಿಸುವ ಅಗತ್ಯವಿಲ್ಲ” ಎಂದು ಸಿಜೆ ಓಕಾ ಹೇಳಿದರು.

ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಕಾರಣದಿಂದ ತೆಗೆದುಕೊಳ್ಳುವ ಆಯೋಗದ ನಿರ್ಧಾರದ ವಿರುದ್ಧ ಕಾನೂನು ಕ್ರಮ ಜರುಗಿಸುವುದರಿಂದ ಆಯೋಗಕ್ಕೆ ರಕ್ಷಣೆ ಒದಗಿಸಲಿದೆ ಎಂದು ಹೇಳಲಾಗಿದೆ. ಮೂಲಸೌಲಭ್ಯ ಕಲ್ಪಿಸುವ ವಿಚಾರದ ಬಗ್ಗೆ ಸೆಪ್ಟೆಂಬರ್ 29ರ ವಿಚಾರಣೆಯ ವೇಳೆ ನಿರ್ಧರಿಸಲಾಗುವುದು ಎಂದು ನ್ಯಾಯಾಲಯವು ವಿಚಾರಣೆ ಮುಂದೂಡಿತು.