RBI, Supreme Court
RBI, Supreme Court 
ಸುದ್ದಿಗಳು

ಬ್ಯಾಂಕ್ ಹಗರಣ: ನಮ್ಮ ಅಧಿಕಾರಿಗಳ ಪಾತ್ರದ ಬಗ್ಗೆ ಪ್ರತ್ಯೇಕ ತನಿಖೆ ಮಾಡಲಾಗದು ಎಂದು ಸುಪ್ರೀಂಗೆ ತಿಳಿಸಿದ ಆರ್‌ಬಿಐ

Bar & Bench

ಬ್ಯಾಂಕಿಂಗ್ ಮತ್ತು ಹಣಕಾಸು ಹಗರಣಗಳಲ್ಲಿ ತನ್ನ ಅಧಿಕಾರಿಗಳ ಪಾತ್ರದ ಬಗ್ಗೆ ವೈಯಕ್ತಿಕ ಮತ್ತು ಪ್ರತ್ಯೇಕ ತನಿಖೆ ನಡೆಸುವುದು ಕಾರ್ಯಸಾಧುವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲರಾದ ಸತ್ಯ ಸಬರ್‌ವಾಲ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)  ಕುರಿತಂತೆ ಸೆಂಟ್ರಲ್ ಬ್ಯಾಂಕ್ ಈ ಉತ್ತರ ನೀಡಿದೆ.

"ಅಧಿಕಾರಿಗಳ ಒಂದು ಗುಂಪಿನ ವಿರುದ್ಧ ಮಾಡಲಾದ ಆರೋಪಗಳಿಗೆ ಪ್ರತ್ಯೇಕ ಮತ್ತು ವೈಯಕ್ತಿಕ ತನಿಖೆ ನಡೆಸುವುದು ಸಾಧ್ಯವಿಲ್ಲ ಎಂದು ಗೌರವಪೂರ್ವಕವಾಗಿ ಹೇಳುತ್ತಿದ್ದೇವೆ. ಯಾವಾಗಲೂ ಅಪರಾಧದ ಬಗ್ಗೆ ತನಿಖೆ ನಡೆಸಲಾಗುತ್ತದೆ, ಅದು ಅದರಲ್ಲಿ ಭಾಗವಾದ ಎಲ್ಲ ವ್ಯಕ್ತಿಗಳ ಪಾತ್ರವನ್ನೂ ಒಳಗೊಳ್ಳುತ್ತದೆ. ಆದ್ದರಿಂದ ಅರ್ಜಿಯಲ್ಲಿ ಮಾಡಿದ ಮನವಿಯು ವಜಾಗೊಳಿಸಲು ಯೋಗ್ಯವಾಗಿದೆ" ಎಂದು ಆರ್‌ಬಿಐ ಕೋರಿತು.

ಆರ್‌ಬಿಐಯನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಕ್ಕಾಗಿ ಅರ್ಜಿದಾರರಿಗೆ ಮೂರು ವಾರಗಳ ಕಾಲಾವಕಾಶ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಜುಲೈನಲ್ಲಿ ಸಿಬಿಐ ಮತ್ತು ಆರ್‌ಬಿಐಗೆ ನೋಟಿಸ್‌ ನೀಡಿತ್ತು. ʼಕಳೆದ ಕೆಲ ವರ್ಷಗಳಲ್ಲಿ ಆರ್‌ಬಿಐ ಮತ್ತಿತರ ಏಜೆನ್ಸಿಗಳು ಪತ್ತೆ ಮಾಡಿದ ಬ್ಯಾಂಕಿಂಗ್ ವಂಚನೆಗಳ ಸಂಖ್ಯೆ ಮತ್ತು ಅದರ ಮೊತ್ತ ದೊಡ್ಡದಾಗಿದ್ದು, ಆರ್‌ಬಿಐ ವಿಸ್ತೃತ ಅಧಿಕಾರವನ್ನು ಹೊಂದಿದ್ದರೂ ಠೇವಣಿದಾರರು ಹೂಡಿಕೆದಾರರು ಹಾಗೂ ಷೇರುದಾರರು ಸೇರಿದಂತೆ ವಿವಿಧ ಪಾಲುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ವಿಫಲವಾಗಿದೆʼ ಎಂದು ಸ್ವಾಮಿ ಮತ್ತು ವಕೀಲ ಸತ್ಯ ಸಬರ್ವಾಲ್ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.

ಇದು ಇಡೀ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಇದು ಕಾರಣವಾಗಿದೆ. ಬ್ಯಾಂಕ್‌ಗಳು ನಿಯಂತ್ರಕ ಆರ್‌ಬಿಐ ವಂಚನೆಗಳ ಸರಣಿ ಬಗ್ಗೆ ಉದಾಸೀನ ಧೋರಣೆ ತಳೆದಿರುವುದು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಹೀಗಾಗಿ ಆರ್‌ಬಿಐನ ಈ ಕೆಳಗಿನ ಹಗರಣಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅರ್ಜಿ ಕೋರಿತ್ತು:

-ಕಿಂಗ್‌ಫಿಷರ್ ಹಗರಣ;

- ಬ್ಯಾಂಕ್ ಆಫ್ ಮಹಾರಾಷ್ಟ್ರ ಹಗರಣ;

- ಉತ್ತರ ಪ್ರದೇಶ ಮೂಲದ ಖಾಸಗಿ ಸಕ್ಕರೆ ಸಂಸ್ಥೆ ಹಗರಣ;

- ನೀರವ್ ಮೋದಿ/ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ;

-ಐಎಲ್‌&ಎಫ್‌ಎಸ್‌ ಹಗರಣ;

- ಪಿಎಂಸಿ ಬ್ಯಾಂಕ್ ಹಗರಣ;

- ಯೆಸ್ ಬ್ಯಾಂಕ್ ಹಗರಣ;

- ಲಕ್ಷ್ಮಿ ವಿಲಾಸ್ ಬ್ಯಾಂಕ್ ಹಗರಣ;

- ರೋಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಹಗರಣ;

- ಫಸ್ಟ್ ಲೀಸಿಂಗ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಹಗರಣ.

ಆದರೆ ಅರ್ಜಿದಾರರ ಆರೋಪಗಳು ವಾಸ್ತವಾಂಶ ಹಾಗೂ ಕಾನೂನಿನ ಆಧಾರವನ್ನು ಹೊಂದಿಲ್ಲ ಎಂದು ಆರ್‌ಬಿಐ ತನ್ನ ವಿರುದ್ಧ ಮಾಡಲಾದ ಆರೋಪಗಳ ನೈಜತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿತು. “ಪಿಐಎಲ್‌ ಆಧಾರರಹಿತವಾಗಿದ್ದು ಭಾರಿ ದಂಡದೊಂದಿಗೆ ಅದನ್ನು ವಜಾಗೊಳಿಸಬೇಕು. ತಾನು ಹಗರಣಗಳಲ್ಲಿ ಭಾಗವಹಿಸಿಲ್ಲ ಅಥವಾ ನಿರ್ಲಕ್ಷ್ಯ ತೋರಿಲ್ಲ. ಅರ್ಜಿಯನ್ನು ಪ್ರಯೋಗಾತ್ಮಕ ರೀತಿಯಲ್ಲಿ ಸಲ್ಲಿಸಲಾಗಿದೆ” ಎಂದು ತೀವ್ರ ಅಸಮಾಧಾನ ಸೂಚಿಸಿತು.