ಡಿಜಿಟಲ್ ಅರೆಸ್ಟ್ ವಂಚನೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು ಸೋಮವಾರ ಆಲಿಸಿದ ಸುಪ್ರೀಂ ಕೋರ್ಟ್ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲವೇ ರಾಜಿಯಿಂದಾಗಿಯೇ ಅನೇಕ ಬಾರಿ ಇಂತಹ ಹಣಕಾಸು ವಂಚನೆ ನಡೆಯುತ್ತಿದೆ ಎಂದು ಗಂಭೀರ ಆತಂಕ ವ್ಯಕ್ತಪಡಿಸಿದೆ.
ಡಿಜಿಟಲ್ ಅರೆಸ್ಟ್ ವಂಚನೆಗಳನ್ನು ತಡೆಗಟ್ಟುವ ಹಾಗೂ ಸಾಧ್ಯವಾದಲ್ಲಿ ಕಳೆದುಹೋದ ಹಣವನ್ನು ವಾಪಸು ಪಡೆಯುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳ ನಡುವೆ ಸಮರ್ಪಕ ಸಮನ್ವಯ ಸಾಧಿಸಲು ಹಲವು ನಿರ್ದೇಶನಗಳನ್ನು ಕೂಡ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಇದೇ ವೇಳೆ ನೀಡಿತು.
“ಈ ರೀತಿಯ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಆರೋಪಿಗಳೊಂದಿಗೆ ಸಂಪೂರ್ಣವಾಗಿ ಕೈಜೋಡಿಸಿಕೊಂಡಿರುವುದನ್ನು ನಾವು ನೋಡಿದ್ದೇವೆ,” ಎಂದು ಇದೇ ಬಗೆಯ ಮತ್ತೊಂದು ಪ್ರಕರಣದ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನುಡಿದರು.
ಬ್ಯಾಂಕುಗಳು ಜನರ ಹಣದ ಪಾಲಕರಾಗಿದ್ದು, ಟ್ರಸ್ಟಿಗಳಂತೆ ಜವಾಬ್ದಾರಿಯಿಂದ ವರ್ತಿಸಬೇಕೇ ಹೊರತು, ಅತಿಯಾದ ಆದರೆ ಇತ್ತೀಚೆಗೆ ಅವುಗಳು ಉತ್ತರದಾಯಿಗಳಾಗಿರುವುದು ಕಳವಳಕರ ಎಂದು ಪೀಠ ಆತಂಕ ವ್ಯಕ್ತಪಡಿಸಿತು.
"ಈ ಬ್ಯಾಂಕುಗಳು ಉತ್ತರದಾಯಿಗಳಾಗುತ್ತಿವೆ. ಬ್ಯಾಂಕುಗಳು ತಾವು ಹಣದ ಟ್ರಸ್ಟಿಗಳು ಎಂದು ಭಾವಿಸಬೇಕೇ ಹೊರತು ಅತ್ಯುತ್ಸುಕತೆ ತೋರಬಾರದು. ನಂಬಿಕೆಯನ್ನು ಮುರಿಯಬಾರದು. ಸಮಸ್ಯೆಯೆಂದರೆ ಈ ಬ್ಯಾಂಕುಗಳು ವಂಚಕರಿಗೆ ಸಾಲ ನೀಡುತ್ತವೆ, ತದನಂತರೆ ಎನ್‌ಸಿಎಲ್‌ಟಿ, ಎನ್‌ಎಸಿಎಲ್‌ಎಟಿ ನ್ಯಾಯಮಂಡಳಿಗಳೆಡೆಗೆ ಪ್ರಕರಣಗಳು ಹೊರಳುತ್ತವೆ (ವಂಚಕ ಕಂಪನಿಗಳು ದಿವಾಳಿಗೆ ಸಿಲುಕಿದಾಗ ಈ ಸಂಸ್ಥೆಗಳ ಮುಂದೆ ಪ್ರಕರಣಗಳು ಬರುತ್ತವೆ)," ಎಂದು ಅವರು ಹೇಳಿದರು.
ಅಟಾರ್ನಿ ಜನರಲ್ ವೆಂಕಟರಮಣಿ ಅವರು ನ್ಯಾಯಾಲಯಕ್ಕೆ ಆರ್‌ಬಿಐ ನಿರ್ದೇಶನಗಳನ್ನು ಪಾಲಿಸಿರುವ ಬಗ್ಗೆ ವಿವರಿಸಿದರು. ಈ ವೇಳೆ ಹಲವು ವಂಕ ಖಾತೆಗಳು ಪತ್ತೆಯಾಗಿರುವ ಬಗ್ಗೆಯೂ ಮಾಹಿತಿ ನೀಡಿದರು.
ದೇಶದುದ್ದಗಲಕ್ಕೂ ನಡೆದಿರುವ ಡಿಜಿಟಲ್ ಅರೆಸ್ಟ್ ಹಗರಣಗಳ ತನಿಖೆಯನ್ನು ಆರಂಭಿಸುವಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 2025ರಲ್ಲಿ ಆದೇಶಿಸಿತ್ತು. ಹಿರಿಯ ನಾಗರಿಕ ದಂಪತಿಯೊಬ್ಬರಿಗೆ ಸಿಬಿಐ, ಐಬಿ ಹಾಗೂ ನ್ಯಾಯಾಂಗ ಅಧಿಕಾರಿಗಳಂತೆ ನಟಿಸಿದ ವಂಚಕರು ₹1.5 ಕೋಟಿ ವಂಚಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿತ್ತು.
ಇಂದಿನ ವಿಚಾರಣೆಯ ವೇಳೆ, ಇಂತಹ ವಂಚಕರ ವಿರುದ್ಧ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಒಂದು ಅಂತರ್-ವಿಭಾಗೀಯ ಸಮಿತಿಯನ್ನು ರಚಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಮುಂದುವರಿದು, ಡಿಜಿಟಲ್ ಅರೆಸ್ಟ್ ವಂಚನೆಗಳಲ್ಲಿ ಒಟ್ಟು ₹10 ಕೋಟಿ ಮೊತ್ತ ಸಂಗ್ರಹವಾಗಿರುವುದನ್ನು ಸಿಬಿಐ ಗುರುತಿಸಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ನಿರ್ಬಂಧಕ ಕ್ರಮಗಳ ಭಾಗವಾಗಿ, ಇಂತಹ ವಂಚಕ ಹಣಕಾಸು ವ್ಯವಹಾರಗಳನ್ನು ಪತ್ತೆಹಚ್ಚಲು ಬ್ಯಾಂಕುಗಳು ಈಗ ಕೃತಕ ಬುದ್ಧಿಮತ್ತೆ (ಎಐ) ಸಹಾಯವನ್ನು ಬಳಸುತ್ತಿವೆ ಎಂದು ತಿಳಿಸಲಾಯಿತು.
ಡಿಜಿಟಲ್ ಅರೆಸ್ಟ್ ವಂಚನೆಗಳನ್ನು ಗುರುತಿಸಿ ತಡೆಗಟ್ಟಲು ಸಂಬಂಧಿತ ಎಲ್ಲಾ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಪುನರುಚ್ಚರಿಸಿತು.
ಗಮನಾರ್ಹ ಅಂಶವೆಂದರೆ, ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ತಿಳಿವಳಿಕೆ ಒಪ್ಪಂದ ಹಾಗೂ ಪ್ರಮಾಣಿತ ಕಾರ್ಯಚರಣಾ ವಿಧಾನವನ್ನು (ಎಸ್‌ಒಪಿ)ಗಳನ್ನು ಕೂಡ ರೂಪಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಹಿನ್ನಲೆಯಲ್ಲಿ, ಇವುಗಳನ್ನು ತ್ವರಿತವಾಗಿ ಜಾರಿಗೆ ತರಲು ನ್ಯಾಯಾಲಯ ನಿರ್ದೇಶನ ನೀಡಿದೆ.