

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ತಾರ್ಕಿಕ ವ್ಯತ್ಯಾಸಗಳಿವೆ ಎಂದು ಹೇಳಲಾಗಿರುವ 1.25 ಕೋಟಿ ಮತದಾರರ ಹೆಸರು ಪ್ರಕಟಿಸುವಂತೆ ಇಸಿಐಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ದಾಖಲೆಗಳ ಪರಿಶೀಲನೆಗಾಗಿ ಸುಮಾರು ಎರಡು ಕೋಟಿ ಜನರಿಗೆ ನೋಟಿಸ್ ನೀಡಲಾಗಿದೆ ಎಂಬುದನ್ನು ಸಿಜೆಐ ಸೂರ್ಯ ಕಾಂತ್ , ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಗಮನಿಸಿತು.
ಭಾರೀ ಸಂಖ್ಯೆಯಲ್ಲಿ ನೋಟಿಸ್‌ಗಳನ್ನು ನೀಡಿರುವುದನ್ನು ಪರಿಗಣಿಸಿದ ನ್ಯಾಯಾಲಯ ತಾರ್ಕಿಕ ವ್ಯತ್ಯಾಸ ಪಟ್ಟಿಯಲ್ಲಿರುವ ವ್ಯಕ್ತಿಗಳ ಹೆಸರನ್ನು ಗ್ರಾಮ ಪಂಚಾಯ್ತಿ, ಬ್ಲಾಕ್ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರದರ್ಶಿಸುವಂತೆ ಆದೇಶಿಸಿತು.
ಪಟ್ಟಿ ಮಾಡಲಾದ ಹೆಸರುಗಳ ವಿರುದ್ಧದ ಆಕ್ಷೇಪಣೆಗಳನ್ನು 10 ದಿನಗಳಲ್ಲಿ ಸಲ್ಲಿಸಬೇಕು ಮತ್ತು ದಾಖಲೆಗಳನ್ನು ಸಲ್ಲಿಸಲು ಮತ್ತಷ್ಟು ಸಮಯ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
“ದಾಖಲೆಗಳು ತೃಪ್ತಿಕರವಾಗಿಲ್ಲವೆಂದು ಕಂಡುಬಂದಲ್ಲಿ, ಆ ವ್ಯಕ್ತಿಗಳಿಗೆ ದಾಖಲೆಗಳನ್ನು ಸಲ್ಲಿಸುವ ಮತ್ತೊಂದು ಅವಕಾಶ ನೀಡಬೇಕು ಮತ್ತು ಮತದಾರರ ಎದುರಲ್ಲಿಯೇ ಸ್ವತಃ ಅಥವಾ ಅಧಿಕಾರ ಪಡೆದ ಪ್ರತಿನಿಧಿಯ ಮೂಲಕ ವಿಚಾರಣೆ ನಡೆಸಬೇಕು,” ಎಂದು ಪೀಠ ಆದೇಶಿಸಿತು.
ಜನರಿಗೆ ವಿಚಾರಣೆಗೆ ಅವಕಾಶ ನೀಡುವ ಸ್ಥಳಗಳಲ್ಲಿ ಸಾಕಷ್ಟು ಸಿಬ್ಬಂದಿ ನಿಯೋಜಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಇದೇ ವೇಳೆ, ಸ್ಥಳೀಯ ಅಧಿಕಾರಿಗಳು ಸ್ವೀಕರಿಸಿದ ದಾಖಲೆಗಳಿಗೆ ರಸೀದಿ ನೀಡಬೇಕು ಹಾಗೂ ಆಕ್ಷೇಪಣೆಗಳ ಕುರಿತು ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ಕಾರಣಗಳನ್ನು ನೀಡಬೇಕು ಎಂದು ಅದು ಸೂಚಿಸಿತು.
ಗಮನಾರ್ಹ ಅಂಶವೆಂದರೆ, ಅಧಿಕೃತ ಸುತ್ತೋಲೆ ಹೊರಡಿಸದೆ ವಾಟ್ಸಾಪ್ ಮೂಲಕ ನಿರ್ದೇಶನಗಳನ್ನು ನೀಡಿರುವುದಕ್ಕೆ ಚುನಾವಣಾ ಆಯೋಗದ ಮೇಲೆ ಪೀಠ ಆಕ್ಷೇಪ ವ್ಯಕ್ತಪಡಿಸಿತು.
ಇದೇ ವೇಳೆ "ಒಂದು ಕೋಟಿಗೂ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದೆ. ದಯವಿಟ್ಟು ಜನ ಅನುಭವಿಸುತ್ತಿರುವ ಒತ್ತಡ ಅರ್ಥಮಾಡಿಕೊಳ್ಳಿ. ಅಗತ್ಯವಿರುವ ಕಡೆ ನ್ಯಾಯಾಲಯ ನಿರ್ದೇಶನ ನೀಡಲಿದೆ" ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.
ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಿಚಾರಣಾ ಕೇಂದ್ರಗಳ ಸಂಖ್ಯೆ ಕಡಿಮೆಯಿದೆ, ಹೆಸರುಗಳ ಅಕ್ಷರ ವ್ಯತ್ಯಾಸಗಳು ಹಾಗೂ ವಯಸ್ಸಿನ ಅಂತರಗಳನ್ನು ಕಾರಣವನ್ನಾಗಿ ಮಾಡಿಕೊಂಡು ಹೆಸರುಗಳನ್ನು ಹೊರಗಿಡಲಾಗುತ್ತಿದೆ ಎಂದು ಆರೋಪಿಸಿದರು. ಬೂತ್ ಮಟ್ಟದ ಏಜೆಂಟ್‌ಗಳಿಗೆ (ಬಿಎಲ್‌ಎ) ಸಹಾಯ ಮಾಡಲು ಅವಕಾಶ ನೀಡಬೇಕು ಎಂದು ಕೋರಿದರು.
ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಕೆಲ ಪ್ರಕರಣಗಳಲ್ಲಿ ಪೋಷಕರ ಮತ್ತು ಮಕ್ಕಳ ನಡುವೆ ಕೇವಲ 15 ವರ್ಷಗಳ ವಯಸ್ಸಿನ ಅಂತರವಿದೆ ಎಂದು ವಾದಿಸಿದಾಗ, ಇಂತಹ ಅಂತರವನ್ನು ತಾರ್ಕಿಕ ಅಸಂಗತತೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾ. ಬಾಗ್ಚಿ ಅಭಿಪ್ರಾಯಪಟ್ಟರು. ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಅಂಕಿ- ಅಂಶದ ಆಧಾರದಲ್ಲಿ ಸಾಮೂಹಿಕ ಆಕ್ಷೇಪಣೆಗಳುನ್ನು ಎತ್ತಲಾಗುತ್ತಿದೆ ಎಂದು ಆರೋಪಿಸಿದರು.
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿದೆ ಎಂದು ಮತ್ತೊಬ್ಬ ಹಿರಿಯ ವಕೀಲ ಕಲ್ಯಾಣ್ ಬಂಡೋಪಾಧ್ಯಾಯ ಆಕ್ಷೇಪಿಸಿದರು. 10ನೇ ತರಗತಿ ಪ್ರಮಾಣಪತ್ರಗಳನ್ನು ಕೂಡ ಒಪ್ಪುತ್ತಿಲ್ಲ ಎಂದು ದೂರಲಾಯಿತು. ಜನರಿಗೆ ಅನುಭವಿಸುತ್ತಿರುವ ಒತ್ತಡವನ್ನು ಗಮನಿಸಿ, ಅಗತ್ಯವಿದ್ದಲ್ಲಿ ತಾನೇ ನಿರ್ದೇಶನ ನೀಡುವುದಾಗಿ ಪೀಠ ತಿಳಿಸಿತು.