New Rooms and Toilet for Nilgiris Women Lawyers' Association
New Rooms and Toilet for Nilgiris Women Lawyers' Association 
ಸುದ್ದಿಗಳು

ಬಾರ್ ಅಂಡ್ ಬೆಂಚ್ ವರದಿ ಫಲಶ್ರುತಿ: ಸುಪ್ರೀಂ ವಿಚಾರಣೆ ಬೆನ್ನಿಗೇ ನೀಲಗಿರಿ ನ್ಯಾಯಾಲಯಕ್ಕೆ ಮಹಿಳಾ ಶೌಚಾಲಯ ಸೌಲಭ್ಯ

Bar & Bench

ತಮಿಳುನಾಡಿನ ಊಟಿಯಲ್ಲಿರುವ ನೂತನ ಸಂಯೋಜಿತ ನ್ಯಾಯಾಲಯ ಸಂಕೀರ್ಣದಲ್ಲಿ ಮಹಿಳಾ ವಕೀಲರಿಗೆ ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕೊರತೆಯನ್ನು ಸುಪ್ರೀಂ ಕೋರ್ಟ್‌ ಪರಿಗಣನೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸಂಬಂಧಪಟ್ಟ ಜಿಲ್ಲಾ ನ್ಯಾಯಾಧೀಶರು ಮಹಿಳೆಯರಿಗೆ ವಿಶೇಷವಾದ ಎರಡು ಕೊಠಡಿಗಳು ಮತ್ತು ಶೌಚಾಲಯ ಕಟ್ಟಡ ಮಂಜೂರು ಮಾಡಿದ್ದಾರೆ.

ತಮ್ಮ ವಿಶೇಷ ಉಪಯೋಗಕ್ಕಾಗಿ ಇದ್ದ (ಆರಂಭದಲ್ಲಿ ಸ್ಥಾನಿಕ ವಕೀಲರ ಕೊಠಡಿಯಾಗಿಸಲು ಉದ್ದೇಶಿಸಿದ್ದ) ಕಾರಿಡಾರ್‌ಗೆ ಹೊಂದಿಕೊಂಡಿರುವ ಎರಡು ಕೊಠಡಿಗಳು ಮತ್ತು ಒಂದು ಶೌಚಾಲಯದ ಬೀಗವನ್ನು ಜಿಲ್ಲಾ ನ್ಯಾಯಾಧೀಶ ಅಬ್ದುಲ್ ಖಾದರ್ ಅವರು ವಕೀಲರ ನೀಲಗಿರಿ ಮಹಿಳಾ ವಕೀಲರ ಸಂಘಕ್ಕೆ (ಡಬ್ಲ್ಯೂಎಲ್‌ಎಎನ್‌) ಹಸ್ತಾಂತರಿಸಿದರು. ಈ ಸಂಬಂಧ ಡಬ್ಲ್ಯೂಎಲ್‌ಎಎನ್‌ ಸದಸ್ಯೆಯರು ಸುಪ್ರೀಂ ಕೋರ್ಟ್‌ಗೆ ಕೃತಜ್ಞತೆ ಅರ್ಪಿಸಿದರು.

ಇದಕ್ಕೂ ಮುನ್ನ, ಅಂದರೆ ಶುಕ್ರವಾರ ಬೆಳಗ್ಗೆ, ಮೂರು ದಶಕಗಳಿಂದ ನೀಲಗಿರಿ ನ್ಯಾಯಾಲಯ ಸಂಕೀರ್ಣದಲ್ಲಿ ಶೌಚಾಲಯಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮಹಿಳಾ ವಕೀಲರ ಸಂಕಷ್ಟದ ಕುರಿತು ʼಬಾರ್‌ ಅಂಡ್‌ ಬೆಂಚ್‌ʼ ಅಂಕಣವೊಂದರಲ್ಲಿ ಉಲ್ಲೇಖಿಸಿದ್ದನ್ನು ಸುಪ್ರೀಂ ಕೋರ್ಟ್‌ ಪ್ರಸ್ತಾಪಿಸಿತು.  

ಹೊಸ ನ್ಯಾಯಾಲಯ ಸಂಕೀರ್ಣದಲ್ಲಿ ಮಹಿಳೆಯರಿಗೆ ಇರಬೇಕಾದ ಸೌಲಭ್ಯಗಳನ್ನು ಮಿತಿಗೊಳಿಸಲಾಗಿದೆ ಎಂದು ಆರೋಪಿಸಿ ಡಬ್ಲ್ಯುಎಲ್‌ಎಎನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ವರದಿಯನ್ನು ಗಣನೆಗೆ ತೆಗೆದುಕೊಂಡಿತ್ತು.

"ಕೋರ್ಟ್ ಸಂಕೀರ್ಣದಲ್ಲಿ ಕೆಲವು ಮೂಲಸೌಕರ್ಯ ಹೊಂದಲು ಕೆಲ ಮಹಿಳಾ ವಕೀಲರು ಬೇಡಿಕೆ ಇಟ್ಟಿದ್ದು ಅವುಗಳಲ್ಲಿ ಮುಖ್ಯವಾದುದು ಹೊಸ ನ್ಯಾಯಾಲಯದ ಸಂಕೀರ್ಣದಲ್ಲಿ ಅವರಿಗೆ ಮಂಜೂರು ಮಾಡಲಾದ ಸ್ಥಳಾವಕಾಶವನ್ನು ಮಿತಿಗೊಳಿಸಿರುವುದಾಗಿದೆ. ಇದು ಆನ್‌ಲೈನ್ ವರದಿಯಲ್ಲಿ ಬಿಂಬಿತವಾಗಿದೆ" ಎಂದು ಬಾರ್‌ ಅಂಡ್‌ ಬೆಂಚ್‌ ವರದಿಯನ್ನು ನ್ಯಾಯಾಲಯ ಪ್ರಸ್ತಾಪಿಸಿತು.

ನೂತನ ಸಂಯೋಜಿತ ನ್ಯಾಯಾಲಯ ಸಂಕೀರ್ಣ ಕಟ್ಟಡದಲ್ಲಿ ಮಹಿಳಾ ವಕೀಲರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಕುರಿತು ವಿವರವಾದ ವರದಿ ನೀಡುವಂತೆ ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ ಅವರಿಗೆ ಸುಪ್ರೀಂ ಕೋರ್ಟ್‌ ತಿಳಿಸಿತ್ತು.

ಈ ಬೆಳವಣಿಗೆಯ ಬೆನ್ನಿಗೇ ಜಿಲ್ಲಾ ನ್ಯಾಯಾಧೀಶರು ಎರಡು ಕೊಠಡಿ ಹಾಗೂ ಶೌಚಾಲಯ ಮಂಜೂರು ಮಾಡಿದರು. ಆಸಕ್ತಿಕರ ಸಂಗತಿ ಎಂದರೆ ಮಧ್ಯಾಹ್ನ 2.30ರ ಸುಮಾರಿಗೆ ಹಂಚಲಾದ ಎರಡು ಕೊಠಡಿಗಳನ್ನು ಏಪ್ರಿಲ್ 30 ರಂದೇ ಮಹಿಳೆಯರಿಗೆ ʼನಿರೀಕ್ಷಣಾ ಕೊಠಡಿʼಗಳಾಗಿ ಮಂಜೂರು ಮಾಡಲಾಗಿತ್ತು. ಅಲ್ಲದೆ ಶೌಚಾಲಯ ಬಳಸಲೂ ಅವರಿಗೆ ಅವಕಾಶ ನೀಡಲಾಗಿತ್ತು.

ಆದರೂ  ಶೌಚಾಲಯದ ಅಳತೆ ಮತ್ತು ಅದರಲ್ಲಿ ಖಾಸಗಿತನಕ್ಕೆ ಆಸ್ಪದ ಇಲ್ಲದೆ ಇರುವುದಕ್ಕೆ ಮಹಿಳಾ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದರು. ನೀಲಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟಿಸ್‌ ಮಾಡುತ್ತಿರುವ 40ರಿಂದ 50 ಮಹಿಳಾ ವಕೀಲರಿಗೆ ಸ್ಥಳ ನೀಡಲು ಎರಡು ಕೊಠಡಿಗಳು ಅಸಮರ್ಪಕವಾಗಿವೆ ಎಂದು ಅವರು ಅಂದಿನ ಜಿಲ್ಲಾ ನ್ಯಾಯಾಧೀಶರಿಗೆ ತಿಳಿಸಿದ್ದರು.

ನಂತರ ಮೇ 22ರಂದು ಯಾವುದೇ ಸೂಚನೆ ನೀಡದೆ ಎರಡು ಕೊಠಡಿಗಳಿಗೆ ಬೀಗ ಹಾಕಿ ಎರಡು ಕೊಠಡಿಗಳ ಹೊರಗೆ ಸಂಘದ ನಾಮಫಲಕಕ್ಕೆ ಬಣ್ಣ ಬಳಿಯಲಾಗಿತ್ತು. ಅವರಿಗೆ ಈಗ ನೀಡಲಾಗಿರುವ ಶೌಚಾಲಯ ಎರಡು ಪ್ರತ್ಯೇಕ, ಖಾಸಗಿ ಕ್ಯುಬಿಕಲ್‌ಗಳನ್ನು ಒಳಗೊಂಡಿದೆ.

ಸಮಸ್ಯೆ ಬಗೆಹರಿಸುವಂತೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಕೂಡ ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಜೂನ್ 7 ರಂದು ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.