Kerala HC, lawyers 
ಸುದ್ದಿಗಳು

ಪೋಶ್‌ ಕಾಯಿದೆಯಡಿ ತನಿಖೆ ನಡೆಸಲು ವಕೀಲರ ಸಂಘಕ್ಕೆ ಅಧಿಕಾರ ಇಲ್ಲ: ಕೇರಳ ಹೈಕೋರ್ಟ್

ವಕೀಲರ ಸಂಘಗಗಳು ಪೋಶ್ ಕಾಯಿದೆ ಪ್ರಕಾರ ಉದ್ಯೋಗದಾತರಲ್ಲದ ಕಾರಣ ಅವುಗಳಿಗೆ ಆಂತರಿಕ ದೂರು ಸಮಿತಿ (ಐಸಿಸಿ) ರಚಿಸಿ ತನಿಖೆ ನಡೆಸುವ ಅಧಿಕಾರ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

Bar & Bench

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯಿದೆಯಡಿ ವಕೀಲರ ಸಂಘಗಳು ́ಉದ್ಯೋಗದಾತರಲ್ಲʼ. ಹೀಗಾಗಿ ವಕೀಲರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳ ತನಿಖೆ ನಡೆಸಲು ಈ ಕಾಯಿದೆಯಡಿ ಆಂತರಿಕ ದೂರು ಸಮಿತಿ ರಚಿಸುವ ಅಧಿಕಾರ ವಕೀಲರ ಸಂಘಗಗಳಿಗೆ ಇಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ [ಇ. ಶಾನವಾಸ್‌ ಖಾನ್‌ ಮತ್ತು ಕೊಲ್ಲಂ ವಕೀಲರ ಸಂಘ ಇನ್ನಿತರರ ನಡುವಣ ಪ್ರಕರಣ].

ವಕೀಲರೊಬ್ಬರು ಮತ್ತೊಬ್ಬ ವಕೀಲರ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಗಳ ತನಿಖೆಗಾಗಿ ಕೊಲ್ಲಂ ವಕೀಲರ ಸಂಘ ರಚಿಸಿದ್ದ ಆಂತರಿಕ ದೂರು ಸಮಿತಿಯನ್ನು (ಐಸಿಸಿ) ರದ್ದುಗೊಳಿಸಿದ ನ್ಯಾಯಮೂರ್ತಿ ಪಿ ಎಂ ಮನೋಜ್ ಈ ವಿಚಾರವಾಗಿ ಸ್ಪಷ್ಟಪಡಿಸಿದರು.

ವಕೀಲರ ಸಂಘದ ಸಮಿತಿಯ ತನಿಖೆ ಆಧರಿಸಿ ಅದು ತಮ್ಮನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ 76 ವರ್ಷದ ವಕೀಲರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಕೀಲರ ಸಂಘಗಗಳು ಆಂತರಿಕ ದೂರು ಸಮಿತಿ ರಚಿಸುವ ಸಂಬಂಧ ಪೋಶ್‌ ಕಾಯಿದೆಯಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದ ನ್ಯಾಯಾಲಯ ವಕೀಲರಿಗೆ ಪರಿಹಾರ ನೀಡಿತು.

ಪೋಶ್‌  ಕಾಯಿದೆಯ ಅಡಿಯಲ್ಲಿ ವಕೀಲರ ಸಂಘ ಉದ್ಯೋಗದಾತನೆಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಕಾಯಿದೆಯ ಸೆಕ್ಷನ್ 4ರ ಅಡಿ ಆಂತರಿಕ ದೂರು ಸಮಿತಿಯ ರಚನೆ ಮಾನ್ಯವಾಗುವುದಿಲ್ಲ. ಹೀಗಾಗಿ ಕೊಲ್ಲಂ ವಕೀಲರ ಸಂಘ ಐಸಿಸಿ ರಚಿಸುವುದು ಕಾಯಿದೆಯ ಕಾಯಿದೆಯ ಸೆಕ್ಷನ್ 4ರ ಆಶಯಗಳಿಗೆ ವಿರುದ್ಧವಾಗಿದೆ. ಪರಿಣಾಮ ಐಸಿಸಿ ಸಲ್ಲಿಸಿದ ವರದಿಗೆ ಕಾನೂನು ಮಾನ್ಯತೆ ಇಲ್ಲದಿರುವುದರಿದ ಅದನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.

ದಾಖಲೆ ನೋಟರಿ ಮಾಡಿಸುವಾಗ ವಕೀಲ ಶಾನವಾಜ್‌ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಕೀಲೆಯೊಬ್ಬರು ದೂರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದರು. ನಂತರ ಕೊಲ್ಲಂ ವಕೀಲರ ಸಂಘ ಆಂತರಿಕ ದೂರು ಸಮಿತಿ ರಚಿಸಿತ್ತು. ಆರೋಪ ಸಾಬೀತಾದ ವರದಿಯನ್ನು ಸಮಿತಿ ನೀಡಿದ ಹಿನ್ನೆಲೆಯಲ್ಲಿ ಶಾನವಾಜ್‌ ಅವರನ್ನು ವಕೀಲರ ಸದಸ್ಯತ್ವದಿಂದ ಅಮಾನತುಗೊಳಿತ್ತು.

ವಿಚಾರಣೆ ವೇಳೆ ಪೋಶ್‌ ಕಾಯಿದೆಯ ಪ್ರಮುಖ ಸೆಕ್ಷನ್‌ಗಳನ್ನು ಅವಲೋಕಿಸಿದ ನ್ಯಾಯಾಲಯ ಕಾನೂನುಬದ್ಧವಾಗಿ ರಚಿಸಲಾದ ಆಂತರಿಕ ದೂರು ಸಮಿತಿಯಷ್ಟೇ ತನಿಖೆ ನಡೆಸಬಹುದು. ಸಂಘಕ್ಕೆ ಅಂತಹ ಸಮಿತಿ ರಚಿಸುವ ಅಧಿಕಾರ ಇಲ್ಲ ಎಂದು  ತಿಳಿಸಿ ಐಸಿಸಿ ವರದಿ ರದ್ದುಪಡಿಸಿತು.

ಆದರೆ, ಲೈಂಗಿಕ ಕಿರುಕುಳ ಆರೋಪದ ವಾಸ್ತವಾಂಶಗಳು ಮತ್ತು ಅದರ ತಾತ್ತ್ವಿಕ ಅಂಶಗಳ ಕುರಿತು ಅದು ಅಂತಿಮ ತೀರ್ಪು ನೀಡಿಲ್ಲ. ಈ ವಿಚಾರವನ್ನು ಮುಕ್ತವಾಗಿ ಇಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಪಪಡಿಸಿದೆ.

[ತೀರ್ಪಿನ ಪ್ರತಿ]

E_Shanavas_Khan_v_The_Kollam_Bar_Association___ors.pdf
Preview