Bar Council of India 
ಸುದ್ದಿಗಳು

[ಕೋವಿಡ್ -19] ಭೌತಿಕ ಪರೀಕ್ಷೆ ನಡೆಸಲು ಕಾನೂನು ಕಾಲೇಜುಗಳಿಗೆ ಅನುವು ಮಾಡಿಕೊಟ್ಟ ಬಿಸಿಐ

ಸಾಂಕ್ರಾಮಿಕ ರೋಗ ಹರಡುತ್ತಲೇ ಇರುವುದರಿಂದಾಗಿ ಎಲ್ಲಾ ಇಂಟರ್‌ಮೀಡಿಯರಿ ಮತ್ತು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಬಹುದು ಎಂದು ಕೂಡ ಬಿಸಿಐ ಹೇಳಿದೆ.

Bar & Bench

ರಾಜ್ಯ ಸರ್ಕಾರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದ ಕಾನೂನು ಕಾಲೇಜುಗಳಿಗೆ ಭೌತಿಕ ಪರೀಕ್ಷೆ ನಡೆಸಲು ಅವಕಾಶವನ್ನು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮಾಡಿಕೊಟ್ಟಿದೆ. ಈ ಸಂಬಂಧ ತನ್ನ ಈ ಹಿಂದಿನ ನಿರ್ಧಾರದಲ್ಲಿ ಕೊಂಚ ಮಾರ್ಪಾಡನ್ನು ಮಾಡಿದೆ.

".. ಕೋವಿಡ್ -19 ಸಾಂಕ್ರಾಮಿಕ ರೋಗವು ನಿವಾರಣೆಯಾಗುವವರೆಗೂ ಅಂತಹ ಭೌತಿಕ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ ಅಥವಾ ಇಷ್ಟವಿಲ್ಲದ ವಿದ್ಯಾರ್ಥಿಗಳು, ಮತ್ತು ಪರೀಕ್ಷೆಯಲ್ಲಿ ಭಾಗಿಯಾದ ಬಳಿಕವೂ ತೇರ್ಗಡೆ ಹೊಂದಲಾಗದವರು, ಕಾನೂನು ಶಿಕ್ಷಣ ವಿಶ್ವವಿದ್ಯಾಲಯಗಳು / ಕಾನೂನು ಶಿಕ್ಷಣ ಕೇಂದ್ರಗಳು ಭೌತಿಕವಾಗಿ ಮತ್ತೆ ಆರಂಭವಾದ ಬಳಿಕ ಮರುಪರೀಕ್ಷೆ ಬರೆಯಬಹುದುʼ ಎಂದೂ ಸಹ ಬಿಸಿಐ ನಿರ್ಧಾರ ತೆಗೆದುಕೊಂಡಿದೆ.

ಅಲ್ಲದೆ, ಸಾಂಕ್ರಾಮಿಕ ರೋಗ ಹರಡುತ್ತಲೇ ಇರುವುದರಿಂದಾಗಿ ಎಲ್ಲಾ ಇಂಟರ್‌ಮೀಡಿಯರಿ ಮತ್ತು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಬಹುದು ಎಂದು ಕೂಡ ಬಿಸಿಐ ಹೇಳಿದೆ. ಈಗಾಗಲೇ ಆನ್‌ಲೈನ್ ಪರೀಕ್ಷೆ ನಡೆಸಿದ್ದರೆ ಮತ್ತು ಯಾವುದೇ ವಿದ್ಯಾರ್ಥಿ ಆ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಅಥವಾ ಅಂತಹ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿ ವಿಶ್ವವಿದ್ಯಾಲಯಗಳು / ಕಾಲೇಜು ಭೌತಿಕವಾಗಿ ತೆರೆದ ನಂತರದ ಒಂದು ತಿಂಗಳೊಳಗೆ ನಡೆಯುವ ಮರುಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದೂ ಬಿಸಿಐ ಸ್ಪಷ್ಟಪಡಿಸಿದೆ.

ಮುಂದಿನ ವರ್ಷಕ್ಕೆ / ಸೆಮಿಸ್ಟರ್‌ಗೆ ಬಡ್ತಿ ಪಡೆದ ವಿದ್ಯಾರ್ಥಿಗಳು ಯಾವುದೇ ಆಫ್‌ಲೈನ್ / ಆನ್‌ಲೈನ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಅಥವಾ ಉತ್ತೀರ್ಣರಾಗಲು ಸಾಧ್ಯವಾಗದಿದ್ದರೆ, ಯಾವುದೇ ದಂಡ ಅಥವಾ ಪೂರ್ವಾಗ್ರಹವಿಲ್ಲದೆ ಕಾನೂನು ಪದವಿ ನೀಡುವುದಕ್ಕೂ ಮುನ್ನ ಅಂತಹ ಪತ್ರಿಕೆಗಳಲ್ಲಿ ಉತ್ತೀರ್ಣರಾಗಲು ಸಹ ಅವಕಾಶ ಒದಗಿಸಲಾಗುತ್ತದೆ. ಭೌತಿಕ ಪರೀಕ್ಷೆ ಮುಂದೂಡುವ ಹಕ್ಕನ್ನು ಆಯಾ ರಾಜ್ಯಗಳ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸುಪ್ರೀಂಕೋರ್ಟ್‌ ನೀಡಿದ್ದನ್ನು ಗಮನದಲ್ಲಿಟ್ಟುಕೊಂಡು ಬಿಸಿಐ ಈ ನಿರ್ಧಾರ ಕೈಗೊಂಡಿದೆ.