Social Media  
ಸುದ್ದಿಗಳು

ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತು: ನ್ಯಾಯವಾದಿಯೊಬ್ಬರಿಗೆ ಕೇರಳ ವಕೀಲರ ಪರಿಷತ್ ಶೋಕಾಸ್ ನೋಟಿಸ್

ವಕೀಲರು ವಿಡಿಯೋ ಮಾಡಿರುವುದನ್ನು ನಿರಾಕರಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅವರೊಂದಿಗೆ ಸಹಕರಿಸಲು ಬಯಸಿದ ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕೃತ್ಯ ಎಸಗಿದೆ ಎಂದು ಹೇಳಿದ್ದಾರೆ.

Bar & Bench

ಪ್ರಚಾರಾತ್ಮಕ ವಿಡಿಯೋ ಮೂಲಕ ತನ್ನ ಕಾನೂನು ಸೇವೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚುರಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಹ್ಯಾಪಿಮೊನ್ ಬಾಬು ಅವರಿಗೆ ಕೇರಳ ವಕೀಲರ ಪರಿಷತ್‌ (ಬಿಸಿಕೆ) ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಭಾರತೀಯ ವಕೀಲರ ಪರಿಷತ್‌ (ಬಿಸಿಐ) ನಿಯಮಗಳು ಮತ್ತು ವಕೀಲರ ಕಾಯಿದೆ 196ಅನ್ನು ಉಲ್ಲಂಘಿಸಿರುವ, ವಕೀಲ ಬಾಬು ಅವರು ಯಾವುದೇ ರೀತಿಯ ಆನ್‌ಲೈನ್ ಪ್ರಚಾರ ಮಾಡಿದರೆ ಅದು ವೃತ್ತಿಪರ ನೀತಿ ಮತ್ತು ಸಭ್ಯತೆಯ ಉಲ್ಲಂಘನೆಯಾಗುತ್ತದೆ ಎಂದು ಬಿಸಿಐ ಇತ್ತೀಚೆಗೆ ಹೊರಡಿಸಿದ ನಿರ್ದೇಶನಗಳನ್ನೂ ಉಲ್ಲಂಘಿಸಿದ್ದಾರೆ ಎಂದು ಬಿಸಿಐ ಹೊರಡಿಸಿರುವ ನೋಟಿಸ್‌ ಹೇಳಿದೆ.

ಆರೋಪಗಳಿಗೆ ಪ್ರತಿಕ್ರಿಯಿಸಬೇಕು, ತಮ್ಮ ವಿರುದ್ಧ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳಬಾರದು ಎಂಬುದಕ್ಕೆ ಕಾರಣ ನೀಡಬೇಕು. ಈ ಸಂಬಂಧ, 15 ದಿನಗಳಲ್ಲಿ ಲಿಖಿತ ವಿವರಣೆ ಸಲ್ಲಿಸಬೇಕು ಎಂದು ಬಾಬು ಅವರಿಗೆ ಸೂಚಿಸಲಾಗಿದೆ.

ವೈವಾಹಿಕ ಪ್ರಕರಣ, ಆಸ್ತಿ ವಿವಾದ, ಕ್ರಿಮಿನಲ್ ಪ್ರಕರಣ ಇತ್ಯಾದಿಗಳಲ್ಲಿ ಸಿಲುಕಿರುವವರು ಹ್ಯಾಪಿಮೊನ್ ಬಾಬು ಅವರಿಂದ ಕಾನೂನು ಸಲಹೆ ಪಡೆಯಬಹುದು ಎಂದು ಮಹಿಳೆಯೊಬ್ಬರು ಸಲಹೆ ನೀಡುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕಾಣಬಹುದು.

ಆದರೆ ಬಾರ್‌ ಅಂಡ್‌ ಬೆಂಚ್‌ ಜಾಲತಾಣದ ಇಂಗ್ಲಿಷ್‌ ಆವೃತ್ತಿಯೊಂದಿಗೆ ಮಾತನಾಡಿರುವ ವಕೀಲ ಬಾಬು ಅವರು ವಿಡಿಯೋ ಮಾಡಿರುವುದನ್ನು ನಿರಾಕರಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅವರೊಂದಿಗೆ ಸಹಕರಿಸಲು ಬಯಸಿದ ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದು  ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕೃತ್ಯ ಎಸಗಿದೆ ಎಂದು ಹೇಳಿದ್ದಾರೆ.

ತಾನು ತಕ್ಷಣವೇ ವಿಡಿಯೋ ತೆಗೆದುಹಾಕುವಂತೆ ಸಾರ್ವಜನಿಕ ಸಂಪರ್ಕ ಸಂಸ್ಥೆಗೆ ಕೇಳಿಕೊಂಡೆ. ಆದರೆ ಆ ಹೊತ್ತಿಗೆ ಅದನ್ನು ಡೌನ್‌ಲೋಡ್ ಮಾಡಿ ವಾಟ್ಸಾಪ್‌ನ ವಕೀಲರ ಗುಂಪುಗಳಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಈ ವರ್ಷ ಎರ್ನಾಕುಲಂ ವಕೀಲರ ಸಂಘದ ​​ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ್ದು, ವಿಡಿಯೋ ಹರಡಲು ಕಾರಣವಾಗಿರಬಹುದು ಎಂದು ಬಾಬು ಹೇಳಿದರು.ಈ ವಿಡಿಯೋವನ್ನು ಯಾರೋ ದುರುದ್ದೇಶಪೂರ್ವಕವಾಗಿ ಹರಿಬಿಟ್ಟಿರಬಹುದು ಎಂಬುುದನ್ನು ಬಾಬು ತಳ್ಳಿಹಾಕಿಲ್ಲ.

ವೃತ್ತಿಪರ ನೈತಿಕತೆ ಮೀರುವ ವಕೀಲರಿಗೆ ಭಾರತೀಯ ವಕೀಲರ ಪರಿಷತ್‌, ಕೇರಳ ವಕೀಲರ ಪರಿಷತ್‌ ಹಾಗೂ ದೆಹಲಿ ವಕೀಲರ ಪರಿಷತ್‌ಗಳು ಈ ವರ್ಷ ಬೇರೆ ಬೇರೆ ಸಂದರ್ಭಗಳಲ್ಲಿ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.