
ನಾಳೆಯಿಂದ (ಸೋಮವಾರ) ಆರಂಭಿಸಲು ಹೊರಟಿರುವ ಮುಷ್ಕರ ಸ್ಥಗಿತಗೊಳಿಸುವಂತೆ ಭಾರತೀಯ ವಕೀಲರು ಮಾಡಿದ್ದ ಮನವಿಯನ್ನು ದೆಹಲಿಯ ವಿಚಾರಣಾ ನ್ಯಾಯಾಲಯದಲ್ಲಿ ಅಭ್ಯಾಸ ಮಾಡುತ್ತಿರುವ ವಕೀಲರು ತಿರಸ್ಕರಿಸಿದ್ದು ತಮ್ಮ ಹೋರಾಟ ಯೋಜಿಸಿದಂತೆಯೇ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸಾಕ್ಷ್ಯ ಸಂಗ್ರಹ ಇಲ್ಲವೇ ಸಾಕ್ಷಿಗಾಗಿ ನ್ಯಾಯಾಲಯಗಳಲ್ಲಿ ಖುದ್ದು ಹಾಜರಾಗಬೇಕು ಎಂಬ ತಮ್ಮ ಬೇಡಿಕೆಗೆ ಬದ್ಧರಾಗಿದ್ದೇವೆ ಎಂದು ದೆಹಲಿಯ ಅಖಿಲ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಸಮನ್ವಯ ಸಮಿತಿ ಶನಿವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 8ರಿಂದ ಅನಿರ್ದಿಷ್ಟಾವಧಿ ಮುಷ್ಕರ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಸಂಘಟನೆ ತಿಳಿಸಿದೆ.
"ನ್ಯಾಯಯುತ ಮತ್ತು ಮುಕ್ತ ವಿಚಾರಣೆಯ ಉದ್ದೇಶಕ್ಕಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಎಲ್ಲಾ ಪೊಲೀಸ್ ಅಧಿಕಾರಿಗಳು ಸಾಕ್ಷ್ಯ ನುಡಿಯಲು ನ್ಯಾಯಾಲಯದ ಮುಂದೆ ಭೌತಿಕವಾಗಿ ಹಾಜರಾಗಬೇಕು ಎಂಬ ನಮ್ಮ ಬೇಡಿಕೆಯನ್ನು ಒಪ್ಪದಿದ್ದರೆ, 08.09.2025ರಿಂದ ಕೆಲಸದಿಂದ ಅನಿರ್ದಿಷ್ಟಾವಧಿಗೆ ಗೈರುಹಾಜರಾಗುವ ನಮ್ಮ ನಿರ್ಧಾರ ಮುಂದುವರೆಸಲಿದ್ದು ಅದನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ವಕೀಲರ ಸಂಘಕ್ಕೆ ಪತ್ರ ಬರೆದಿದ್ದ ಬಿಸಿಐ ಅನಿರ್ದಿಷ್ಟಾವಧಿ ಮುಷ್ಕರ ಮುಂದೂಡಬೇಕು ಇಲ್ಲವೇ ಹಿಂಪಡೆಯಬೇಕು. ಜೊತೆಗೆ ಸೆಪ್ಟೆಂಬರ್ 8ರಂದು ನಡೆಯಲಿರುವ ಬಿಸಿಐ ಮತ್ತು ದೆಹಲಿ ವಕೀಲರ ಪರಿಷತ್ ಜಂಟಿ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿತ್ತು.
ಸೆಪ್ಟೆಂಬರ್ 4ರಂದು ದೆಹಲಿ ಪೊಲೀಸ್ ಆಯುಕ್ತರು ಹೊರಡಿಸಿದ ಹೊಸ ಅಧಿಸೂಚನೆ ಪ್ರಕಾರ ಔಪಚಾರಿಕ ಪೊಲೀಸ್ ಸಾಕ್ಷಿಗಳನ್ನು ಮಾತ್ರ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಬಹುದೇ ವಿನಾ ವಾಸ್ತವಾಂಶ ಪೊಲೀಸ್ ಸಾಕ್ಷಿಗಳು ಖುದ್ದಾಗಿ ಹಾಜರಾಗಬೇಕು ಎನ್ನುತ್ತದೆ ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಪ್ರತಿಪಾದಿಸಿದ್ದರು.
ಪೊಲೀಸ್ ಸಾಕ್ಷಿಗಳು ಪದೇ ಪದೇ ಗೈರು ಹಾಜರಾಗುವುದರಿಂದ ವಿಚಾರಣಾಧೀನ ಕೈದಿಗಳು, ಅಪರಾಧದ ಸಂತ್ರಸ್ತರು ಸೇರಿದಂತೆ ದಾವೆ ಹೂಡುವವರು, ವಕೀಲರಿಗೆ ತೀವ್ರ ತೊಂದರೆಯಾಗುತ್ತದೆ ಎಂದಿದ್ದರು. ಆಗಸ್ಟ್ 13 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಆಗಸ್ಟ್ 22 ರಿಂದ ಆಗಸ್ಟ್ 28 ರವರೆಗೆ ವಕೀಲರು ಕೆಲಸಕ್ಕೆ ಗೈರುಹಾಜರಾಗಿದ್ದರು.
ದೆಹಲಿ ಪೊಲೀಸರು ಅಧಿಸೂಚನೆ ಹಿಂತೆಗೆದುಕೊಂಡ ನಂತರ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪ್ರತಿಭಟನಾ ನಿರತ ವಕೀಲರನ್ನು ಭೇಟಿ ಮಾಡಲು ಒಪ್ಪಿಕೊಂಡ ನಂತರ ಮುಷ್ಕರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಸೆಪ್ಟೆಂಬರ್ 4 ರಂದು, ದೆಹಲಿ ಪೊಲೀಸರು ಮತ್ತೊಮ್ಮೆ ನೋಟಿಸ್ ಜಾರಿ ಮಾಡಿ, ಔಪಚಾರಿಕ ಪೊಲೀಸ್ ಸಾಕ್ಷಿಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಒಳಪಡಿಸಲು ಅವಕಾಶ ಮಾಡಿಕೊಟ್ಟಿದ್ದರು.