High Court of Karnataka
High Court of Karnataka 
ಸುದ್ದಿಗಳು

ಭೌತಿಕ ಕಲಾಪ ಆರಂಭಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲು ಮುಂದಾದ ವಕೀಲರ ಪರಿಷತ್ತು

Bar & Bench

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಭೌತಿಕ ನ್ಯಾಯಾಲಯದ ಕಾರ್ಯ-ಕಲಾಪಗಳನ್ನು ಒಂದು ವಾರದಲ್ಲಿ ಪುನಾರಂಭಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲು ರಾಜ್ಯ ವಕೀಲರ ಪರಿಷತ್ತು ಭಾನುವಾರ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ರಾಜ್ಯದ ವಕೀಲರ ಸಮುದಾಯವು ಕೋವಿಡ್ ಹಾಗೂ ಲೌಕ್‌ಡೌನ್‌ನಿಂದ ಸಾಕಷ್ಟು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಭೌತಿಕ ಕಲಾಪ ಆರಂಭಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರಿಗೆ ಮನವಿ ಮಾಡುವಂತೆ ರಾಜ್ಯಾದ್ಯಂತ ಇರುವ ವಕೀಲರ ಸಮುದಾಯ ಪರಿಷತ್ತನ್ನು ಆಗ್ರಹಿಸಿದೆ ಎಂದು ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದಲ್ಲಿ ಭೌತಿಕ ಕಲಾಪ ನಡೆಯದಿರುವುದರಿಂದ ಕಕ್ಷಿದಾರರಿಗೂ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ವಕೀಲರ ಭಾವನೆಗಳನ್ನು ಪರಿಗಣಿಸಿ ರಾಜ್ಯ ವಕೀಲರ ಪರಿಷತ್ತು ಭಾನುವಾರ ಸರ್ವಾನುಮತದ ನಿಲುವಳಿಯನ್ನು ಅಂಗೀಕರಿಸಿದ್ದು, ಒಂದು ವಾರದಲ್ಲಿ ನ್ಯಾಯಾಲಯದಲ್ಲಿ ಭೌತಿಕ ಕಾರ್ಯಕಲಾಪಗಳನ್ನು ಆರಂಭಿಸುವಂತೆ ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ಕೆಎಸ್‌ಬಿಸಿ ಮಾಧ್ಯಮ ಹೇಳಿಕೆ
“ಭೌತಿಕ ಫೈಲಿಂಗ್, ಭೌತಿಕ ನ್ಯಾಯಾಲಯದ ಕಲಾಪ ಹಾಗೂ ವಕೀಲರ ವಾಹನಗಳ ಪಾರ್ಕಿಂಗ್, ಜೆರಾಕ್ಸ್, ಶೀಘ್ರ ಲಿಪಿಗಾರರು, ಕ್ಯಾಂಟೀನ್ ವ್ಯವಸ್ಥೆ, ಭೌತಿಕವಾಗಿ ವಕೀಲರ ಸಂಘದ ಚಟುವಟಿಕೆಗಳನ್ನು ನಡೆಸಲು ಹಾಗೂ ಕಕ್ಷಿದಾರರ ಪರ ಸಾಕ್ಷ್ಯ ನುಡಿಯಲು ಸಾಕ್ಷಿಗಳು ನ್ಯಾಯಾಲಯಕ್ಕೆ ಬರಲು ಅವಕಾಶ ಕಲ್ಪಿಸಬೇಕು,” ಎಂದು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ ಎಂ ಅನಿಲ್ ಕುಮಾರ್ ಅವರು ಮುಖ್ಯ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಲು ನಿರ್ಧರಿಸಿರುವುದನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಕೊರೊನಾದಿಂದ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದಾಗಲೂ ರಾಜ್ಯ ಹೈಕೋರ್ಟ್ ವರ್ಚುವಲ್ ಕಲಾಪ ನಡೆಸುವ ಮೂಲಕ ಮಾದರಿಯಾದ ನಡೆ ಇಟ್ಟಿದೆ. ಲಾಕ್‌ಡೌನ್ ಸಂದರ್ಭದಲ್ಲೂ ಕಲಾಪ ನಡೆಸುತ್ತಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎನ್ನುವ ಹೆಮ್ಮೆಯಿದೆ” ಎಂದು ಪರಿಷತ್ತು ಪ್ರಕಟಣೆಯಲ್ಲಿ ಹೈಕೋರ್ಟಿನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.