ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ಹೆಚ್ಚಿಸಲು ಭಾರತೀಯ ವಕೀಲರ ಪರಿಷತ್ತು (ಬಿಸಿಐ), ವಿವಿಧ ರಾಜ್ಯಗಳ ವಕೀಲರ ಪರಿಷತ್ತುಗಳು ಹಾಗೂ ಹೈಕೋರ್ಟ್ ಸಂಘಗಳು ಇತ್ತೀಚೆಗೆ ಜಂಟಿ ನಿರ್ಣಯ ಅಂಗೀಕರಿಸಿವೆ.
ಕಳೆದ ವಾರ ನಡೆದ ಜಂಟಿ ಸಭೆ ಈ ವಿಷಯವನ್ನು ಕೂಲಂಕಷವಾಗಿ ಪರಿಗಣಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 67 ವರ್ಷಕ್ಕೆ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಏರಿಸಲು ನಿರ್ಣಯ ಕೈಗೊಂಡಿದೆ ಎಂದು ಬಿಸಿಐ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.
“ಸಂವಿಧಾನಕ್ಕೆ ತಕ್ಷಣ ತಿದ್ದುಪಡಿ ತಂದು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಾನವನ್ನು 62ರಿಂದ 65 ವರ್ಷಕ್ಕೆ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 67 ವರ್ಷಕ್ಕೆ ಹೆಚ್ಚಿಸಬೇಕು ಎಂದು ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು” ಎಂದು ಪ್ರಕಟಣೆ ವಿವರಿಸಿದೆ.
ಅನುಭವಿ ವಕೀಲರನ್ನು ಸಹ ವಿವಿಧ ಆಯೋಗಗಳು ಮತ್ತು ವೇದಿಕೆಗಳ ಅಧ್ಯಕ್ಷರನ್ನಾಗಿ ನೇಮಿಸಲು ವಿವಿಧ ವಿಧಿಗಳನ್ನು ತಿದ್ದುಪಡಿ ಮಾಡುವಂತೆ ಸಂಸತ್ತಿಗೆ ಪ್ರಸ್ತಾಪಿಸಲು ಜಂಟಿ ಸಭೆ ನಿರ್ಧರಿಸಿತು.
ಈ ಕುರಿತಂತೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಪ್ರಧಾನಿ ಹಾಗೂ ಕೇಂದ್ರ ಕಾನೂನು ಸಚಿವರಿಗೆ ಸಭೆಯ ನಿರ್ಣಯವನ್ನು ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಸಹ ಪ್ರಕಟಣೆ ತಿಳಿಸಿದೆ.