ಸುಪ್ರೀಂ ಕೋರ್ಟ್ ವಿರುದ್ಧ ವಕೀಲ ಪ್ರಶಾಂತ್ ಭೂಷಣ್ ನೀಡಿದ್ದ ಹೇಳಿಕೆಗೆ ಬಿಸಿಐ ತೀವ್ರ ಖಂಡನೆ

ಭೂಷಣ್ ಅವರ ಹೇಳಿಕೆಗಳು ಹಾಸ್ಯಾಸ್ಪದ ಮಾತ್ರವಲ್ಲ, ಖಂಡನೀಯ ಅಲ್ಲದೆ ಅವು ರಾಷ್ಟ್ರದ ವಿರುದ್ಧದ ಟೀಕೆಗಳಾಗಿವೆ ಎಂದು ಬಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Advocate Prashant Bhushan
Advocate Prashant Bhushan
Published on

ಸುಪ್ರೀಂ ಕೋರ್ಟ್‌ ವಿರುದ್ಧ ವಕೀಲ ಪ್ರಶಾಂತ್‌ ಭೂಷಣ್‌ ಅವರು ಮಾಡಿದ ಟೀಕೆಗಳನ್ನು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ತೀವ್ರವಾಗಿ ಖಂಡಿಸಿದೆ. ಚೀನಾ ರಷ್ಯಾದಂತಹ ದೇಶಗಳಲ್ಲಿ ಭೂಷಣ್‌ ಅವರ ರೀತಿಯ ವ್ಯಕ್ತಿಗಳ ಅಸ್ತಿತ್ವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಅದು ಜರೆದಿದೆ.

ಝಾಕಿಯಾ ಜಾಫ್ರಿ, ಹಿಮಾಂಶು ಕುಮಾರ್ ಪ್ರಕರಣಗಳು ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ದೇಶದ ನಾಗರಿಕ ಸ್ವಾತಂತ್ರ್ಯ ಮತ್ತು ಜನರ ಮೂಲಭೂತ ಹಕ್ಕುಗಳ ರಕ್ಷಕನ ಪಾತ್ರವನ್ನು ಸುಪ್ರೀಂ ಕೋರ್ಟ್‌ ವಾಸ್ತವಿಕವಾಗಿ ತ್ಯಜಿಸಿದೆ ಎಂದು ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ (ಐಎಎಂಸಿ) ಆಗಸ್ಟ್ 10ರಂದು ಆಯೋಜಿಸಿದ್ದ ವೆಬಿನಾರ್‌ನಲ್ಲಿ ಪ್ರಶಾಂತ್‌ ಭೂಷಣ್‌ ಟೀಕಿಸಿದ್ದರು.

ಸುಪ್ರೀಂ ಕೋರ್ಟ್‌ ತೀರ್ಪುಗಳು ಅತ್ಯಂತ ನೋವುಂಟುಮಾಡಿವೆ. ಇದು ಸರ್ವೋಚ್ಚ ನ್ಯಾಯಾಲಯದ ಆಕ್ರಮಣ ಅಥವಾ ಅದರ ಕರ್ತವ್ಯದಿಂದ ವಿಮುಖತೆಯನ್ನು ಬೇರೊಂದು ಮಜಲಿಗೆ ಕೊಂಡೊಯ್ಯಲಿದ್ದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಕ್ಕಾಗಿ ವ್ಯಕ್ತಿಗೆ ದಂಡ ವಿಧಿಸಲಾಗುತ್ತಿದೆ. ಹಿಮಾಂಶು ಕುಮಾರ್‌ ಪ್ರಕರಣದಲ್ಲಿ ಇದನ್ನೇ ಮಾಡಲಾಯಿತು. ಸುಪ್ರೀಂ ಕೋರ್ಟ್‌ ತೀರ್ಪು ನಿಜಕ್ಕೂ ವಿಲಕ್ಷಣದಿಂದ ಕೂಡಿದೆ ಎಂದು ಅವರು ಹೇಳಿದ್ದರು.

ಅಲ್ಲದೆ ಭಾಷಣದ ವೇಳೆ ಭೂಷಣ್‌ ಅವರು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರನ್ನು ಟೀಕಿಸಿದ್ದರು. ತಮ್ಮ ನಿವೃತ್ತಿಗೂ ಮೊದಲು ಅಯೋಧ್ಯೆ ಮತ್ತು ರಫೇಲ್‌ ಪ್ರಕರಣಗಳಲ್ಲಿ ತೀರ್ಪು ನೀಡಿದ ನ್ಯಾ. ಗೊಗೊಯ್‌ ಅವರು ಬಳಿಕ ರಾಜ್ಯಸಭಾ ಸದಸ್ಯರಾದರು ಎಂದಿದ್ದರು.

Also Read
ಪ್ರಧಾನಿ ಮೋದಿ, ಶಾ ನೇತೃತ್ವದಲ್ಲಿ ಭಾರತ ಸಂಪೂರ್ಣ ಸುರಕ್ಷಿತ: ಚುನಾವಣಾ ಫಲಿತಾಂಶ ಕುರಿತು ಅಭಿನಂದಿಸಿದ ಬಿಸಿಐ ಅಧ್ಯಕ್ಷ

ಇದಲ್ಲದೆ ಭೂಷಣ್‌ ಅವರು ಮತ್ತೊಬ್ಬ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರನ್ನು ಕೂಡ ಖಂಡಿಸಿದ್ದರು. ನಿವೃತ್ತರಾದ ಕೂಡಲೇ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡರು. ನಿಯಮ ಉಲ್ಲಂಘಿಸಿ 9 ತಿಂಗಳ ಕಾಲ ಅಧಿಕೃತ ಬಂಗಲೆಯಲ್ಲಿ ವಾಸವಿದ್ದರು ಎಂದು ಭೂಷಣ್‌ ಆರೋಪಿಸಿದ್ದರು. ಅಲ್ಲದೆ ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸಿಂಧುತ್ವ ಎತ್ತಿ ಹಿಡಿದಿದ್ದ ಮತ್ತು ಝಾಕಿಯಾ ಜಾಫ್ರಿ (ಗುಜರಾತ್‌ ಗಲಭೆಗೆ ಸಂಬಂಧಿಸಿದ ಪ್ರಕರಣ), ಹಿಮಾಂಶು ಕುಮಾರ್ (ಛತ್ತೀಸ್‌ಗಢದಲ್ಲಿ ನಕ್ಸಲ್‌ ದಮನ ಕಾರ್ಯಾಚರಣೆ ಹೆಸರಿನಲ್ಲಿ ಕಾನೂನು ಗಾಳಿಗೆ ತೂರಿ ಬುಡಕಟ್ಟು ಜನರನ್ನು ಕೊಂದಿದ್ದಾರೆ ಎಂದು ಆಪಾದಿಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದ ಪ್ರಕರಣ) ತೀರ್ಪು ನೀಡಿ ಇತ್ತೀಚೆಗೆ ನಿವೃತ್ತರಾದ ನ್ಯಾ. ಎ ಎಂ ಖಾನ್ವಿಲ್ಕರ್‌ ಅವರನ್ನೂ ಭೂಷಣ್‌ ಟೀಕಿಸಿದ್ದರು.

ಭೂಷಣ್ ಅವರ ಹೇಳಿಕೆಗಳು ಹಾಸ್ಯಾಸ್ಪದ ಮಾತ್ರವಲ್ಲ, ಖಂಡನೀಯ. ಜೊತೆಗೆ ಅವು ರಾಷ್ಟ್ರದ ವಿರುದ್ಧದ ಟೀಕೆಗಳಾಗಿವೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಬಿಸಿಐ ತಿಳಿಸಿದೆ.

ಭೂಷಣ್‌ ಅವರ ರೀತಿಯ ಜನ ಎಂದಿಗೂ ನಾಗರಿಕ ಸ್ವಾತಂತ್ರ್ಯದ ಚಾಂಪಿಯನ್‌ಗಳಲ್ಲ. ಬದಲಿಗೆ ಇಂತಹ ಅಸಂಬದ್ಧ ಕಾರ್ಯಗಳಿಂದ ಅವರು ಭಾರತ ದ್ರೋಹಿಗಳು ಎಂಬ ಸಂದೇಶವನ್ನು ಜಗತ್ತಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವಾಸ್ತವವಾಗಿ ಅಂತಹ ಜನ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಚೀನಾ ಮತ್ತು ರಷ್ಯಾದಂತಹ ದೇಶಗಳಲ್ಲಿ ಪ್ರಶಾಂತ್‌ ರೀತಿಯ ವ್ಯಕ್ತಿಗಳ ಅಸ್ತಿತ್ವವನ್ನು ಊಹಿಸಲೂ ಸಾಧ್ಯವಿಲ್ಲ" ಎಂದು ಬಿಸಿಐ ಹೇಳಿದೆ.

"ಭಾರತದ ಸುಪ್ರೀಂ ಕೋರ್ಟ್, ಅದರ ನ್ಯಾಯಮೂರ್ತಿಗಳು ಅಥವಾ ನ್ಯಾಯಾಂಗವನ್ನು ಅಪಹಾಸ್ಯ ಮಾಡುವ ಅಧಿಕಾರ ಯಾರಿಗೂ ಇಲ್ಲ. ನೀವು ಭಾರತದ ಪ್ರಜೆಯಾಗಿ, ಅದಕ್ಕಿಂತಲೂ ಮಿಗಿಲಾಗಿ ವಕೀಲರಾಗಿರುವವರೆಗೆ ವ್ಯವಸ್ಥೆಯನ್ನು ಅಪಹಾಸ್ಯ ಮಾಡಲು ಸಾಧ್ಯವಿಲ್ಲ, ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿರಿ. ನೀವು ಯಾರನ್ನಾದರೂ ಟೀಕಿಸಬಹುದು, ಆದರೆ ಲಕ್ಷ್ಮಣ ರೇಖೆ ಮೀರುವಂತಿಲ್ಲ. ನಾಲಗೆ ಮೇಲೆ ಸದಾ ಹಿಡಿತವಿರಲಿ. ವಕೀಲಿಕೆಗೆ ನೀಡಲಾದ ಪರವಾನಗಿ ನ್ಯಾಯವಾದಿಗಳಾಗಿ ನಿಮ್ಮ ಸ್ಥಾನ ದುರುಪಯೋಗಪಡಿಸಿಕೊಳ್ಳಲು ನಿಮಗೆ ಅಧಿಕಾರ ನೀಡುವುದಿಲ್ಲ" ಎಂದು ಬಿಸಿಐ ಎಚ್ಚರಿಸಿದೆ.

Kannada Bar & Bench
kannada.barandbench.com