BBMP 
ಸುದ್ದಿಗಳು

ಬಿಬಿಎಂಪಿ ಚುನಾವಣೆ: ಮೀಸಲಾತಿ ನಿಗದಿಪಡಿಸಲು ಮೂರು ತಿಂಗಳ ಕಾಲಾವಕಾಶ ಕೋರಿ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಸರ್ಕಾರ

ಬಿಬಿಎಂಪಿಯ 243 ವಾರ್ಡ್‌ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು ಸೆಪ್ಟೆಂಬರ್ 30ರಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು.

Bar & Bench

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ 243 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಲು ಮತ್ತೆ ಮೂರು ತಿಂಗಳು ಕಾಲಾವಕಾಶ ಕೇಳಿದೆ.

ಬಿಬಿಎಂಪಿಯ 243 ವಾರ್ಡ್‌ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು ಸೆಪ್ಟೆಂಬರ್ 30ರಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಹೈಕೋರ್ಟ್‌ನ ಈ ಆದೇಶ ಪಾಲನೆಗೆ ನೀಡಲಾಗಿರುವ ಗಡುವು ವಿಸ್ತರಿಸಿ ಮೂರು ತಿಂಗಳ ಕಾಲಾವಧಿ ನೀಡಲು ಕೋರಿ ನಗರಾಭಿವೃದ್ಧಿ ಇಲಾಖೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ.

ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾ. ಭಕ್ತವತ್ಸಲ ಆಯೋಗ ಸಮಿತಿ ವರದಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ನಿರ್ದೇಶನಗಳ ಆಧಾರದಲ್ಲಿ ವರದಿಯನ್ನು ಪುನರ್ ಪರಿಶೀಲಿಸಿ ಪರಿಷ್ಕೃತ ವರದಿ ಸಲ್ಲಿಸಲು ನ್ಯಾ. ಭಕ್ತವತ್ಸಲ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಅದರಂತೆ, ಅಕ್ಟೋಬರ್‌ 31ಕ್ಕೆ ಪೂರಕ ವರದಿ ಸಲ್ಲಿಸಿರುವ ಆಯೋಗ, ಈ ಹಿಂದೆ ಸಲ್ಲಿಸಿದ್ದ ವರದಿ ಕಾನೂನು ಬದ್ಧವಾಗಿದ್ದು, ಬದಲಾವಣೆಯ ಅವಶ್ಯಕತೆ ಇಲ್ಲ ಎಂದು ಹೇಳಿತ್ತು.

ಹೀಗಾಗಿ, 243 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸಿದ ಬಳಿಕ ಹಿಂದುಳಿದ ವರ್ಗ ಎ ಮತ್ತು ಬಿ ಗೆ ಮೀಸಲಾತಿ ನಿಗದಿಪಡಿಸಲು ಇರುವ ವಿಧಾನವೇನು? ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ನಿರ್ದೇಶನದ ಪ್ರಕಾರ ರಾಜಕೀಯ ಮೀಸಲಾತಿಗೆ ಅರ್ಹರಿರುವ ಹಿಂದುಳಿದ ವರ್ಗಗಳ ವಿವರವಾದ ಪಟ್ಟಿಯನ್ನು ಸಲ್ಲಿಸುವಂತೆ ಹಾಗೂ ಪೂರಕ ವರದಿಯಲ್ಲಿ ಸಲ್ಲಿಸಲಾಗಿರುವ ಹಿಂದುಳಿದ ವರ್ಗಗಳ ಜನಸಂಖ್ಯೆಯ ವಾಸ್ತವ ದತ್ತಾಂಶದ ದೃಢೀಕರಣವೇನು ಇತ್ಯಾದಿ ಅಂಶಗಳನ್ನು ಪರಿಶೀಲಿಸುವಂತೆ ನವೆಂಬರ್ 17ರಂದು ಆಯೋಗಕ್ಕೆ ಪತ್ರ ಬರೆಯಲಾಗಿದೆ. ಇದನ್ನು ಪರಿಶೀಲಿಸಿ ಆದಷ್ಟು ಬೇಗ ಪ್ರತಿಕ್ರಿಯಿಸುವುದಾಗಿ ಆಯೋಗ ಹೇಳಿದೆ.

ಈ ಎಲ್ಲಾ ಬೆಳವಣಿಗಳ ಹಿನ್ನೆಲೆಯಲ್ಲಿ ಹೊಸದಾಗಿ ಮೀಸಲಾತಿ ನಿಗದಿಪಡಿಸಬೇಕೆ ಬೇಡವೇ ಎಂಬ ತೀರ್ಮಾನಕ್ಕೆ ಬರಲು ಆಯೋಗದ ನಿಲುವು ಮುಖ್ಯವಾಗಿದೆ. ಅದರ ನಂತರವಷ್ಟೇ ಅರ್ಹ ಹಿಂದುಳಿದ ವರ್ಗಗಳಿಗೆ ನ್ಯಾಯಸಮ್ಮತ ಮೀಸಲಾತಿ ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಲಿದೆ ಎಂದರು.

ರಾಜ್ಯ ಸರ್ಕಾರದ ಅಫಿಡವಿಟ್ ಪುರಸ್ಕರಿಸಿದರೆ ಯಾರಿಗೂ ತೊಂದರೆ ಅಥವಾ ಬಾಧೆ ಆಗುವುದಿಲ್ಲ. ಆದ್ದರಿಂದ, ಬಿಬಿಎಂಪಿಯ 243 ವಾರ್ಡ್‌ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು ಸೆಪ್ಟಂಬರ್ 30ರಂದು ನೀಡಿರುವ ಆದೇಶವನ್ನು ನವೆಂಬರ್ 30ರಿಂದ ಅನ್ವಯವಾಗುವಂತೆ ಮುಂದಿನ ಮೂರು ತಿಂಗಳಿಗೆ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.