ಬಿಬಿಎಂಪಿ ಚುನಾವಣೆ: ವಾರ್ಡ್‌ ಪುನರ್‌ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿನ ವ್ಯತ್ಯಾಸ ಮತ್ತು ಲೋಪಗಳನ್ನು ನಂತರ ಬರಲಿರುವ ಸರ್ಕಾರಗಳು ಸರಿಪಡಿಸಲಿವೆ ಎಂದು ಹೇಳಿ, ಅರ್ಜಿಗಳನ್ನು ವಜಾ ಮಾಡಿದ ನ್ಯಾಯಾಲಯ.
BBMP and Karnataka HC
BBMP and Karnataka HC
Published on

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳ ಪುನರ್‌ ವಿಂಗಡಣೆ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಶಾಸಕರಾದ ಸೌಮ್ಯ ರೆಡ್ಡಿ, ಜಮೀರ್ ಅಹ್ಮದ್ ಖಾನ್, ಎಂ ಸತೀಶ್‌ ರೆಡ್ಡಿ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ. ಸೆಪ್ಟೆಂಬರ್‌ 21ರಂದು ತೀರ್ಪಿನ ಪ್ರತಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಬಿಬಿಎಂಪಿಯ 243 ವಾರ್ಡ್‌ಗಳಿಗೆ ಹಾಲಿ ಮೀಸಲಾತಿ ನಿಗದಿ ಮಾಡಿರುವುದನ್ನು ಪುನರ್ ಪರಿಶೀಲನೆ ನಡೆಸಲು ಆದೇಶಿಸುವಂತೆ ಕೋರಿ ಈಜಿಪುರದ ಕೆ ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಕಳೆದ ವಿಚಾರಣೆಯಲ್ಲಿ ಅರ್ಜಿದಾರರು ಕೋರಿಕೆಯ ಹಿನ್ನೆಲೆಯಲ್ಲಿ ವಾರ್ಡ್‌ ಪುನರ್‌ ವಿಂಗಡಣೆಗೆ ಸಂಬಂಧಿಸಿದಂತೆ ಪೀಠವು ಕೆಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿತು. ಇದರಿಂದ ಸಂತೃಪ್ತಗೊಳ್ಳದ ಪೀಠವು ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿನ ವ್ಯತ್ಯಾಸ ಮತ್ತು ಲೋಪಗಳನ್ನು ನಂತರ ಬರಲಿರುವ ಸರ್ಕಾರಗಳು ಸರಿಪಡಿಸಲಿವೆ ಎಂದು ಹೇಳಿ, ಅರ್ಜಿಗಳನ್ನು ವಜಾ ಮಾಡಿತು.

ಚಾಮರಾಜಪೇಟೆ, ಜಯನಗರ, ಶಿವಾಜಿ ನಗರ ಮತ್ತಿತರ ಕಡೆ ವಿರೋಧ ಪಕ್ಷದ ಶಾಸಕರು ಇರುವ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ತಗ್ಗಿಸಲಾಗಿದೆ. ಕೆಲವು ವಾರ್ಡ್‌ಗಳ ಮತದಾರರ ಸಂಖ್ಯೆ 34 ಸಾವಿರ ಇದ್ದರೆ, ಕೆಲವು ವಾರ್ಡ್‌ಗಳಲ್ಲಿ 39 ಸಾವಿರ ಮತದಾರರ ಸಂಖ್ಯೆ. ಇನ್ನು ಕೆಲವು ಕಡೆ ವಾರ್ಡ್‌ಗಳನ್ನು ಎರಡು ವಿಧಾನಸಭಾ ಕ್ಷೇತ್ರಗಳ ನಡುವೆ ವಿಭಜಿಸಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು. ಮತ್ತೊಂದು ಕಡೆ ಆಡಳಿತ ಪಕ್ಷದ ಬೊಮ್ಮನಹಳ್ಳಿ ವಿಧಾನಸಭಾ ಕೇತ್ರದ ಶಾಸಕ ಎಂ ಸತೀಶ್‌ ರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಬರುವ ಕೆಲವು ವಾರ್ಡ್‌ಗಳನ್ನು ವಿಭಜಿಸಿ, ಪಕ್ಕದ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ಜೊತೆ ಸೇರ್ಪಡೆಗೊಳಿಸಲಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

"ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಹೆಚ್ಚಳದ ಆಧಾರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್‌ಗಳನ್ನು ರಚಿಸಲಾಗಿದೆ. 2011ರ ಜನಗಣತಿ ಆಧರಿಸಿ ಪ್ರತಿ ವಾರ್ಡ್‌ಗೆ ಜನಸಂಖ್ಯೆ ನಿಗದಿಪಡಿಸಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವಾರ್ಡ್ ವಿಂಗಡಣೆಯಲ್ಲಿ ಶೇ.10ರಷ್ಟು ಜನಸಂಖ್ಯೆ ಏರಿಳಿತದ ಅನುಪಾತ ಅನುಸರಿಸಲಾಗಿದೆ. ಅದರಂತೆ, 34 ಸಾವಿರದಿಂದ 39 ಸಾವಿರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ. ಕೆಲವು ಕಡೆ ಭೌಗೋಳಿಕ ವಿಸ್ತೀರ್ಣ ಹೆಚ್ಚಿದ್ದು, ಜನಸಂಖ್ಯೆ ಕಡಿಮೆ ಇದೆ. ಇನ್ನೂ ಕೆಲವಡೆ ಭೌಗೋಳಿಕ ವಿಸ್ತೀರ್ಣ ದೊಡ್ಡದಾಗಿದ್ದು, ಜನಸಂಖ್ಯೆ ಕಡಿಮೆ. ವಾರ್ಡ್‌ಗಳ ಮರುವಿಂಗಡಣೆಗೆ 2011ರ ಜನಸಂಖ್ಯೆಯನ್ನು ಆಧರಿಸಲಾಗಿದೆ” ಎಂದು ವಾದಿಸಿದ್ದರು.

ವಾರ್ಡ್ ಪುನರ್‌ ವಿಂಗಡಣೆ ವೇಳೆ ಜನಸಂಖ್ಯೆ ಪ್ರಮಾಣವನ್ನು ಪರಿಗಣಿಸುವಲ್ಲಿ ಸರ್ಕಾರ ತಾರತಮ್ಯ ಎಸಗಿದೆ. ಈ ಮೂಲಕ ಬಿಬಿಎಂಪಿ ಕಾಯಿದೆ-2020ರ ಸೆಕ್ಷನ್‌ 7 ಅನ್ನು ಉಲ್ಲಂಘಿಸಲಾಗಿದೆ. ವಾರ್ಡ್‌ ಪುನರ್‌ ವಿಂಗಡಣೆಯಲ್ಲಿ ರಾಜಕೀಯ ದುರುದ್ದೇಶವಿದೆ ಎಂಬ ಅರ್ಜಿದಾರರ ಆರೋಪವನ್ನು ನಿರಾಕರಿಸಿದ್ದರು.

“ಇಲ್ಲಿ ಪಕ್ಷ ಅಥವಾ ರಾಜಕೀಯ ಎಂಬುದು ಅಪ್ರಸ್ತುತ. ಅರ್ಜಿದಾರರು ಆರೋಪಿಸಿರುವಂತೆ ಅವರ ಪ್ರತಿಪಕ್ಷದ ಶಾಸಕರು ಪ್ರತಿನಿಧಿಸುತ್ತಿರುವ ಚಾಮರಾಜಪೇಟೆ, ಶಿವಾಜಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಿದ್ದರೆ ಅದೇ ಪಕ್ಷದವರು ಪ್ರತಿನಿಧಿಸುತ್ತಿರುವ ಬ್ಯಾಟರಾಯನಪುರ, ಬಿಟಿಎಂ ಲೇಔಟ್, ಸರ್ವಜ್ಞ ನಗರ, ದಾಸರಹಳ್ಳಿ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ” ಎಂದು ಪೀಠದ ಗಮಸೆಳೆದಿದ್ದರು.

Also Read
ಬಿಬಿಎಂಪಿ ವಾರ್ಡ್ ಪುನರ್‌ ವಿಂಗಡಣೆ: ಸುಪ್ರೀಂ ತೀರ್ಪಿಗೆ ವಿರುದ್ಧವಾದ ಆದೇಶಗಳಿದ್ದರೆ ಸಲ್ಲಿಸಲು ಸೂಚಿಸಿದ ಹೈಕೋರ್ಟ್‌

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಅರ್ಜಿದಾರರ ಪರ ವಕೀಲರು ಮತ್ತೆ ಮತ್ತೆ ತಕರಾರು ತೆಗೆಯುವುದು ಸಮಂಜಸವಲ್ಲ. ಈಗ ನಿಗದಿಪಡಿಸಲಾಗಿರುವ ಕ್ಷೇತ್ರ ಪುನರ್‌ ವಿಂಗಡಣೆಯ ಅನುಸಾರವೇ ಚುನಾವಣೆ ನಡೆಸಬೇಕು. ಏನಾದರೂ ಆಕ್ಷೇಪಣೆ ಅಥವಾ ಲೋಪದೋಷಗಳು ಇದ್ದಲ್ಲಿ ಅದನ್ನು ಮುಂದಿನ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬಹುದು. ಚುನಾಯಿತ ಪ್ರತಿನಿಧಿಗಳಿಲ್ಲದೆ ಪಾಲಿಕೆಯನ್ನು ಕಾರ್ಯಾಂಗದ ಕೈಯಲ್ಲಿ ನಡೆಸಿಕೊಂಡು ಹೋಗುವುದು ಸೂಕ್ತವಲ್ಲ” ಎಂದು ವಾದ ಮಂಡಿಸಿದ್ದರು.

Kannada Bar & Bench
kannada.barandbench.com