<div class="paragraphs"><p>BBMP and Karnataka HC</p></div>

BBMP and Karnataka HC

 
ಸುದ್ದಿಗಳು

ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ಎಂಜಿನಿಯರ್‌ಗಳಿಂದ ಉದ್ದೇಶಪೂರ್ವಕ ಸಮಸ್ಯೆ: ಹೈಕೋರ್ಟ್‌ ಗರಂ

Bar & Bench

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಎಂಜಿನಿಯರ್‌ಗಳು ಉದ್ದೇಶಪೂರ್ವಕವಾಗಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಅವರನ್ನು ಅಲ್ಲಿಂದ ತೆಗೆದು, ಸಮರ್ಥ ಎಂಜಿನಿಯರ್‌ಗಳನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸುತ್ತೇವೆ ಎಂದು ಶನಿವಾರ ಕರ್ನಾಟಕ ಹೈಕೋರ್ಟ್‌ ಕಿಡಿಕಾರಿತು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಎಂಜಿನಿಯರ್‌ಗಳ ವಿರುದ್ಧ ನೀವು (ಬಿಬಿಎಂಪಿ ಆಯುಕ್ತ) ಕ್ರಮಕೈಗೊಳ್ಳಬೇಕು. ರಸ್ತೆ ಗುಂಡಿ ಮುಚ್ಚುವು ವಿಚಾರದಲ್ಲಿ ಬಿಕ್ಕಟ್ಟು ಮುಂದುವರಿಯುವುದು ನಮಗೆ ಇಷ್ಟವಿಲ್ಲ. ರಸ್ತೆ ರಿಪೇರಿ ಮತ್ತು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದೆ. ಹಿಂದಿನ ರೀತಿಯಲ್ಲಿ ಹಾಟ್‌ ಮಿಕ್ಸ್‌ ಆನ್‌ ವ್ಹೀಲ್ಸ್‌ ತಂತ್ರಜ್ಞಾನದ ಮೂಲಕ ರಸ್ತೆ ಗುಂಡಿ ಮುಚ್ಚುವುದನ್ನು ಮಾಡುತ್ತಿರುವುದೇಕೆ? ಸ್ವಯಂಚಾಲಿತ ರಸ್ತೆ ಗುಂಡಿ ಮುಚ್ಚುವ ತಂತ್ರಜ್ಞಾನವನ್ನು ಏಕೆ ಬಳಸುತ್ತಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ” ಎಂದು ಪೀಠವು ಹೇಳಿತು.

“ಬಿಬಿಎಂಪಿಯು ರಸ್ತೆ ಗುಂಡಿ ಮುಚ್ಚಲು ಸುಧಾರಿತ ತಂತ್ರಜ್ಞಾನ ಬಳಸದೇ ಇರುವುದರಿಂದ ಸಮಸ್ಯೆ ನಿರಂತರವಾಗಿದ್ದು, ಜನರು ರಸ್ತೆಯಲ್ಲಿ ಸಾಯುತ್ತಿದ್ದಾರೆ” ಎಂದು ಪೀಠವು ತೀವ್ರ ಅಸಮಾಧಾನ ಹೊರಹಾಕಿತು.

“ನಗರದ ಪ್ರಮುಖ ರಸ್ತೆಗಳ 182 ಕಿ ಮೀನಲ್ಲಿ ಗುಂಡಿ ಮುಚ್ಚಲು ಮಾತ್ರ ಸ್ವಯಂಚಾಲಿತ ಗುಂಡಿ ಮುಚ್ಚುವ ಯಂತ್ರ ತಂತ್ರಜ್ಞಾನ ಬಳಸಲಾಗುತ್ತಿದ್ದು, ಉಳಿದ ಕಡೆ ಹಾಟ್‌ ಮಿಕ್ಸ್‌ ಆನ್‌ ವ್ಹೀಲ್ಸ್‌ ತಂತ್ರಜ್ಞಾನ ಬಳಸುವುದು ಸರಿಯಲ್ಲ. ಸ್ವಯಂಚಾಲಿತ ರಸ್ತೆ ಗುಂಡಿ ಮುಚ್ಚುವ ಯಂತ್ರವನ್ನು ನೀವೇಕೆ ಖರೀದಿಸಬಾರದು” ಎಂದು ಪೀಠವು ಪ್ರಶ್ನಿಸಿತು. ಈ ಕುರಿತು ಸರ್ಕಾರದ ಜೊತೆ ಚರ್ಚಿಸಿ ನಿರ್ಧರಿಸಬೇಕಿದೆ ಎಂದು ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಹೇಳಿದರು.

ಸುಧಾರಿತ ತಂತ್ರಜ್ಞಾನ ಬಳಕೆಯ ಮೂಲಕ ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಸಂಬಂಧಿಸಿದಂತೆ ಮಾರ್ಚ್‌ 3ರಂದು ಟೆಂಡರ್‌ ಕರೆದಿದ್ದು, ಒಬ್ಬೇ ಒಬ್ಬರು ಭಾಗವಹಿಸಿಲ್ಲ. ಮತ್ತೊಮ್ಮೆ ಆನ್‌ಲೈನ್‌ ಮೂಲಕ ಟೆಂಡರ್‌ ಕರೆದಿದ್ದೇವೆ ಎಂದು ಶ್ರೀನಿಧಿ ಹೇಳಿದರು. ಇದರಿಂದ ಅಸಮಾಧಾನಗೊಂಡ ಪೀಠವು “ಟೆಂಡರ್‌ ಕರೆದಿದ್ದು, ಯಾರೂ ಭಾಗವಹಿಸಿಲ್ಲ ಎಂದು ಹೇಳುವ ಮೂಲಕ ಕಣ್ಣೊರೆಸುವ ಯತ್ನ ಮಾಡಬೇಡಿ. ಟೆಂಡರ್‌ನಲ್ಲಿ ಭಾಗವಹಿಸಿಲ್ಲ ಎಂಬುದು ಕಣ್ಣೊರೆಸುವ ತಂತ್ರ” ಎಂದರು.

“ನೀವು ನಿರ್ಮಿಸಿರುವ ಕೆಲವು ರಸ್ತೆಗಳ ಬಗ್ಗೆ ತಿಳಿಸಿ, ನಾವು ತಾಂತ್ರಿಕ ಸಮಿತಿಯ ಮೂಲಕ ಅವುಗಳ ಗುಣಮಟ್ಟ ಪರಿಶೀಲಿಸಲು ಸೂಚಿಸುತ್ತೇವೆ” ಎಂದು ಹೇಳಿತು. ಪ್ರಧಾನ ಎಂಜಿನಿಯರ್‌ ಎಸ್‌ ಪ್ರಭಾಕರ್‌ ಅವರು ತಾಂತ್ರಿಕ ಹಿನ್ನೆಲೆ ಹೊಂದಿರುವುದರಿಂದ ಅವರು ಭಾಗಿಯಾದರೆ ಉತ್ತಮ ಎಂದು ಭಾವಿಸಿದ್ದೆವು. ಆದರೆ, ಅವರೂ ಪ್ರಯೋಜನವಿಲ್ಲ" ಎಂದು ಪೀಠ ಹೇಳಿತು.

ಅಂತಿಮವಾಗಿ ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸುಧಾರಿತ ತಂತ್ರಜ್ಞಾನ ಬಳಸಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಹೊಸ ಕಾರ್ಯ ವಿಧಾನ ಕುರಿತ ಅಫಿಡವಿಟ್‌ ಸಲ್ಲಿಸಲು ಒಂದು ವಾರ ಬಿಬಿಎಂಪಿಗೆ ಕಾಲಾವಕಾಶ ನೀಡಿರುವ ಪೀಠವು ವಿಚಾರಣೆಯನ್ನು ಮಾರ್ಚ್‌ 15ಕ್ಕೆ ಮುಂದೂಡಿದೆ.

ದಾಸರಹಳ್ಳಿ ಸೌಲಭ್ಯ ಕಲ್ಪಿಸಲು ನಿರ್ದೇಶನ

ಬೆಂಗಳೂರಿನ ದಾಸರಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಮೂಲ ಸೌಲಭ್ಯ ಕಲ್ಪಿಸುವ ಕೆಲಸಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಮುಗಿಸುವ ಅಗತ್ಯವಿದೆ. ಇದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರು ಹಿರಿಯ ಅಧಿಕಾರಿಗೆ ಜವಾಬ್ದಾರಿ ವಹಿಸಿಬೇಕು. ಇಲ್ಲಿಯೂ ಕಾರ್ಯ ವಿಧಾನ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಅಫಿಡವಿಟ್‌ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದ್ದು, ವಿಚಾರಣೆಯನ್ನು ಮಾರ್ಚ್‌ 22ಕ್ಕೆ ಮುಂದೂಡಿದೆ. ಅರ್ಜಿದಾರರ ಪರವಾಗಿ ವಕೀಲ ಜಿ ಆರ್‌ ಮೋಹನ್‌ ಹಾಜರಿದ್ದರು.